ಯಡಿಯೂರಪ್ಪ ನಿವಾಸಕ್ಕೆ ಜನಾರ್ದನ ರೆಡ್ಡಿ ಭೇಟಿ: ಉಭಯ ಮುಖಂಡರ ನಡುವೆ ಮಹತ್ವದ ಚರ್ಚೆ

Update: 2018-11-17 13:36 GMT

ಬೆಂಗಳೂರು, ನ.17: ಆ್ಯಂಬಿಡೆಂಟ್ ವಂಚನೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಅಕ್ರಮ ಗಣಿಗಾರಿಕೆಯ ಆರೋಪ ಹೊತ್ತು ಜೈಲು ಪಾಲಾಗಿದ್ದ ಜನಾರ್ದನ ರೆಡ್ಡಿ ಜೊತೆ ಬಿಜೆಪಿಯ ಯಾವ ಮುಖಂಡರು ವೇದಿಕೆ ಹಂಚಿಕೊಳ್ಳಬಾರದು ಎಂದು ಬಿಜೆಪಿ ರಾಷ್ಟ್ರೀಯ ನಾಯಕರು ಸೂಚನೆ ನೀಡಿರುವ ಬೆನ್ನಲೆ, ಡಾಲರ್ಸ್‌ ಕಾಲನಿಯಲ್ಲಿರುವ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದ ಜನಾರ್ದನ ರೆಡ್ಡಿ, ಸುಮಾರು ಅರ್ಧ ಗಂಟೆಯ ಕಾಲ ಅವರೊಂದಿಗೆ ಚರ್ಚೆ ನಡೆಸಿದ್ದಾರೆ.

ಆ್ಯಂಬಿಡೆಂಟ್ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಆದರೂ, ರಾಜ್ಯ ಸರಕಾರ ನನ್ನ ವಿರುದ್ಧ ಸುಳ್ಳು ಮೊಕದ್ದಮೆ ದಾಖಲಿಸುವಂತೆ ಪೊಲೀಸರ ಮೇಲೆ ಒತ್ತಡ ಹೇರಿದೆ. ಸಂಕಷ್ಟದ ಸಂದರ್ಭದಲ್ಲಿ ಪಕ್ಷ ನನ್ನ ನೆರವಿಗೆ ಬರಬೇಕು ಎಂದು ಜನಾರ್ದನ ರೆಡ್ಡಿ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿಯೇ ನಾನು ಬಿಜೆಪಿ ಪರವಾಗಿ ಕೆಲಸ ಮಾಡಲು ಮುಂದಾಗಿದ್ದೆ. ಆದರೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಜನಾರ್ದನ ರೆಡ್ಡಿಯೂ, ನಮ್ಮ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ನೀಡಿದ್ದ ಹೇಳಿಕೆಯಿಂದ ಮನಸ್ಸಿಗೆ ತುಂಬಾ ನೋವುಂಟು ಆಯಿತು ಎಂದು ಅವರು ಹೇಳಿದರು.

 ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಒಂದಿಷ್ಟು ಶ್ರಮ ವಹಿಸಿದ್ದರೆ, ರಾಜ್ಯದಲ್ಲಿ ಈ ಬಾರಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ನಡೆಸುತ್ತಿತ್ತು. ಹಳೆಯ ದ್ವೇಷದಿಂದ ನನ್ನ ವಿರುದ್ಧ ಸರಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ನಾನು ಯಾವುದೇ ತಪ್ಪು ಮಾಡಿಲ್ಲ. ನನಗೆ ನೆರವು ನೀಡಿ ಎಂದು ಯಡಿಯೂರಪ್ಪಗೆ ಜನಾರ್ದನ ರೆಡ್ಡಿ ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ.

ಕೇಂದ್ರ ಸರಕಾರವು ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಮಾಡುತ್ತಿರುವ ಆರೋಪಕ್ಕೆ ನಾವು ತಿರುಗೇಟು ನೀಡಬೇಕು. ನೀವು ಧೃತಿಗೆಡಬೇಡಿ, ಸಾಧ್ಯವಾದಷ್ಟು ಮಟ್ಟಿಗೆ ನಿಮಗೆ ನಮ್ಮ ಸಹಕಾರ ಇರುತ್ತದೆ ಎಂದು ಜನಾರ್ದನ ರೆಡ್ಡಿಗೆ ಯಡಿಯೂರಪ್ಪ ಅಭಯ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News