ಜಾರಿ ನಿರ್ದೇಶನಾಲಯದಿಂದ ನೋಟಿಸ್ ಬಂದಿಲ್ಲ: ಡಿ.ಕೆ.ಶಿವಕುಮಾರ್

Update: 2018-11-17 14:01 GMT

ಬೆಂಗಳೂರು, ನ.17: ಜಾರಿ ನಿರ್ದೇಶನಾಲಯ(ಇಡಿ)ದಿಂದ ನನಗೆ ಯಾವುದೇ ನೋಟಿಸ್ ಬಂದಿಲ್ಲ. ಆದರೆ, ಕೇಂದ್ರ ಸರಕಾರದ ಒಂದು ಪ್ರಮುಖ ಸಂಸ್ಥೆಯಿಂದ ನೋಟಿಸ್ ಬಂದಿರುವುದು ಸತ್ಯ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸ್ಪಷ್ಟನೆ ನೀಡಿದರು.

ಶನಿವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೋಟಿಸ್ ಬಂದಿರುವುದಾಗಿ ನಾನೇ ನನ್ನ ಪಕ್ಷದ ಮುಖಂಡರಿಗೆ ತಿಳಿಸಿದ್ದೆ. ಆದರೆ, ಅದು ಯಾವ ನೋಟಿಸ್ ಎಂದು ಈ ಹಂತದಲ್ಲಿ ನಾನು ಹೇಳಲು ಸಾಧ್ಯವಿಲ್ಲ ಎಂದರು.

ನೋಟಿಸ್‌ಗೆ ಉತ್ತರ ನೀಡುತ್ತೇನೆ. ಹಲವಾರು ವಿಚಾರಗಳನ್ನು ಸಮಾಜಕ್ಕೆ ತಿಳಿಸಬೇಕಿದೆ. ನಾನು ಆರಂಭದಿಂದಲೂ ಹೇಳುತ್ತಿದ್ದೇನೆ. ನಾನು ಯಾವುದೇ ತಪ್ಪು ಮಾಡಿಲ್ಲ. ರಾಜಕಾರಣ ನಿರಂತರವಾಗಿ ನಡೆಯುತ್ತಿರುತ್ತದೆ. ಕಳೆದ ಒಂದು ವರ್ಷ ಎರಡು ತಿಂಗಳ ಹಿಂದೆ ಆರಂಭವಾಗದ ಪ್ರಕ್ರಿಯೆಗಳು ಈಗ ನಡೆಯುತ್ತಿವೆ ಎಂದು ಶಿವಕುಮಾರ್ ಹೇಳಿದರು.

ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬಂದಿದ್ದಕ್ಕೆ ನನಗೆ ನೋಟಿಸ್‌ಗಳು ಬರುತ್ತಿವೆಯೇ ಎಂಬುದು ಗೊತ್ತಿಲ್ಲ. ಏನೇ ಆಗಲಿ ಮುಂದೆ ಬರುವಂತಹ ಸವಾಲುಗಳನ್ನು ಎದುರಿಸುತ್ತೇನೆ ಎಂದು ಶಿವಕುಮಾರ್ ತಿಳಿಸಿದರು.

ಆಸೆ ತಪ್ಪಲ್ಲ: ಹೈಕಮಾಂಡ್ ಮುಖ್ಯಮಂತ್ರಿಯ ಜವಾಬ್ದಾರಿ ವಹಿಸಿದರೆ ನಿರ್ವಹಿಸಲು ಸಿದ್ಧ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಆಸೆ, ಆಕಾಂಕ್ಷೆಗಳನ್ನು ವ್ಯಕ್ತಪಡಿಸುವುದು ತಪ್ಪಲ್ಲ ಎಂದರು.

ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ತೀರ್ಮಾನ ಮಾಡುವುದು ಹೈಕಮಾಂಡ್. ನಾವು ಸದ್ಯಕ್ಕೆ ಕುಮಾರಸ್ವಾಮಿ ಹಾಗೂ ಜೆಡಿಎಸ್‌ಗೆ ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯಲು ಬೇಷರತ್ ಬೆಂಬಲ ನೀಡಿದ್ದೇವೆ. ಅವರು ಯಾರನ್ನಾದರೂ ಮಾಡಿಕೊಳ್ಳಲಿ ಎಂದು ಶಿವಕುಮಾರ್ ಹೇಳಿದರು.

ನಮ್ಮ ಪಕ್ಷದಲ್ಲಿ ಮುಖ್ಯಮಂತ್ರಿ ವಿಚಾರ ಚರ್ಚೆ ಐದು ವರ್ಷದ ನಂತರದ ಮಾತು. ನಾನು ಆತುರದಲ್ಲಿ ಇಲ್ಲ. ನಾನು ನನ್ನ ಮಾತನ್ನು ಮೀರಿ ಹೋಗುವುದಿಲ್ಲ. ಆಸೆ ಪಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಕೆಲಸ ಮಾಡುವ ಸಾಮರ್ಥ್ಯ ಇರುವ ಬಹಳಷ್ಟು ಮಂದಿ ಇದ್ದಾರೆ. ಪರಮೇಶ್ವರ್ ಮುಖ್ಯಮಂತ್ರಿಯಾಗಬೇಕು ಎಂದು ಆಸೆ ಪಡುವುದರಲ್ಲಿ ತಪ್ಪೇನಿಲ್ಲ. ಮುಖ್ಯಮಂತ್ರಿ ಸ್ಥಾನ ಯಾರಿಗೂ ಶಾಶ್ವತವಲ್ಲ. ಸ್ವಾತಂತ್ರ ಬಂದ ನಂತರ ರಾಜ್ಯದಲ್ಲಿ ಎಷ್ಟು ಜನ ಮುಖ್ಯಮಂತ್ರಿಯಾಗಿದ್ದಾರೆ. ಎಷ್ಟು ಸರಕಾರಗಳು ಬಂದು ಹೋಗಿವೆ?

-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News