ಶ್ರೀಲಂಕಾ: 2ನೇ ಅವಿಶ್ವಾಸ ನಿರ್ಣಯದಲ್ಲೂ ರಾಜಪಕ್ಸಗೆ ಸೋಲು

Update: 2018-11-17 14:44 GMT

ಕೊಲಂಬೊ, ನ. 17: ಶ್ರೀಲಂಕಾದ ಪ್ರತಿಷ್ಠಾಪಿತ ಪ್ರಧಾನಿ ಮಹಿಂದ ರಾಜಪಕ್ಸ ವಿರುದ್ಧ ಸಂಸತ್ತು ಶುಕ್ರವಾರ ಎರಡನೇ ಅವಿಶ್ವಾಸ ನಿರ್ಣಯವನ್ನು ಅಂಗೀಕರಿಸಿದೆ.

ಈ ಸಂದರ್ಭದಲ್ಲಿ ದಾಂಧಲೆಗಿಳಿದ ರಾಜಪಕ್ಸ ಬೆಂಬಲಿಗ ಸಂಸದರು ಪ್ರತಿಪಕ್ಷ ಸಂಸದರತ್ತ ಮೆಣಸಿನ ಹುಡಿ ಎರಚಿದರು ಹಾಗೂ ಪೊಲೀಸರತ್ತ ಕುರ್ಚಿಗಳನ್ನು ಎಸೆದರು.

ರಾಜಪಕ್ಸ ಬೆಂಬಲಿಗ ಸಂಸದರು ಸ್ಪೀಕರ್ ಕರು ಜಯಸೂರಿಯರತ್ತ ಕೈಗೆ ಸಿಕ್ಕಿದ ವಸ್ತುಗಳನ್ನು ತೂರಿದರು ಎಂದು ‘ಡೇಲಿ ಮಿರರ್’ ವರದಿ ಮಾಡಿದೆ.

ಹಿಂಸಾಚಾರದ ಹೊರತಾಗಿಯೂ, ರಾಜಪಕ್ಸ ವಿರುದ್ಧ ಸಂಸತ್ತು ಅವಿಶ್ವಾಸ ನಿರ್ಣಯ ಕೈಗೊಳ್ಳುವುದನ್ನು ತಡೆಯುವಲ್ಲಿ ವಿಫಲರಾದರು.

ಕಳೆದ ತಿಂಗಳು ಪ್ರಧಾನಿ ರನಿಲ್ ವಿಕ್ರಮೆಸಿಂಘೆಯನ್ನು ಅನಿರೀಕ್ಷಿತವಾಗಿ ವಜಾಗೊಳಿಸಿ, ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಸರನ್ನು ನೂತನ ಪ್ರಧಾನಿಯಾಗಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಪ್ರತಿಷ್ಠಾಪಿಸಿದ ಬಳಿಕ ಹಿಂದೂ ಮಹಾಸಾಗರದ ದ್ವೀಪರಾಷ್ಟ್ರದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ನೆಲೆಸಿದೆ.

ಸ್ಪೀಕರ್ ಕುರ್ಚಿಯ ಸುತ್ತ ಸಂಸದರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಅಧಿವೇಶನ 30 ನಿಮಿಷ ತಡವಾಗಿ ಆರಂಭಗೊಂಡಿತು. ಹಿಂದಿನ ದಿನ ಸಂಸತ್ತಿಗೆ ಚೂರಿಗಳನ್ನು ತಂದ ವಿಕ್ರಮೆಸಿಂಘೆ ಪಕ್ಷದ ಇಬ್ಬರು ಸಂಸದರನ್ನು ಬಂಧಿಸಿ ಎಂಬುದಾಗಿ ಅವರು ಒತ್ತಾಯಿಸುತ್ತಿದ್ದರು.

ಗಲಾಟೆ ಆರಂಭಗೊಳ್ಳುತ್ತಿದ್ದಂತೆಯೇ, ಎರಡು ಡಝನ್‌ಗೂ ಅಧಿಕ ಪೊಲೀಸರು ಸ್ಪೀಕರ್‌ರ ಚೇಂಬರ್ ಪ್ರವೇಶಿಸಿ ಅವರನ್ನು ಸುತ್ತುವರಿದರು. ರಾಜಪಕ್ಸ ಪಕ್ಷದ ಸಂಸದರು ಪೊಲೀಸರತ್ತ ಪುಸ್ತಕಗಳು ಮತ್ತು ಕುರ್ಚಿಗಳನ್ನು ಎಸೆದರು. ಇದನ್ನು ರಾಜಪಕ್ಸ ತನ್ನ ಕುರ್ಚಿಯಲ್ಲಿ ಕುಳಿತು ನೋಡುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News