ಭಾರತದ ಸಕ್ಕರೆ ಸಬ್ಸಿಡಿಯಿಂದ ನಮ್ಮ ರೈತರಿಗೆ ಅನ್ಯಾಯ

Update: 2018-11-16 16:56 GMT

ಸಿಡ್ನಿ, ನ. 16: ಸಕ್ಕರೆ ಉದ್ಯಮದಲ್ಲಿ ಭಾರತ ನೀಡುತ್ತಿರುವ ಸಬ್ಸಿಡಿಯ ವಿರುದ್ಧ ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲ್ಯೂಟಿಒ)ಗೆ ದೂರು ನೀಡುವುದಾಗಿ ಆಸ್ಟ್ರೇಲಿಯ ಶುಕ್ರವಾರ ಘೋಷಿಸಿದೆ.

ಭಾರತ ನೀಡುತ್ತಿರುವ ಸಬ್ಸಿಡಿಯಿಂದಾಗಿ ಜಾಗತಿಕ ಸಕ್ಕರೆ ಬೆಲೆ ಗಣನೀಯವಾಗಿ ಇಳಿದಿದೆ ಹಾಗೂ ಇದು ತನ್ನ ಕಬ್ಬು ಬೆಳೆಗಾರರ ಮೇಲೆ ದುಷ್ಪರಿಣಾಮವನ್ನು ಬೀರಿದೆ ಎಂದು ಆಸ್ಟ್ರೇಲಿಯದ ವಾಣಿಜ್ಯ ಸಚಿವ ಸೈಮನ್ ಬರ್ಮಿಂಗ್‌ಹ್ಯಾಮ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಜಗತ್ತಿನ ಎರಡನೇ ಅತಿ ದೊಡ್ಡ ಸಕ್ಕರೆ ಉತ್ಪಾದಕನಾಗಿರುವ ಭಾರತ ತನ್ನ ಕಬ್ಬು ಬೆಳೆಗಾರರಿಗೆ ಸಬ್ಸಿಡಿ ನೀಡುತ್ತಿದೆ ಎಂದು ಅದು ಹೇಳಿದೆ. ಕಳೆದ ಋತುವಿನಲ್ಲಿ ಭಾರತ ದಾಖಲೆ ಪ್ರಮಾಣದಲ್ಲಿ ಕಬ್ಬು ಬೆಳೆದಿದೆ.

‘‘ಸಮಾನ ನೆಲೆಗಟ್ಟಿನಲ್ಲಿ ಸ್ಪರ್ಧಿಸುವ ನಮ್ಮ ಸಕ್ಕರೆ ಉದ್ಯಮದ ಹಕ್ಕನ್ನು ನಾವು ಬೆಂಬಲಿಸುತ್ತೇವೆ. ನಮ್ಮ ರೈತರ ಹಿತಾಸಕ್ತಿಗಳನ್ನು ಕಾಪಾಡಲು ಜಾಗತಿಕ ವ್ಯಾಪಾರ ನಿಯಮಗಳನ್ನು ನಾವು ಬಳಸಿಕೊಳ್ಳುತ್ತೇವೆ’’ ಎಂದು ಅವರು ನುಡಿದರು.

ಜಗತ್ತಿನ ಮೂರನೇ ಅತಿ ದೊಡ್ಡ ಸಕ್ಕರೆ ರಫ್ತುದಾರನಾಗಿರುವ ಆಸ್ಟ್ರೇಲಿಯವು ಭಾರತ ಸರಕಾರದೊಂದಿಗೆ ಉನ್ನತ ಮಟ್ಟಗಳಲ್ಲಿ ತನ್ನ ಕಳವಳವನ್ನು ವ್ಯಕ್ತಪಡಿಸಿದೆ ಎಂದು ಸಚಿವರು ಹೇಳಿದರು.

ಆದರೆ, ನಮ್ಮ ಕಳವಳವನ್ನು ಪರಿಹರಿಸಲಾಗಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News