ಶೇ.61 ರಷ್ಟು ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನದಿಂದ ವಂಚನೆ

Update: 2018-11-17 14:38 GMT

ಬೆಂಗಳೂರು, ನ.17: ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸರಳೀಕರಿಸುವ ನಿಟ್ಟಿನಲ್ಲಿ ಪರಿಚಯಿಸಿದ್ದ ‘ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶ’ ಸರಿಯಾದ ನಿರ್ವಹಣೆಯಿಲ್ಲದಿದ್ದರಿಂದ ಪ್ರಸಕ್ತ ಸಾಲಿನಲ್ಲಿ ಬೆಂಗಳೂರು ನಗರದಲ್ಲಿ ಶೇ.61 ರಷ್ಟು ಮಕ್ಕಳು ವಿದ್ಯಾರ್ಥಿ ವೇತನದಿಂದ ವಂಚಿತರಾಗಿದ್ದಾರೆ.

ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಲು ನ.15 ರವರೆಗೆ ಅವಕಾಶ ನೀಡಲಾಗಿತ್ತು. ಇದುವರೆಗೂ ಶೇ.39 ರಷ್ಟು ವಿದ್ಯಾರ್ಥಿಗಳು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ವಿವರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸಲ್ಲಿಕೆ ಕಡ್ಡಾಯ ಮಾಡಿದ್ದರಿಂದ ತಾಂತ್ರಿಕ ತೊಡಕುಗಳಿಂದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಕೆಗೆ ಸಾಧ್ಯವಾಗಿಲ್ಲ.

ಒಂದರಿಂದ ಹತ್ತನೇ ತರಗತಿವರೆಗಿನ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನದಿಂದ ವಂಚಿತರಾಗದಿರಲಿ ಎಂಬ ಉದ್ದೇಶದೊಂದಿಗೆ ರಾಜ್ಯ ಸರಕಾರ ‘ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶ’ ಯೋಜನೆ ಜಾರಿ ಮಾಡಿತ್ತು. ಇದನ್ನು ಯಶಸ್ವಿಗೊಳಿಸುವ ಸಲುವಾಗಿ ನಗರ ಜಿಲ್ಲಾ ಪಂಚಾಯತ್ ಕ್ರಿಯಾ ಯೋಜನೆಯನ್ನೂ ರೂಪಿಸಲಾಗಿತ್ತು. ಆದರೆ, ಅದು ಸಾಕಷ್ಟು ಪ್ರಮಾಣದಲ್ಲಿ ಯಶಸ್ಸು ಕಂಡಿಲ್ಲ. ನಗರ ಜಿಲ್ಲೆಯಲ್ಲಿ ಅಂದಾಜು 1.32 ಲಕ್ಷ ವಿದ್ಯಾರ್ಥಿಗಳು ವಿವಿಧ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದು, ಅದರಲ್ಲಿ 42,580 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಕಳೆದ ವರ್ಷವೂ ಶೇ.100 ರಷ್ಟು ವಿದ್ಯಾರ್ಥಿ ವೇತನ ಯೋಜನೆ ಅನುಷ್ಠಾನ ಮಾಡಿರಲಿಲ್ಲ.

ದಾಖಲೆ ಇಲ್ಲ: ಬೆಂಗಳೂರು ನಗರದಲ್ಲಿನ ಸರಕಾರಿ ಶಾಲೆಗಳಲ್ಲಿ ರಾಜ್ಯದ ಬೇರೆ ಬೇರೆ ಮೂಲೆಗಳಿಂದ ವಲಸೆ ಬಂದಿರುವ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಉದ್ಯೋಗ ಅರಸಿ ಬೆಂಗಳೂರಿಗೆ ಬಂದವರ ಬಳಿ ಸರಿಯಾದ ದಾಖಲೆಗಳಿಲ್ಲ. ಹೀಗಾಗಿ, ಅವರೆಲ್ಲರೂ ಈ ಯೋಜನೆಯಿಂದ ದೂರ ಉಳಿಯುವಂತಾಯಿತು.

ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿಗೆ ಈ ಯೋಜನೆ ತಲುಪಿಸುವ ಉದ್ದೇಶದಿಂದ ಶಿಕ್ಷಕರೇ ಆನ್‌ಲೈನ್ ಅರ್ಜಿ ಸಲ್ಲಿಸಲು ಪೋಷಕರಿಗೆ ನೆರವಾಗುತ್ತಿದ್ದರು. ಆದರೂ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಆಧಾರ್ ಕಾರ್ಡ್ ಸೇರಿದಂತೆ ಹಲವು ದಾಖಲೆಗಳಿರಲಿಲ್ಲ ಎಂದು ಶಿಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

ಶಿಕ್ಷಕರು ಮತ್ತು ಕ್ಷೇತ್ರ ಶಿಕ್ಷಣ ಸಂಯೋಜನಾಧಿಕಾರಿಗಳು ದಸರಾ ಸೇರಿದಂತೆ ಇನ್ನಿತರ ರಜೆ ದಿನಗಳಲ್ಲೂ ಕೆಲಸ ಮಾಡಿದ್ದಾರೆ. ಆದರೆ ಸರ್ವರ್‌ಗಳಲ್ಲಿ ಕಂಡು ಬರುತ್ತಿದ್ದ ತಾಂತ್ರಿಕ ದೋಷಗಳಿಂದಾಗಿ ಶಿಕ್ಷಕರ ಶ್ರಮ ವ್ಯರ್ಥವಾಗಿದೆ ಎಂದು ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ‘ರಾಷ್ಟ್ರೀಯ ವಿದ್ಯಾರ್ಥಿ ವೇತನ ತಂತ್ರಾಂಶ’ ಯೋಜನೆ ಜಾರಿಗೆ ಮುಂದಾದಗಲೂ ಇದೇ ಸಮಸ್ಯೆ ಎದುರಾಗಿತ್ತು. ವಿದ್ಯಾರ್ಥಿಗಳು ಮತ್ತು ಪೋಷಕರು ಆದಾಯ ಮತ್ತು ಜಾತಿ ಪ್ರಮಾಣಪತ್ರ ಪಡೆಯಲು ನಗರ ಜಿ.ಪಂ ಕಚೇರಿಯಲ್ಲಿ ಸಾಲುಗಟ್ಟಿ ನಿಂತಿದ್ದರು. ಈಗ ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ ಯೋಜನೆಗೂ ಅದೇ ಸಮಸ್ಯೆ ಕಾಡುತ್ತಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News