ಮಾರುಕಟ್ಟೆಗೆ ಅನುಗುಣವಾಗಿ ಬೆಳೆ ಪದ್ಧತಿ ರೂಢಿಸಿಕೊಳ್ಳಿ: ಎಚ್.ಡಿ.ದೇವೇಗೌಡ

Update: 2018-11-17 14:53 GMT

ಬೆಂಗಳೂರು, ನ.17: ರೈತರು ಬೆಳೆ ವಿಧಾನಗಳನ್ನು ಬದಲಾವಣೆ ಮಾಡಿಕೊಂಡು, ಮಾರುಕಟ್ಟೆಗೆ ಅನುಗುಣವಾಗಿ ಬೆಳೆ ಬೆಳೆಯುವ ಪದ್ಧತಿಯನ್ನು ರೂಢಿಸಿಕೊಳ್ಳಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸಲಹೆ ನೀಡಿದ್ದಾರೆ.

ಕೃಷಿ ಮೇಳದ ಅಂಗವಾಗಿ ನಗರದ ಜಿಕೆವಿಕೆಯಲ್ಲಿ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರೈತರು ಲಾಭದಾಯಕ ಬೆಳೆಗಳನ್ನೇ ಬೆಳೆಯುತ್ತಾ ಹೋದರೆ ಬೆಲೆ ಏರು-ಪೇರಾಗುತ್ತದೆ. ಹೀಗಾಗಿ, ಜನರಿಗೆ ಅಗತ್ಯವಾದ ಹಾಗೂ ಮಾರುಕಟ್ಟೆಗೆ ಅನುಗುಣವಾಗಿರುವ ಬೆಳೆಗಳನ್ನು ಬೆಳೆಯಬೇಕು ಎಂದು ಹೇಳಿದರು.

ಎಂ.ವಿ.ಕೃಷ್ಣಪ್ಪರಾಜ್ಯದ ಹಾಲು ಉತ್ಪಾದನೆಯಲ್ಲಿ ಇಟ್ಟ ದಿಟ್ಟ ಹೆಜ್ಜೆಯು ಕರ್ನಾಟಕದಲ್ಲಿ ಶ್ವೇತ ಕ್ರಾಂತಿಗೆ ನಾಂದಿಯಾಡಿತು. ಇದರ ಫಲವಾಗಿ ಈ ದಿನ ನಾವು ಗುಜರಾತ್ ರಾಜ್ಯಕ್ಕೆ ಸರಿಸಮಾನವಾಗಿ ಹಾಲು ಉತ್ಪಾದಿಸಲು ಕಾರಣವಾಗಿದೆ. ನಾನು ದೇಶದ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ವರ್ಗೀಸ್ ಕುರಿಯನ್‌ರೊಂದಿಗೆ ಚರ್ಚಿಸಿ ಹಾಲಿನ ಫೆಡರೇಷನ್ ಪ್ರಾರಂಭಿಸಲು ಸೂಚಿಸಿದ್ದರಿಂದ ಕರ್ನಾಟಕದಲ್ಲಿ ಹಾಲಿನ ಕ್ರಾಂತಿಯಾಯಿತು. ಕೋಲಾರದ ರೈತರಿಗೆ ನೀರಿನ ಬವಣೆಯಿದ್ದರೂ ಮಿಲ್ಕ್ ಮತ್ತು ಸಿಲ್ಕ್ ಉತ್ಪಾದನೆಯಲ್ಲಿ ಅವರ ಸಾಧನೆ ಪ್ರಶಂಸನೀಯ ಎಂದು ಬಣ್ಣಿಸಿದರು.

ಕೃಷಿ ಮೇಳವು ಅತ್ಯಂತ ಮಹತ್ವನೀಯವಾದುದಾಗಿದ್ದು, ಸಾವಿರಾರು ಜನರಿಗೆ ಕೃಷಿಯ ವಿವಿಧ ವಿಧಾನಗಳನ್ನು ಪರಿಚಯಿಸುವುದು ಅತ್ಯಗತ್ಯ. ಅದರ ಜತೆಗೆ ಆಧುನೀಕತೆಗೆ ಅನುಗುಣವಾಗಿ ಹೊಸ ಹೊಸ ವಿಧಾನಗಳನ್ನು ರೈತರಿಗೆ ಪರಿಚಯ ಮಾಡುತ್ತಿರುವುದು ಶ್ಲಾಘನೀಯ. ರೈತರ ಕುಂದು ಕೊರತೆಗಳನ್ನು ಚೆನ್ನಾಗಿ ಅರಿತು, ಸೂಕ್ತ ಮಾರ್ಗದರ್ಶನಗಳನ್ನು ನೀಡಬೇಕಿದೆ. ಈ ನಿಟ್ಟಿನಲ್ಲಿ ಮೇಳಗಳು ಸಾರ್ಥಕ ಎನಿಸುತ್ತವೆ ಎಂದರು.

ಈ ಸಂದರ್ಭದಲ್ಲಿ ವಿವಿಧ ಜಿಲ್ಲೆಗಳ ರೈತರನ್ನು ಸನ್ಮಾನಿಸಿ, ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಹಕಾರಿ ಸಚಿವ ಬಂಡೆಪ್ಪ ಕಾಶೆಂಪೂರ, ಕುಲಪತಿ ಡಾ.ಎಸ್.ರಾಜೇಂದ್ರ ಪ್ರಸಾದ್, ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ.ಪ್ರಕಾಶ್ ಕಮ್ಮರಡಿ, ಕರ್ನಾಟಕ ಆಹಾರ ನಿಗಮದ ಅಧ್ಯಕ್ಷ ಡಾ.ಕೃಷ್ಣಮೂರ್ತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News