ಮಾಸಾಂತ್ಯಕ್ಕೆ ಸಚಿವ ಸಂಪುಟ ವಿಸ್ತರಣೆ: ದಿನೇಶ್‌ ಗುಂಡೂರಾವ್

Update: 2018-11-17 12:47 GMT

ಬೆಂಗಳೂರು, ನ.17: ರಾಜ್ಯದ ಸಮ್ಮಿಶ್ರ ಸರಕಾರದ ಸಚಿವ ಸಂಪುಟವು ಮಾಸಾಂತ್ಯಕ್ಕೆ ವಿಸ್ತರಣೆಯಾಗಲಿದೆ. ಅಲ್ಲದೆ, ಇದೇ ಸಂದರ್ಭದಲ್ಲಿ ನಿಗಮ, ಮಂಡಳಿಗಳ ನೇಮಕಾತಿ ಸಂಬಂಧವು ತೀರ್ಮಾನ ಕೈಗೊಳ್ಳಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್ ತಿಳಿಸಿದರು.

ಶನಿವಾರ ನಗರದ ಕುಮಾರ ಕೃಪಾ ಅತಿಥಿಗೃಹದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರೊಂದಿಗೆ ಸಮಾಲೋಚಿಸಿದ ಬಳಿಕ ಮಾತನಾಡಿದ ಅವರು, ಜೆಡಿಎಸ್ ಹಾಗೂ ಕಾಂಗ್ರೆಸ್ ಒಗ್ಗಟ್ಟಿನಿಂದಲೇ ಮುಂದುವರೆಯುತ್ತಿದ್ದು, ಯಾವುದೇ ಭಿನ್ನಾಭಿಪ್ರಾಯಗಳಿಗೆ ಅವಕಾಶವಿಲ್ಲ ಎಂದರು.

ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ನಿಟ್ಟಿನಲ್ಲಿ ಎಐಸಿಸಿ ವತಿಯಿಂದ ಆರಂಭಿಸಲಾಗಿರುವ ‘ಪ್ರಾಜೆಕ್ಟ್ ಶಕ್ತಿ’ ಯೋಜನೆಯು ಒಂದು ಹೊಸ ಪ್ರಯೋಗವಾಗಿದೆ. ನಮ್ಮ ರಾಜ್ಯದಲ್ಲಿ ಈ ಯೋಜನೆಯ ಯಶಸ್ಸಿಗೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ ಎಂದು ಅವರು ಹೇಳಿದರು.

ನವೆಂಬರ್ 30ರೊಳಗೆ ಪ್ರಾಜೆಕ್ಟ್ ಶಕ್ತಿ ಕಾರ್ಯಕ್ರಮ ರಾಜ್ಯಾದ್ಯಂತ ಕಾರ್ಯಾರಂಭ ಮಾಡಲಿದೆ. ಕಾಂಗ್ರೆಸ್ ಪಕ್ಷಕ್ಕೆ ಹೊಸ ಸ್ವರೂಪ ನೀಡಲು ಈ ಯೋಜನೆ ಸಹಕಾರಿಯಾಗಲಿದೆ ಎಂದು ದಿನೇಶ್‌ ಗುಂಡೂರಾವ್ ತಿಳಿಸಿದರು.

ಮಹಿಳಾ ಕಾಂಗ್ರೆಸ್‌ನಲ್ಲಿ ಡ್ರೆಸ್‌ಕೋಡ್ ಜಾರಿಗೊಳಿಸಿರುವ ವಿಷಯದ ಬಗ್ಗೆ ಯಾವುದೇ ತನಗೆ ಯಾವುದೇ ಮಾಹಿತಿ ಇಲ್ಲ. ಮೈಸೂರು ವಿಭಾಗಕ್ಕೆ ಪ್ರಾತಿನಿಧ್ಯ ಇಲ್ಲ ಎಂಬ ಗೊಂದಲವೂ ಬಗೆಹರಿದಿದೆ. ಕಾಂಗ್ರೆಸ್‌ಗೆ ಮೈಸೂರು ಮೇಯರ್ ಬಿಟ್ಟುಕೊಟ್ಟಿದ್ದಾರೆ. ಇದಕ್ಕಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿಗೆ ಧನ್ಯವಾದ ಹೇಳುತ್ತೇನೆ ಎಂದು ಅವರು ಹೇಳಿದರು.

ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದುವರಿಯಲಿದೆ. ಸ್ಥಾನ ಹಂಚಿಕೆ ಕುರಿತಂತೆ ಶೀಘ್ರದಲ್ಲೆ ಮಾತುಕತೆ ಆರಂಭಿಸುತ್ತೇವೆ ಎಂದು ದಿನೇಶ್‌ ಗುಂಡೂರಾವ್ ತಿಳಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಮೈಸೂರು ವಿಭಾಗದಲ್ಲಿ ಕಾಂಗ್ರೆಸ್‌ಗೆ ಸೂಕ್ತ ಪ್ರಾತಿನಿಧ್ಯವಿಲ್ಲವೆಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿರುವುದು ಪಕ್ಷದ ವರಿಷ್ಠರ ಗಮನಕ್ಕೆ ಬಂದಿದೆ. ಸಿದ್ದರಾಮಯ್ಯ ಅವರೇ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದಾರೆ. ಹಾಗಾಗಿ ಯಾವುದೇ ಭಾಗಕ್ಕೆ ಅನ್ಯಾಯವಾಗದಂತೆ ಸಮನ್ವಯ ಸಮಿತಿಯಲ್ಲಿ ಚರ್ಚಿಸಿ ಸರಿಪಡಿಸಲಾಗುತ್ತದೆ ಎಂದರು.

ನಿನ್ನೆಯಿಂದ ಕಾಂಗ್ರೆಸ್ ವಿಭಾಗ ಮಟ್ಟದ ಪ್ರಮುಖರ ಸಭೆ ನಡೆಸಲಾಗುತ್ತಿದೆ. ಇಂದು ಬೆಳಗಾವಿ ವಿಭಾಗದ ಜಿಲ್ಲಾಧ್ಯಕ್ಷರು ಪ್ರಮುಖರ ಸಭೆ ಇದೆ. ಕೆಪಿಸಿಸಿ ಅಧ್ಯಕ್ಷರು ಮತ್ತು ಪಕ್ಷದ ಉಸ್ತುವಾರಿಗಳು ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಅವರು ವಿವರಿಸಿದರು.

ಸಚಿವ ಸಂಪುಟ ವಿಸ್ತರಣೆಯೊಂದಿಗೆ ನಿಗಮ, ಮಂಡಳಿಗಳಿಗೂ ನೇಮಕಾತಿ ಮಾಡಲಾಗುವುದು. ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನ ಆರಂಭಗೊಳ್ಳುವ ಮುನ್ನ ಸಂಪುಟ ವಿಸ್ತರಣೆ ಆಗಲಿದೆ. ನಮ್ಮ ಯಾವ ಶಾಸಕರೂ ಬಿಜೆಪಿಗೆ ಹೋಗುವುದಿಲ್ಲ. ಉಪ ಚುನಾವಣೆಯಲ್ಲಿ ಬಿಜೆಪಿಯ ಸ್ಥಿತಿ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಈಶ್ವರ್ ಖಂಡ್ರೆ ಹೇಳಿದರು.

ವೇಣುಗೋಪಾಲ್-ಎಂ.ಬಿ.ಪಾಟೀಲ್ ಭೇಟಿ

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ರನ್ನು ಮಾಜಿ ಸಚಿವ ಎಂ.ಬಿ.ಪಾಟೀಲ್ ಭೇಟಿ ಮಾಡಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಕುರಿತು ತನಗೆ ಯಾವುದೇ ಮಾಹಿತಿಯಿಲ್ಲ. ಅದನ್ನೆಲ್ಲ ಕೆಪಿಸಿಸಿ ಅಧ್ಯಕ್ಷ, ಉಸ್ತುವಾರಿಗಳನ್ನು ಕೇಳಿ ಎಂದು ಕುಮಾರಕೃಪಾ ಬಳಿಯಿಂದ ತೆರಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News