ಬೆಂಗಳೂರಿನ 3 ವಿವಿಗಳಲ್ಲಿ ಒಂದು ವಿಜ್ಞಾನ-ಸಂಶೋಧನೆಗೆ ಮೀಸಲಾಗಲಿ: ಡಾ.ಪರಮೇಶ್ವರ್

Update: 2018-11-16 17:08 GMT

ಬೆಂಗಳೂರು, ನ.16: ಮೂರು ವಿಶ್ವವಿದ್ಯಾಲಯಗಳಾಗಿ ವಿಭಜನೆಗೊಂಡಿರುವ ಬೆಂಗಳೂರು ವಿವಿಯಲ್ಲಿ ಒಂದನ್ನು ವಿಜ್ಞಾನ ಮತ್ತು ಸಂಶೋಧನಾ ವಿವಿಯಾಗಿ ಮಾಡಬೇಕಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.

ಶುಕ್ರವಾರ ಸೆಂಟ್ರಲ್ ಕಾಲೇಜಿನ ಸರ್.ಸಿ.ವಿ.ರಾಮನ್ ಸಭಾಂಗಣದಲ್ಲಿ ಆಯೋಜಿಸಿದ್ದ ನೊಬೆಲ್ ಪ್ರಶಸ್ತಿ ಪರಿಚಯ ಮಾಲಿಕೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರು ದೇಶದಲ್ಲೇ ಅತಿ ದೊಡ್ಡ ವಿವಿಯಾಗಿ ಹೊರಹೊಮ್ಮಿದ್ದರಿಂದ ಮೂರು ವಿವಿಯಾಗಿ ವಿಭಜನೆ ಮಾಡುವ ಕಾರ್ಯ ನಡೆಯುತ್ತಿದೆ. ಇದರಲ್ಲಿ ಒಂದು ವಿವಿಯನ್ನು ವಿಜ್ಞಾನ ಹಾಗೂ ಸಂಶೋಧನೆಗಾಗಿಯೇ ಮೀಸಲಿಟ್ಟರೆ ವಿಜ್ಞಾನ ಕ್ಷೇತ್ರಕ್ಕೆ ಬೆಂಗಳೂರು ವಿವಿ ಕೊಡುಗೆ ಅಪಾರವಾಗಲಿದೆ ಎಂದು ಆಶಿಸಿದರು.

ಬೆಂಗಳೂರಿನಲ್ಲಿ ಟ್ರಾಫಿಕ್, ಮಾಲಿನ್ಯ, ರಸ್ತೆ ಗುಂಡಿ, ಕುಡಿಯುವ ನೀರು ಸೇರಿದಂತೆ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದೇವೆ. ಈ ಸಮಸ್ಯೆಗಳ ಪರಿಹಾರಕ್ಕಾಗಿ ಮತ್ತಾವುದೋ ದೇಶದ ವಿಶ್ವವಿದ್ಯಾಲಯದತ್ತ ನಮ್ಮ ಸರಕಾರ ಹೋಗಲ್ಲ. ಈ ಎಲ್ಲ ಸಮಸ್ಯೆಗೆ ಬೆಂಗಳೂರು ವಿವಿ ಮಾಲಿಕೆಯಲ್ಲಿಯೇ ಪರಿಹಾರ ಒದಗಬಹುದು ಎಂಬ ನಿರೀಕ್ಷೆ ಹೊಂದಿದ್ದೇನೆ. ಈ ದೆಸೆಯಲ್ಲಿ ವಿವಿಗಳು ಸಮಾಜದ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಹೇಳಿದರು.

ಇಂದಿನ ಕಾಲಮಾನದಲ್ಲಿ ಸ್ಪರ್ಧಾತ್ಮಕ ಶಿಕ್ಷಣ ಏರ್ಪಟ್ಟಿದೆ. ಕೈಗಾರಿಕೋದ್ಯಮ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ. ಈ ಉದ್ಯಮಕ್ಕೆ ಯಾವ ರೀತಿಯ ಶಿಕ್ಷಣ ಬೇಕೆಂದು ಶಿಕ್ಷಣ ಸಂಸ್ಥೆಗಳು ಅರಿತು, ಈ ಎರಡರ ನಡುವೆ ಸೇತುವೆ ಬೆಸೆಯಬೇಕೆಂದು ಎಂದು ಅವರು ಅಭಿಪ್ರಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News