ನ್ಯಾಯಾಂಗ ವ್ಯವಸ್ಥೆಯಲ್ಲಿರುವವರಿಗೆ ಸಮಾಜದ ಕಾಳಜಿ ಅಗತ್ಯ: ನ್ಯಾ.ರಾಘವೇಂದ್ರಸಿಂಗ್ ಚೌಹಾಣ್

Update: 2018-11-16 16:49 GMT

ಬೆಂಗಳೂರು, ನ.16: ರಾಜ್ಯ ಹೈಕೋರ್ಟ್‌ನಲ್ಲಿ ದಕ್ಷ ನ್ಯಾಯಮೂರ್ತಿಗಳು ಎಂದೇ ಹೆಸರಾಗಿದ್ದ ನ್ಯಾ.ರಾಘವೇಂದ್ರ ಸಿಂಗ್ ಚೌಹಾಣ್ ಹಾಗೂ ನ್ಯಾ.ವಿನೀತ್ ಕೊಠಾರಿ ಅವರನ್ನು ಅನುಕ್ರಮವಾಗಿ ಹೈದರಾಬಾದ್ ಮತ್ತು ಮದ್ರಾಸ್ ಹೈಕೋರ್ಟ್‌ಗಳಿಗೆ ವರ್ಗಾವಣೆ ಮಾಡಲಾಗಿದೆ.

ಈ ಹಿನ್ನೆಲೆಯಲ್ಲಿ ಇಬ್ಬರೂ ನ್ಯಾಯಮೂರ್ತಿಗಳಿಗೆ ಬೆಂಗಳೂರು ವಕೀಲರ ಸಂಘ ಹೈಕೋರ್ಟ್‌ನಲ್ಲಿ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನ್ಯಾ. ರಾಘವೇಂದ್ರ ಸಿಂಗ್ ಚೌಹಾಣ್, ಎಲ್ಲರಿಗಾಗಿ ಒಬ್ಬರು ಮತ್ತು ಒಬ್ಬರಿಗಾಗಿ ಎಲ್ಲರು ಎಂಬ ತತ್ವವನ್ನು ಅಳವಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ನಿರೀಕ್ಷಿತ ಸುಧಾರಣೆ ಬಯಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಜತೆಗೆ, ನ್ಯಾಯಾಂಗ ವ್ಯವಸ್ಥೆಯಲ್ಲಿ ಕೆಲಸ ಮಾಡುವವರಿಗೆ ಸಮಾಜದ ಬಗ್ಗೆ ಕಾಳಜಿ ಇರಬೇಕು. ಬಾಲ್ಯದಲ್ಲಿ ಪಂಚತಂತ್ರ ಕಥೆಗಳನ್ನು ಓದುತ್ತಿದ್ದೆ. ಅದರ ಪ್ರಭಾವದಿಂದಾಗಿಯೇ ಅಮೆರಿಕಾದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ನಂತರ ದೇಶಕ್ಕೆ ಹಿಂದಿರುಗಿ ಕಾನೂನು ಪದವಿ ಪಡೆದು ವಕೀಲಿ ವೃತ್ತಿ ಆರಂಭಿಸಿದೆ. ನಂತರ ನ್ಯಾಯಮೂರ್ತಿಯಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಮೂರೂವರೆ ವರ್ಷ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಕೆಲಸ ಮಾಡಿರುವ ನನಗೀಗ ಕನ್ನಡಿಗನೆಂಬ ಹೆಮ್ಮೆ ಇದೆ ಎಂದರು.

ಇನ್ನು ಮದ್ರಾಸ್ ಹೈಕೋರ್ಟ್‌ಗೆ ವರ್ಗಾವಣೆಗೊಂಡಿರುವ ನ್ಯಾ. ವಿನೀತ್ ಕೊಠಾರಿ ಮಾತನಾಡಿ ಬಿಕಾಂ ನಂತರ ಸಿಎ ಮಾಡಿ ಚಾರ್ಟೆಡ್ ಅಕೌಂಟೆಂಟ್ ಆಗಿದ್ದ ನನಗೆ ವಕೀಲಿ ವೃತ್ತಿಯ ಕಡೆಗೆ ಮನಸ್ಸಾಯಿತು. ಅದರಂತೆ ಕಾನೂನು ಪದವಿ ಪಡೆದು ನ್ಯಾಯಾಂಗ ವ್ಯವಸ್ಥೆಗೆ ಬಂದೆ. ನ್ಯಾಯಮೂರ್ತಿಗಳು ಒಂದು ರೀತಿ ಕಂಪ್ಯೂಟರ್ ಇದ್ದಂತೆ. ವಕೀಲರ ವಾದದ ಆಧಾರದ ಮೇಲೆ ಮಾತ್ರ ತೀರ್ಪು ನೀಡಲು ಸಾಧ್ಯ. ಹೀಗಾಗಿ ವಕೀಲರು ಸಮಾಜದ ಕಡೆಗೆ ಹೆಚ್ಚಿನ ಕಾಳಜಿ ವಹಿಸುವ ಅಗತ್ಯವಿದೆ. ನ್ಯಾಯಮೂರ್ತಿ ಹುದ್ದೆ ಸೀಮಿತ ಅವಧಿ ಇರುತ್ತದೆ, ಹೀಗಾಗಿ ನಾನು ಮಾನಸಿಕವಾಗಿ ಎಂದಿಗೂ ವಕೀಲನಾಗಿಯೇ ಇರುವೆ ಎಂದರು.

ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಅವರು ವರ್ಗಾವಣೆಗೊಂಡಿರುವ ನ್ಯಾಯಮೂರ್ತಿಗಳನ್ನು ಉದ್ದೇಶಿಸಿ, ಇಬ್ಬರೂ ಕಲಾವಿದರೆ. ನ್ಯಾ. ಚೌಹಾಣ್ ಓರ್ವ ಅತ್ಯುತ್ತಮ ಫೋಟೋಗ್ರಾಫರ್ ಅದೇ ರೀತಿ ಒಳ್ಳೆಯ ಚಿತ್ರ ಕಲಾವಿದ. ಇನ್ನು ನ್ಯಾ. ಕೊಠಾರಿ ಅವರು ಕೊಳಲು ನುಡಿಸುವುದರಲ್ಲಿ ಪಾಂಡಿತ್ಯ ಹೊಂದಿರುವ ಜತೆಗೆ ಉತ್ತಮ ಟೆನ್ನಿಸಿ ಕ್ರೀಡಾಪಟು ಆಗಿದ್ದಾರೆ. ಅವರಿಬ್ಬರೂ ಎಲ್ಲಿಯೇ ಕೆಲಸ ಮಾಡಿದರೂ ಅವರಿಂದ ಸಮಾಜಕ್ಕೆ ಕೊಡುಗೆ ಸಿಗುತ್ತದೆ. ಹೀಗಾಗಿ ಇಬ್ಬರಿಗೂ ಶುಭವಾಗಲಿ ಎಂದರು.

ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ ರಂಗನಾಥ್ ಅವರು ವರ್ಗಾವಣೆಯಾಗಿರುವ ನ್ಯಾಯಮೂರ್ತಿಗಳಿಗೆ ಸನ್ಮಾನಿಸಿ ಮಾತನಾಡಿ, ದಕ್ಷ ನ್ಯಾಯಮೂರ್ತಿಗಳ ವರ್ಗಾವಣೆಯಿಂದಾಗಿ ರಾಜ್ಯ ಹೈಕೋರ್ಟ್‌ಗೆ ಒಂದೆಡೆ ನಷ್ಟವಾದರೆ, ಹೈದರಾಬಾದ್ ಮತ್ತು ಮದ್ರಾಸ್ ಹೈಕೋರ್ಟ್‌ಗಳಿಗೆ ಲಾಭವಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ದಕ್ಷತೆಗೆ ಹೆಸರಾಗಿದ್ದ ನ್ಯಾಯಮೂರ್ತಿಗಳು: ರಾಜ್ಯ ಹೈಕೋರ್ಟ್‌ನಿಂದ ವರ್ಗಾವಣೆಯಾದ ಇಬ್ಬರು ನ್ಯಾಯಮೂರ್ತಿಗಳು ಅವರದೇ ಸಾಮಾಜಿಕ ಕಾಳಜಿಯಿಂದಾಗಿ ವಕೀಲ ಸಮುದಾಯದಲ್ಲಿ ದಕ್ಷ ನ್ಯಾಯಮೂರ್ತಿಗಳೆಂದೇ ಹೆಸರಾಗಿದ್ದರು. ನ್ಯಾ. ರಾಘವೇಂದ್ರ ಸಿಂಗ್ ಚೌಹಾಣ್ ಅವರು ಸವಿಸ್ತಾರ ವಿಚಾರಣೆ ಹಾಗೂ ಪ್ರೌಢ ತೀರ್ಪುಗಳನ್ನು ನೀಡುವಲ್ಲಿ ಗುರುತಿಸಿಕೊಂಡಿದ್ದರು. ಇವರಿಗಿಂತ ಭಿನ್ನವಾಗಿದ್ದ ನ್ಯಾ. ವಿನೀತ್ ಕೊಠಾರಿ ಅವರು ಯಾವುದೇ ಪ್ರಕರಣಗಳನ್ನು ಹೆಚ್ಚು ಎಳೆದಾಡದೆ ಶೀಘ್ರವಾಗಿ ಇತ್ಯರ್ಥಪಡಿಸುವಲ್ಲಿ ಗಮನ ಸೆಳೆದಿದ್ದರು. ಇದೀಗ ಇವರ ವರ್ಗಾವಣೆಯಿಂದಾಗಿ ಹೈಕೋರ್ಟ್‌ನಲ್ಲಿ ಅನುಭವಸ್ಥ ನ್ಯಾಯಮೂರ್ತಿಗಳ ಕೊರತೆ ಎದುರಾದಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News