ಭಾರತದ ಮೊದಲ ಎಂಜಿನ್ ರಹಿತ ರೈಲಿನ ವಿಶೇಷತೆಗಳೇನು ಗೊತ್ತೇ ?

Update: 2018-11-17 03:51 GMT

ಹೊಸದಿಲ್ಲಿ, ನ. 17: ಭಾರತದ ಮೊಟ್ಟಮೊದಲ ಎಂಜಿನ್‌ ರಹಿತ ರೈಲು "ಟ್ರೈನ್ 18"ನ ಪ್ರಾಯೋಗಿಕ ಸಂಚಾರ ಇಂದು ನಡೆಯಲಿದ್ದು, ಬರೇಲಿ ಮತ್ತು ಮೊರಾದಾಬಾದ್ ನಿಲ್ದಾಣಗಳ ನಡುವೆ ಈ ರೈಲು ಓಡಲಿದೆ.

ಇಂಟಗ್ರಲ್ ಕೋಚ್ ಫ್ಯಾಕ್ಟರಿ ಅಭಿವೃದ್ಧಿಪಡಿಸಿರುವ ಈ ರೈಲನ್ನು ಶತಾಬ್ದಿ ರೈಲುಗಳ ಉತ್ತರಾಧಿಕಾರಿ ಎಂದು ಬಿಂಬಿಸಲಾಗಿದ್ದು, ರೈಲ್ವೆ ಮಂಡಳಿ ಅಧ್ಯಕ್ಷ ಅಶ್ವನಿ ಲೊಹಾನಿ ಇದನ್ನು ಕಳೆದ ವಾರ ಅನಾವರಣ ಮಾಡಿದ್ದರು.

ಸಂಪೂರ್ಣ ಹವಾನಿಯಂತ್ರಿತವಾದ ಈ ರೈಲು ಸೆಲ್ಫ್‌ಪ್ರೊಪಲ್ಷನ್‌ನಿಂದ ಚಲಿಸುತ್ತದೆ. ಗಂಟೆಗೆ 160 ಕಿಲೋಮೀಟರ್ ವೇಗದಲ್ಲಿ ಈ ರೈಲು ಸಂಚರಿಸಲಿದ್ದು, ತ್ವರಿತ ವೇಗವರ್ಧಕ ಸೌಲಭ್ಯವನ್ನು ಹೊಂದಿರುವುದು ಇದರ ತಾಂತ್ರಿಕ ಲಕ್ಷಣಗಳಲ್ಲೊಂದು.

ಸಂಶೋಧನಾ ವಿನ್ಯಾಸಗಳು ಮತ್ತು ಗುಣಮಟ್ಟ ಸಂಸ್ಥೆಯ ತಂಡ ಮೊರಾದಾಬಾದ್‌ಗ ಆಗಮಿಸಿದ್ದು, ಪ್ರಾಯೋಗಿಕ ಸಂಚಾರವನ್ನು ವೀಕ್ಷಿಸಲಿದೆ. 100 ಕೋಟಿ ರೂಪಾಯಿ ವೆಚ್ಚದ ಈ ರೈಲು ಪ್ರತ್ಯೇಕ ಲೋಕೊಮೋಟಿವ್ ಅಥವಾ ಎಂಜಿನ್ ಹೊಂದಿರದ ಮೊಟ್ಟಮೊದಲ ದೂರದ ರೈಲಾಗಿದೆ.

ಈ ಹೊಸ ರೈಲಿನಲ್ಲಿ ತೊಡಕು ಕಾಣಿಸಿಕೊಂಡಿದೆ ಎಂಬ ವರದಿಗಳನ್ನು ರೈಲ್ವೆ ಇಲಾಖೆ ಅಲ್ಲಗಳೆದಿದೆ. ಇಂಥ ಸಣ್ಣ ಪುಟ್ಟ ಸಮಸ್ಯೆಗಳು ಪ್ರಾಯೋಗಿಕ ಸಂಚಾರದಲ್ಲಿ ಸಾಮಾನ್ಯ ಚೆನ್ನೈನಲ್ಲಿ ಕಡಿಮೆ ವೇಗದಲ್ಲಿ ರೈಲು ಓಡಿಸುವಾಗ ಫ್ಯೂಸ್ ಹೋಗಿರುವುದರಿಂದ ಈ ತೊಂದರೆ ಕಾಣಿಸಿಕೊಂಡಿದ್ದು, ತಕ್ಷಣ ಸರಿಪಡಿಸಲಾಗಿದೆ ಎಂದು ಸ್ಪಷ್ಟನೆ ನೀಡಿದೆ.

16 ಬೋಗಿಗಳ ಈ ವಿಶೇಷ ರೈಲನ್ನು 18 ತಿಂಗಳಲ್ಲಿ ನಿರ್ಮಿಸಲಾಗಿದೆ. ನವೆಂಬರ್ 11ರಂದು ಚೆನ್ನೈನಿಂದ ಹೊರಟಿದ್ದ ರೈಲು ಎರಡು ದಿನ ಬಳಿಕ ರಾಜಧಾನಿ ತಲುಪಿತ್ತು. ರೈಲ್ವೆ ಸುರಕ್ಷಾ ವಿಭಾಗ ಪ್ರಮಾಣಪತ್ರ ನೀಡುವವರೆಗೂ ಲೋಕೊಮೋಟಿವ್ ಸಹಾಯದಿಂದಲೇ ಇದನ್ನು ಓಡಿಸಲಾಗಿತ್ತು.
ಈ ವರ್ಷದ ಕೊನೆಯ ಒಳಗಾಗಿ ಇಂಥ ಇನ್ನೊಂದು ರೈಲು ಸಿದ್ಧವಾಗಲಿದ್ದು, 2020ರ ವೇಳೆಗೆ ಮತ್ತೆ ನಾಲ್ಕು ಹೊಸ ರೈಲುಗಳು ಓಡಾಟಕ್ಕೆ ಸಿದ್ಧವಾಗಲಿವೆ ಎಂದು ಲೊಹಾನಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News