ರಾಜಕಾರಣಿಗಳ ಚುನಾವಣಾ ತಂತ್ರಗಳಿಗೆ ದೇಶ ಬಲಿಯಾಗದಿರಲಿ

Update: 2018-11-17 04:04 GMT

 ರಫೇಲ್ ಹಗರಣದ ಉರುಳು ಪ್ರಧಾನಿ ನರೇಂದ್ರ ಮೋದಿಯ ಸುತ್ತ ಬಿಗಿಯತೊಡಗಿದೆ. ಈ ಬಗ್ಗೆ ಗಂಭೀರವಾದ ತನಿಖೆ ನಡೆದರೆ ಸರಕಾರ ಈ ಒಪ್ಪಂದ ವನ್ನು ರದ್ದು ಮಾಡಬೇಕು ಇಲ್ಲವಾದರೆ ಪ್ರಧಾನಿ ಮೋದಿಯವರೇ ಸ್ವತ: ವಿಚಾರಣೆ ಎದುರಿಸಬೇಕು ಎಂಬಂಥ ಸ್ಥಿತಿ ನಿರ್ಮಾಣವಾಗಿದೆ, ರಫೇಲ್ ಎರಡು ಸರಕಾರಗಳ ನಡುವಿನ ಒಪ್ಪಂದ ಎಂಬ ಕಟ್ಟುಕಥೆಯನ್ನು ಮೋದಿ ಸರಕಾರ ಹೇಳುತ್ತಲೇ ಬಂದಿದೆ. ಆದರೆ ಫ್ರಾನ್ಸ್ ಸರಕಾರದ ಖಾತರಿ ಇದಕ್ಕಿಲ್ಲ. ಖಾಸಗಿ ಸಂಸ್ಥೆಗಳ ನಡುವಿನ ವ್ಯವಹಾರ ಎರಡು ಸರಕಾರಗಳ ನಡುವಿನ ಒಪ್ಪಂದ ಹೇಗಾಗುತ್ತದೆ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಈ ಖರೀದಿ ಒಪ್ಪಂದಕ್ಕೆ ಸಹಿ ಹಾಕುವ ಆತುರವನ್ನು ಪ್ರಧಾನಿ ಮೋದಿ ಯಾಕೆ ತೋರಿಸಿದರೋ ಗೊತ್ತಿಲ್ಲ. ರಫೇಲ್ ಮಾತ್ರವಲ್ಲ ಇದರೊಂದಿಗೆ ದೇಶದ ಆರ್ಥಿಕ ಪರಿಸ್ಥಿತಿಯೂ ಬಿಗಡಾಯಿಸಿದೆ. ಬೆಲೆ ಏರಿಕೆಯಿಂದ ಹಣದುಬ್ಬರ ನಿಯಂತ್ರಣ ತಪ್ಪಿದೆ.

ರಿಸರ್ವ್ ಬ್ಯಾಂಕ್ ಮತ್ತು ಹಣಕಾಸು ಸಚಿವಾಲಯದ ನಡುವಿನ ಕಿತ್ತಾಟ ಬೀದಿಗೆ ಬಂದಿದೆ. ಇಂಥ ಸನ್ನಿವೇಶದಲ್ಲಿ ಸರಕಾರವನ್ನು ಬಿಕ್ಕಟ್ಟಿನಿಂದ ಪಾರು ಮಾಡಲು ಕೋಮುವಾದಿ ಅಜೆಂಡಾದೊಂದಿಗೆ ಆರೆಸ್ಸೆಸ್ ಪ್ರವೇಶ ಮಾಡಿದೆ. ಉತ್ತರ ಭಾರತದಲ್ಲಿ ಅಯೋಧ್ಯೆ ವಿವಾದವನ್ನು ಮುಂದೆ ಮಾಡಿ ಕೋಮು ಭಾವನೆ ಕೆರಳಿಸಲು 1992ರ ಮಾದರಿ ಹೋರಾಟ ನಡೆಸಲು ಸಂಘ ಪರಿವಾರ ಮುಂದಾಗಿದೆ. ಅಯೋಧ್ಯೆ ವಿವಾದವನ್ನು ಸುಪ್ರೀಂ ಕೋರ್ಟ್ ಆದ್ಯತೆಯ ಮೇಲೆ ವಿಚಾರಣೆಗೆ ಕೈಗೆತ್ತಿಕೊಂಡು ಹಿಂದೂಗಳ ಭಾವನೆಗಳನ್ನು ಗೌರವಿಸಿ ಮಂದಿರ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕೆಂದು ದೇಶದ ಸರ್ವೋಚ್ಚ ನ್ಯಾಯಾಲಯಕ್ಕೆ ಶರತ್ತು ವಿಧಿಸಲು ಆರೆಸ್ಸೆಸ್ ಹಿಂಜರಿದಿಲ್ಲ. ನ್ಯಾಯಾಂಗದೊಂದಿಗೆ ಸಂಘರ್ಷಕ್ಕೆ ಇಳಿದಿರುವ ಸಂಘ ಪರಿವಾರ ಅದಕ್ಕೆ ಸವಾಲು ಹಾಕುವ ರೀತಿಯಲ್ಲಿ ಅಯೋಧ್ಯೆ ಮಂದಿರ ನಿರ್ಮಾಣಕ್ಕಾಗಿ ಸುಗ್ರೀವಾಜ್ಞೆ ಹೊರಡಿಸಲು ಕೇಂದ್ರ ಸರಕಾರವನ್ನು ಒತ್ತಾಯಿಸಿದೆ.

ಆದರೆ ಅಯೋಧ್ಯೆಯಲ್ಲಿರುವುದು ಬರೀ ಮಂದಿರ ನಿರ್ಮಾಣದ ಪ್ರಶ್ನೆಯಲ್ಲ, 400 ವರ್ಷಗಳಷ್ಟು ಹಳೆಯ ಮಸೀದಿಯನ್ನು ಗೂಂಡಾಗಿರಿ ಮೂಲಕ ಕೆಡವಿ ಅಲ್ಲಿ ಮಂದಿರ ನಿರ್ಮಾಣ ಮಾಡಲು ಸಂಘ ಪರಿವಾರ ಮುಂದಾಗಿದೆ. ಈ ಜಾಗದ ವಿವಾದ ಇತ್ಯರ್ಥವಾಗದೆ ಅಲ್ಲಿ ಯಾವುದೇ ಕಟ್ಟಡ ನಿರ್ಮಾಣ ಮಾಡಲು ಹೇಗೆ ಸಾಧ್ಯ? ಈ ನಡುವೆ ಅಯೋಧ್ಯೆ ಮತ್ತು ಮಥುರಾದಲ್ಲಿ ಮಾಂಸ ಮಾರಾಟ ನಿಷೇಧ ಮಾಡಲು ಯೋಗಿ ಆದಿತ್ಯನಾಥ್ ಸರಕಾರ ತೀರ್ಮಾನಿಸಿದೆ. ಫೈಝಾಬಾದ್ ಮತ್ತು ಅಲಹಾಬಾದ್ ಹೆಸರು ಬದಲಿಸಿದ್ದಲ್ಲದೆ ಅಲ್ಲಿ ಮಾಂಸ ಮತ್ತು ಮದ್ಯ ಮಾರಾಟ ನಿಷೇಧಿಸಲು ಮುಂದಾಗಿದ್ದು ಪ್ರಚೋದನಕಾರಿ ಕ್ರಮವಾಗಿದೆ ಮತ್ತು ವ್ಯಾಪಕ ಖಂಡನೆಗೆ ಗುರಿಯಾಗಿದೆ. ಇತ್ತ ದಕ್ಷಿಣ ಭಾರತದಲ್ಲಿ ಬಿಜೆಪಿಯ ನೆಲೆಯನ್ನು ಭದ್ರಗೊಳಿಸಲು ಆರೆಸ್ಸೆಸ್ ವ್ಯೆಹ ರಚಿಸಿದೆ. ಮಂಗಳೂರಿನಲ್ಲಿ ನಡೆದ ಸಂಘ ಪರಿವಾರದ ಬೈಠಕ್‌ನಲ್ಲಿ ಕೇರಳ ಸೇರಿದಂತೆ ದಕ್ಷಿಣ ಭಾರತದ ನಾಲ್ಕು ರಾಜ್ಯಗಳಲ್ಲಿ ತನ್ನ ನೆಲೆ ವಿಸ್ತರಿಸಿಕೊಳ್ಳಲು ತೀರ್ಮಾನಿಸಿದೆ.ಉತ್ತರದಲ್ಲಿ ಅಯೋಧ್ಯೆ ವಿವಾದ ಕೆರಳಿಸಿದಂತೆ ದಕ್ಷಿಣದಲ್ಲಿ ಶಬರಿಮಲೆ ಅಯ್ಯಪ್ಪನ ದೇವಾಲಯದಲ್ಲಿ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ಅಮಾಯಕ ಜನರನ್ನು ಪ್ರಚೋದಿಸಲು ಅದು ಸಂಚು ರೂಪಿಸಿದೆ. ಅಯೋಧ್ಯೆ ಮಾದರಿಯಲ್ಲಿ ಶಬರಿಮಲೆ ಹೋರಾಟವನ್ನು ಕೈಗೆತ್ತಿಕೊಳ್ಳಲು ಮುಂದಾದ ಬಿಜೆಪಿ ಗುರುಸ್ವಾಮಿಗಳನ್ನು ಸಂಘಟಿಸಲು ತೀರ್ಮಾನಿಸಿದೆ.

ಈ ಕುರಿತು ಮಂಗಳೂರಿನಲ್ಲಿ ನಡೆದ ರಹಸ್ಯ ಸಭೆಯಲ್ಲಿ ಆರೆಸ್ಸೆಸ್ ಉನ್ನತ ನಾಯಕರು ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪಾಲ್ಗೊಂಡಿದ್ದರು. ಅಯ್ಯಪ್ಪ ಸ್ವಾಮಿ ಭಕ್ತರು ಕೇರಳದಲ್ಲಿ ಮಾತ್ರವಿಲ್ಲ, ಕರ್ನಾಟಕ, ತಮಿಳುನಾಡು ಆಂಧ್ರಪ್ರದೇಶಗಳಲ್ಲೂ ಇದ್ದಾರೆ. ಇವರನ್ನು ಸಂಘಟನೆ ಮಾಡಿ ಸಮಾವೇಶ ನಡೆಸಲು ರಹಸ್ಯ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದಕ್ಕಾಗಿ ಗುರುಸ್ವಾಮಿಗಳ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ. ಅಂತಲೇ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕರೆದ ಸರ್ವಪಕ್ಷ ಸಭೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ನಾಯಕರು ಸಭಾತ್ಯಾಗ ಮಾಡಿದ್ದಾರೆ. ಮುಂಬರುವ 2019ರ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಅಯೋಧ್ಯೆ ಹಾಗೂ ಶಬರಿಮಲೆ ವಿವಾದಗಳನ್ನು ಬಳಸಿಕೊಂಡು ಹಿಂದೂ ಓಟ್ ಬ್ಯಾಂಕ್ ನಿರ್ಮಿಸಿ ಮತ್ತೆ ಗೆದ್ದು ಬರಲು ಬಿಜೆಪಿ ಷಡ್ಯಂತ್ರ ರೂಪಿಸಿದೆ. ಆರ್ಥಿಕ ರಂಗದಲ್ಲಿ ನಮ್ಮ ಸರಕಾರ ವಿಫಲಗೊಂಡಿದ್ದರೂ ಜನರ ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಮತ್ತೆ ಅಧಿಕಾರಕ್ಕೆ ಬರುವುದಾಗಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. ಈ ಪ್ರಜಾಪ್ರಭುತ್ವ ವಿರೋಧಿ ಹುನ್ನಾರವನ್ನು ಜನತೆ ವಿಫಲಗೊಳಿಸಬೇಕಾಗಿದೆ
  
70 ವರ್ಷಗಳಲ್ಲಿ ಕಾಂಗ್ರೆಸ್ ಸರಕಾರ ಏನು ಮಾಡಿತು? ಎಂದು ಕೇಳುತ್ತಲೇ ಮೋದಿ ನೇತೃತ್ವದ ಸರಕಾರ ಅಧಿಕಾರ ಹಿಡಿಯಿತು. ಇದೀಗ ಮತ್ತೆ ನೆಹರೂ ಅವರನ್ನು ನಿಂದಿಸುತ್ತಲೇ ಮತ ಯಾಚಿಸಲು ಮುಂದಾಗಿದೆ. ಈ ದೇಶದಲ್ಲಿ ನಾವಿಂದು ಅನುಭವಿಸುತ್ತಿರುವುದೆಲ್ಲ ಬ್ರಿಟಿಷರು ಕೊಟ್ಟಿರುವುದಲ್ಲ. ಬಾಕ್ರಾನಂಗಲ್ ಅಣೆಕಟ್ಟು, ದೇಶದ ಪ್ರಮುಖ ವಿಶ್ವವಿದ್ಯಾನಿಲಯಗಳು, ವಿಜ್ಞಾನ ಸಂಸ್ಥೆಗಳು, ಆಹಾರೋತ್ಪನ್ನಗಳು, ಎದ್ದು ನಿಂತ ಆರ್ಥಿಕತೆ, ಸಬಲ ಸೇನಾ ಪಡೆ ಇವೆಲ್ಲವೂ ಭಾರತಕ್ಕೆ ಬ್ರಿಟಿಷರು ಬಿಟ್ಟು ಹೋಗಿರುವುದಲ್ಲ. ಸ್ವಾತಂತ್ರ ಸಿಕ್ಕಿದಾಗ ಈ ದೇಶದ ಶಿಕ್ಷಣದ ಸ್ಥಿತಿಗೂ ಇಂದಿನ ಶಿಕ್ಷಣದ ಸ್ಥಿತಿಗೂ ಅಜಗಜಾಂತರವಿದೆ. ಭಾರತವನ್ನು ಅತಿ ಹೆಚ್ಚು ಕಾಲ ಕಾಂಗ್ರೆಸ್ ಸರಕಾರವೇ ಆಳಿರುವುದರಿಂದ ಇದರೆಲ್ಲ ಹೆಗ್ಗಳಿಕೆ ಕಾಂಗ್ರೆಸ್‌ಗೇ ಹೋಗುತ್ತದೆ. ಭೂಸುಧಾರಣೆ, ಬ್ಯಾಂಕ್ ರಾಷ್ಟ್ರೀಕರಣದಂತಹ ಜನಪರ ಕಾರ್ಯಕ್ರಮಗಳು ನಡೆದಿರುವುದೂ ಇಂದಿರಾಗಾಂಧಿಯ ಕಾಲದಲ್ಲಿ. ಈ ದೇಶದಲ್ಲಿ ಹಸಿರುಕ್ರಾಂತಿ ನಡೆದಿರುವುದು, ಆಹಾರೋತ್ಪಾದನೆ ಹೆಚ್ಚಳವಾದುದು ಕಾಂಗ್ರೆಸ್ ಆಡಳಿತ ಕಾಲದಲ್ಲಿ. ರೈತರು, ಶ್ರೀಸಾಮಾನ್ಯರು ಬ್ಯಾಂಕಿನ ಮೆಟ್ಟಿಲು ಹತ್ತಲು ಆರಂಭಿಸಿದ್ದೂ ಕಾಂಗ್ರೆಸ್ ಆಡಳಿತದಲ್ಲಿ. ದೇಶ ಮೊತ್ತಮೊದಲು ಅಣುಪರೀಕ್ಷೆ ನಡೆಸಿರುವುದು ಇಂದಿರಾಗಾಂಧಿಯ ಆಡಳಿತದಲ್ಲಿ. ಅಷ್ಟೇ ಏಕೆ, ಪಾಕಿಸ್ತಾನ ಮತ್ತು ಬಾಂಗ್ಲಾವನ್ನು ವಿಭಜಿಸಿ, ಪಾಕಿಸ್ತಾನದ ವಿರುದ್ಧ ಎರಡು ಯುದ್ಧಗಳನ್ನು ಗೆದ್ದದ್ದೂ ಕಾಂಗ್ರೆಸ್ ಆಡಳಿತದಲ್ಲೇ. ಇಂದು ಮೋದಿ ಯಾವೆಲ್ಲ ಸಾಧನೆಗಳನ್ನು ಭಾರತದ ಸಾಧನೆಗಳೆಂದು ಹೇಳಿಕೊಳ್ಳುತ್ತಿದ್ದಾರೆಯೋ ಅವೆಲ್ಲವೂ ಕಾಂಗ್ರೆಸ್ ಆಡಳಿತ ಕಾಲದಲ್ಲಿ ನಡೆಯಿತು.

ಹೀಗಿರುವಾಗ, ಕನಿಷ್ಠ ನಾಲ್ಕು ವಷಗಳಲ್ಲಿ ಈ ದೇಶಕ್ಕೆ ಬಿಜೆಪಿ ಮಾಡಿದ ಒಳಿತೇನು ಎನ್ನುವುದನ್ನಾದರೂ ಮೋದಿ ವಿವರಿಸಬೇಕು. ನೋಟು ನಿಷೇಧವನ್ನು ಸಾಧನೆಯೆಂದು ಮೋದಿ ಹೇಳಿಕೊಳ್ಳುತ್ತಿದ್ದಾರೆ. ಆದರೆ ನೋಟು ನಿಷೇಧದಿಂದ ಸಾಧಿಸಿದ್ದೇನು? ಎನ್ನುವುದನ್ನು ವಿವರಿಸಲು ವಿಫಲರಾಗುತ್ತಿದ್ದಾರೆ. ಮೋದಿ ಆಡಳಿತದಲ್ಲಿ ಜನಸಾಮಾನ್ಯರ ಬದುಕು ನಾಶವಾಯಿತು ಮತ್ತು ಕಾರ್ಪೊರೇಟ್ ದನಿಗಳು ದೇಶವನ್ನು ದೋಚಿದರು ಎನ್ನುವ ಆರೋಪಗಳಿಗೆ ಮೋದಿ ಏನು ಹೇಳುತ್ತಾರೆ? ಕಾಂಗ್ರೆಸ್ ಅಧಿಕಾರಾವಧಿಯ ಬೊಫೋರ್ಸ್ ಹಗರಣ ತನಿಖೆಗೆ ಒಳಗಾಯಿತು. ಇದೇ ಸಂದರ್ಭದಲ್ಲಿ ರಫೇಲ್ ಹಗರಣ ತನಿಖೆ ನಡೆಸುವುದರಿಂದ ಯಾಕೆ ಹಿಂದೇಟು ಹಾಕುತ್ತಿದ್ದಾರೆ ಎನ್ನುವುದಕ್ಕೆ ಉತ್ತರವಿಲ್ಲ. ಕಳೆದ ನಾಲ್ಕು ವರ್ಷಗಳ ಆಡಳಿತದಲ್ಲಿ ದೇಶ ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದೆ ಎಂದು ಎಲ್ಲ ಆರ್ಥಿಕ ತಜ್ಞರು ಹೇಳುತ್ತಿದ್ದಾರೆ.

ಪಟೇಲ್ ಪ್ರತಿಮೆ, ಶಿವಾಜಿ ಪ್ರತಿಮೆಗಳಿಗಾಗಿ ಜನರು ಮತ ನೀಡಬೇಕು ಎಂದು ಮೋದಿ ಬಯಸುತ್ತಿದ್ದಾರೆಯೇ? ವಿವಿಧ ಪ್ರದೇಶಗಳ ಹೆಸರುಗಳನ್ನು ಬದಲಾಯಿಸಿರುವುದು ಮೋದಿ ಸಾಧನೆಯೇ? ಬಡವರಿಗೆ ಆರೋಗ್ಯ, ಶಿಕ್ಷಣ, ಆಹಾರವನ್ನು ತಲುಪಿಸಲು ಮೋದಿಯವರ ಕೊಡುಗೆಯೇನು? ಕಾಂಗ್ರೆಸ್ ಸರಕಾರದ ಅವಧಿಯಲ್ಲೇ ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂತು. ಸರಕಾರವನ್ನು ಶ್ರೀಸಾಮಾನ್ಯನಿಗೆ ಪ್ರಶ್ನಿಸಲು ಈ ಮೂಲಕ ಸಾಧ್ಯವಾಯಿತು. ಸ್ವತಃ ಕಾಂಗ್ರೆಸ್‌ನ ಭ್ರಷ್ಟಾಚಾರ ಪ್ರಕರಣಗಳೂ ಈ ಕಾಯ್ದೆಯಿಂದ ಹೊರಗೆ ಬಂತು. ಇಂತಹ ಕಾಯ್ದೆಯನ್ನು ಮೋದಿ ಸರಕಾರ ಯಾಕೆ ದುರ್ಬಲಗೊಳಿಸಲು ಹೊರಟಿದೆ? ಇದೀಗ ಅಭಿವೃದ್ಧಿಯ ವಿಷಯವನ್ನೇ ಪಕ್ಕಕ್ಕಿಟ್ಟು ರಾಮಮಂದಿರದ ಹೆಸರಿನಲ್ಲಿ ಹಿಂಸೆಯನ್ನು ಪ್ರಚೋದಿಸಿ ಇನ್ನೊಂದು ಚುನಾವಣೆಯನ್ನು ಗೆಲ್ಲಲು ಹೊರಟಿದೆ. ಅಭಿವೃದ್ಧಿ ಮತ್ತು ಹಿಂಸಾಚಾರ ಜೊತೆ ಜೊತೆಯಾಗಿ ಸಾಗಲು ಸಾಧ್ಯವಿಲ್ಲ. ಈಗಾಗಲೇ ಅಭಿವೃದ್ಧಿಯಲ್ಲಿ ಹಿಂದಕ್ಕೆ ಬಿದ್ದಿರುವ ದೇಶ, ಇನ್ನೊಂದು ಭಾರೀ ಹಿಂಸಾಚಾರಕ್ಕೆ ಬಲಿಯಾದರೆ ಅಭಿವೃದ್ಧಿ ಹಲವು ದಶಕಗಳಷ್ಟು ಹಿಂದಕ್ಕೆ ಚಲಿಸುತ್ತದೆ. ದೇಶದ ಅರ್ಥವ್ಯವಸ್ಥೆ ಚೆಲ್ಲಾಪಿಲ್ಲಿಯಾಗಬಹುದು. ಈ ನಿಟ್ಟಿನಲ್ಲಿ ದೇಶದ ಭವಿಷ್ಯದ ಏಳು ಬೀಳುವಿನಲ್ಲಿ ಮುಂದಿನ ಚುನಾವಣೆ ನಿರ್ಣಾಯಕವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News