ಕೃಷಿ-ತೋಟಗಾರಿಕಾ ಇಲಾಖೆಗಳು ನರೇಗಾ ಪ್ರಯೋಜನ ಪಡೆಯಲಿ: ಸಚಿವ ಕೃಷ್ಣಭೈರೇಗೌಡ

Update: 2018-11-17 14:17 GMT

ಬೆಂಗಳೂರು, ನ.16: ನರೇಗಾ ಯೋಜನೆಯ ಒಗ್ಗೂಡಿಸುವಿಕೆಯೊಂದಿಗೆ ಕೃಷಿ, ರೇಷ್ಮೆ ಮತ್ತು ತೋಟಗಾರಿಕೆ ಇಲಾಖೆಗಳ ಕಾರ್ಯಕ್ರಮಗಳನ್ನು ತೆಗೆದುಕೊಳ್ಳಲು ಅವಕಾಶವಿದ್ದು, ಇದನ್ನು ಆಯಾ ಇಲಾಖೆಗಳು ಅಧಿಕಾರಿಗಳು ಬಳಸಿಕೊಳ್ಳುವ ಮೂಲಕ ರೈತರಿಗೆ ಹೆಚ್ಚಿನ ಸವಲತ್ತು ನೀಡಬೇಕಾದ ಅವಶ್ಯಕತೆಯಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೃಷ್ಣಭೈರೇಗೌಡ ತಿಳಿಸಿದರು.

ಶನಿವಾರ ನಗರದಲ್ಲಿ ಕೃಷಿ ಸಚಿವ ಶಿವಶಂಕರ ರೆಡ್ಡಿ ಜೊತೆ ಜಂಟಿಯಾಗಿ ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಕೃಷಿ ಮತ್ತು ತೋಟಗಾರಿಕಾ ಇಲಾಖೆ ಅಧಿಕಾರಿಗಳ ಜೊತೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಂವಾದ ನಡೆಸುವ ಸಂದರ್ಭದಲ್ಲಿ ಅವರು ಈ ಸೂಚನೆ ನೀಡಿದರು.

ನರೇಗಾ ಯೋಜನೆಯಡಿ ಹೆಚ್ಚು ಹೆಚ್ಚಾಗಿ ಚೆಕ್‌ಡ್ಯಾಮ್‌ಗಳ ನಿರ್ಮಾಣ ಹಾಗೂ ಬದುಗಳ ನಿರ್ಮಾಣ ಕೈಗೊಳ್ಳುವುದು ಅವಶ್ಯವಿದೆ. ಜೊತೆಗೆ ತೋಟಗಾರಿಕಾ ಬೆಳೆಗಳಾದ ಮಾವು, ತೆಂಗು, ಮೆಣಸು, ಪಪ್ಪಾಯ, ದ್ರಾಕ್ಷಿ, ನಿಂಬೆ ಮತ್ತು ಬಾಳೆ ಸೇರಿದಂತೆ ಸುಮಾರು 22 ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ನರೇಗಾ ಯೋಜನೆಯಡಿ ರೈತರಿಗೆ 40 ಸಾವಿರ ರೂ.ಗಳಿಂದ 1.20 ಲಕ್ಷ ರೂ.ವರಗೆ ನೆರವು ನೀಡಲು ಅವಕಾಶವಿದೆ ಎಂದು ಅವರು ಹೇಳಿದರು.

ದುರಾದೃಷ್ಟದ ವಿಚಾರವೆಂದರೆ ರೈತರಿಗಾಗಲಿ, ಅಥವಾ ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳ ಅಧಿಕಾರಿಗಳಿಗಾಗಲಿ ಸರಿಯಾದ ಮಾಹಿತಿ ಇಲ್ಲ. ಆದುದರಿಂದ, ನೆರವಿನ ಅಗತ್ಯವಿರುವ ರೈತರಿಗೆ ನೆರವು ಸಿಗುತ್ತಿಲ್ಲ ಎಂದು ಕೃಷ್ಣಭೈರೇಗೌಡ ಬೇಸರ ವ್ಯಕ್ತಪಡಿಸಿದರು.

ನರೇಗಾ ಯೋಜನೆಯಡಿ ರೇಷ್ಮೆ ಬೆಳೆಯಲು ನೆರವು ನೀಡಲು ಅವಕಾಶವಿದೆ. ಈ ಸಂಗತಿಗಳನ್ನು ರೈತರಿಗೆ ತಿಳಿಹೇಳುವ ಮಾಹಿತಿ ತಲುಪಿಸುವ ಅವಶ್ಯಕತೆಯಿದೆ. ಆ ಮೂಲಕ ರೈತರು ಹೆಚ್ಚಿನ ನೆರವು ಪಡೆಯಲು ಅಧಿಕಾರಿಗಳು ನೆರವಾಗಬೇಕು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಹೇಶ್ವರರಾವ್, ತೋಟಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ.ಸಿ.ರಾಯ್ ಹಾಗೂ ಆಯುಕ್ತೆ ಕನಗವಲ್ಲಿ ಸೇರಿದಂತೆ ಇನ್ನಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಮಾಹಿತಿ ನೀಡಲು ಮುಂದಾಗಿ

ಕೃಷಿ ಇಲಾಖೆಯ ಅಧಿಕಾರಿಗಳು ನರೇಗಾದ ಬಗ್ಗೆ ಸೂಕ್ತ ಮಾಹಿತಿ ಪಡೆದು ಇದರಡಿ ರೈತರಿಗೆ ಸಿಗಬಹುದಾದ ಎಲ್ಲ ಸೌಲಭ್ಯಗಳನ್ನು ಒದಗಿಸಲು ಗಮನಹರಿಸಿ. ಈ ಯೋಜನೆ ಬರಪೀಡಿತ ಜಿಲ್ಲೆಗಳಲ್ಲಿ ವಿಶೇಷವಾಗಿ ರೈತರಿಗೆ ಅನುಕೂಲವಾಗಲಿದೆ.

-ಶಿವಶಂಕರರೆಡ್ಡಿ ಕೃಷಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News