ಭಡ್ತಿ ಮೀಸಲಾತಿ ಮಸೂದೆ ಅನುಷ್ಠಾನಕ್ಕೆ ಆಗ್ರಹ: ಮಾಜಿ ಸಿಎಂ ಸಿದ್ದರಾಮಯ್ಯ ಮನೆ ಮುಂದೆ ಧರಣಿ

Update: 2018-11-17 14:44 GMT

ಬೆಂಗಳೂರು, ನ.17: ಪರಿಶಿಷ್ಠ ನೌಕರರ ಭಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ಹಿಂದಿನ ಸರಕಾರ ಜಾರಿಗೆ ತಂದಿದ್ದ ಭಡ್ತಿ ಮೀಸಲಾತಿ ಕಾಯ್ದೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಮ್ಮಿಶ್ರ ಸರಕಾರ ಮುಂದಿನ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಿ, ನಿರ್ಣಯ ಕೈಗೊಳ್ಳಬೇಕು ಎಂದು ಆಗ್ರಹಿಸಿ ನೂರಾರು ಪರಿಶಿಷ್ಟ ನೌಕರರು ಮಾಜಿ ಸಿಎಂ ಸಿದ್ದರಾಮಯ್ಯ ಮನೆ ಎದುರು ಧರಣಿ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ನೌಕರರ ಸಂಘದ ಮುಖಂಡ ವಿಜಯ ಕುಮಾರ್, ಹಿಂದಿನ ಸರಕಾರದ ಅವಧಿಯಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದ ರತ್ನಪ್ರಭಾ ನೇತೃತ್ವದಲ್ಲಿನ ಸಮಿತಿಯು ಪರಿಶಿಷ್ಟ ನೌಕರರ ಕುರಿತು ಕೂಲಂಕಷವಾದ ವರದಿಯನ್ನು ಸರಕಾರಕ್ಕೆ ಸಲ್ಲಿಸಿತ್ತು. ಅದರ ಆಧಾರದ ಮೇಲೆ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ವಿರುದ್ಧವಾಗಿ ರಾಜ್ಯ ಸರಕಾರ ಭಡ್ತಿ ಮೀಸಲಾತಿ ಮಸೂದೆಯನ್ನು ರಚನೆ ಮಾಡಲಾಗಿತ್ತು ಎಂದು ಹೇಳಿದರು.

ರಾಜ್ಯ ಸರಕಾರ ರಚಿಸಿದ್ದ ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕಲು ಹಿಂದೇಟು ಹಾಕಿದ್ದರಿಂದ ಬೆಳಗಾವಿಯ ಅಧಿವೇಶನದಲ್ಲಿ ಮಂಡಿಸಿದರೂ, ಅದಕ್ಕೆ ಅನುಮತಿ ಸಿಗಲಿಲ್ಲ. ಅನಂತರ ರಾಷ್ಟ್ರಪತಿ ಆ ಮಸೂದೆಗೆ ಅಂಕಿತ ಹಾಕಿದರು. ಸಿದ್ದರಾಮಯ್ಯ ನೇತೃತ್ವದ ಸರಕಾರಕ್ಕೆ ಅದನ್ನು ಜಾರಿ ಮಾಡಲು ಸಮಯಾವಕಾಶ ಸಿಗಲಿಲ್ಲ. ಆದರೆ, ಸಮ್ಮಿಶ್ರ ಸರಕಾರದಲ್ಲಿ ಮಸೂದೆಯನ್ನು ಜಾರಿ ಮಾಡುವ ಸಲುವಾಗಿ ಸರಕಾರದ ರಾಜ್ಯಪತ್ರದಲ್ಲಿ ಪ್ರಕಟಿಸಿದ್ದರೂ, ಅದನ್ನು ಅನುಷ್ಠಾನ ಮಾಡಲು ಮುಂದಾಗಿಲ್ಲ ಎಂದು ಅವರು ದೂರಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಭಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ಕೇಸ್ ಇದೆ ಎಂದು ಮಸೂದೆಯನ್ನು ಅನುಷ್ಠಾನಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಅಟಾರ್ನಿ ಜನರಲ್ ಉದಯ ಹೊಳ್ಳ ಪವಿತ್ರ ಪ್ರಕರಣದ ತೀರ್ಪನ್ನು ಜಾರಿಗೆ ಸಾಧ್ಯವಾಗ್ತಿಲ್ಲ ಎಂದು ವಾದಿಸಿದ್ದರೆ, ಪರಿಶಿಷ್ಟರ ಭಡ್ತಿ ಮೀಸಲಾತಿ ಪರವಾಗಿ ವಾದ ಮಾಡುತ್ತಿರುವ ಸರಕಾರದ ವಕೀಲ ಮುಖುಲ್ ರೋಹಟ್ಗಿ ರಾಜ್ಯ ಸರಕಾರ ತನ್ನ ರಾಜ್ಯಪತ್ರದಲ್ಲಿ ಪ್ರಕಟಿಸಿದ್ದು, ಮೌಖಿಕವಾಗಿ ತಡೆಯಲು ಆಗುವುದಿಲ್ಲ. ಹೀಗಾಗಿ, ಜಾರಿಗೆ ಅವಕಾಶ ನೀಡಬೇಕು ಎಂದು ಕೋರಿದ್ದು, ಸುಪ್ರೀಂಕೋರ್ಟ್ ಅದಕ್ಕೆ ಅನುಮತಿ ನೀಡಿದೆ ಎಂದರು.

ಪರಿಶಿಷ್ಟರ ಭಡ್ತಿ ಮೀಸಲಾತಿ ಅನುಷ್ಠಾನಕ್ಕೆ ಸುಪ್ರೀಂಕೋರ್ಟ್ ಅವಕಾಶ ನೀಡಿದ್ದರೂ ಮುಖ್ಯಮಂತ್ರಿ ಹಾಗೂ ಸಚಿವ ಎಚ್.ಡಿ.ರೇವಣ್ಣ ಅದಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ. ಹೀಗಾಗಿ, ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ಮುಂದೆ ನಡೆಯಲಿರುವ ಸಮನ್ವಯ ಸಮಿತಿ ಸಭೆಯಲ್ಲಿ ಈ ಸಂಬಂಧ ಚರ್ಚೆ ನಡೆಸಿ, ಅದನ್ನು ಅನುಷ್ಠಾನ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News