ವಾರ್ಡ್ ಸಮಿತಿಗಳ ಪಾರದರ್ಶಕ ನಿರ್ವಹಣೆಯಿಂದ ಅಭಿವೃದ್ಧಿ ಸಾಧ್ಯ: ಬಿ.ಎಲ್.ಶಂಕರ್

Update: 2018-11-17 15:04 GMT

ಬೆಂಗಳೂರು, ನ.17: ನಗರದಲ್ಲಿ ಅಭಿವೃದ್ಧಿಯಾಗಬೇಕಾದರೆ ವಾರ್ಡ್ ಸಮಿತಿಗಳು ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಆದರೆ, ಬೆಂಗಳೂರು ನಗರದಲ್ಲಿ ವಾರ್ಡ್ ಸಮಿತಿಗಳು ಪಾರದರ್ಶಕವಾಗಿ ಹಾಗೂ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಎಂದು ಮಾಜಿ ವಿಧಾನಸಭಾಧ್ಯಕ್ಷ ಬಿ.ಎಲ್.ಶಂಕರ್ ಬೇಸರ ವ್ಯಕ್ತಪಡಿಸಿದ್ದಾರೆ.

ಶನಿವಾರ ನಗರದ ಭಾರತೀಯ ವಿದ್ಯಾಭವನದಲ್ಲಿ ಬಿ.ಪ್ಯಾಕ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ ‘ನಗರ ಅಧಿಕಾರ ಹಾಗೂ ಆಡಳಿತ’ ಕುರಿತ ಚರ್ಚಾಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸ್ಥಳೀಯ ಮಟ್ಟದಲ್ಲಿ ಸಭೆಗಳನ್ನು ನಡೆಸಿ, ಅಲ್ಲಿನ ಸಮಸ್ಯೆಗಳ ಆಧಾರದ ಮೇಲೆ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕಿದೆ. ಆದರೆ, ವಾರ್ಡ್ ಮಟ್ಟದ ಸಭೆಗಳು ಸಮರ್ಪಕವಾಗಿ ಆಗದೆ ಇರುವುದರಿಂದಲೇ ನಗರದಲ್ಲಿ ಸಮಸ್ಯೆ ಉದ್ಭವವಾಗಲು ಕಾರಣವಾಗುತ್ತಿದೆ ಎಂದರು.

ರಾಮಕೃಷ್ಣ ಹೆಗಡೆ ಅವರು ಭಾರತಕ್ಕೆ ಸ್ವಾತಂತ್ರ ನೀಡಬೇಡಿ, ನೀಡಿದರೆ ಜಾತಿ, ಧರ್ಮ ಎಂಬ ಹೆಸರಿನಲ್ಲಿ ಸಮಾಜ ಹಾಳಾಗುತ್ತದೆ ಎಂದಿದ್ದರು. ಇಂದು ಜಾತಿರಾಜಕಾರಣ ಭ್ರಷ್ಟಾಚಾರದಿಂದ ಸಮಾಜ ಹಾಳಾಗಿದ್ದು, ರಾಜಕಾರಣಿಗಳು ಭ್ರಷ್ಟರಲ್ಲಿ ಮೊದಲನೇ ಸ್ಥಾನದಲ್ಲಿದ್ದಾರೆ. ಎರಡನೆಯ ಸ್ಥಾನದಲ್ಲಿ ಅಧಿಕಾರಿಗಳು ಹಾಗೂ ಮೂರನೆಯವರು ಕಾರ್ಪೊರೇಟರ್‌ಗಳಾಗಿದ್ದಾರೆ ಎಂದ ಅವರು ತಿಳಿಸಿದರು.

ಶಾಸಕ ಸುರೇಶ್ ಕುಮಾರ್ ಮಾತನಾಡಿ, ಮತದಾರರ ಪಟ್ಟಿಯ ಶುದ್ಧೀಕರಣ ಎಲ್ಲಿಯವರೆಗೂ ನಡೆಯುದಿಲ್ಲವೋ ಅಲ್ಲಿಯವರೆಗೂ ಹೆಚ್ಚು ಮತದಾನ ಸಾಧ್ಯವಿಲ್ಲ. ನಗರ ಪ್ರದೇಶದಲ್ಲಿ ವಾಸ ಮಾಡುತ್ತಿರುವವರು ಎರಡೆರಡು ಕಡೆ ಹೆಸರು ಹೊಂದಿರುತ್ತಾರೆ. ನಗರದಲ್ಲಿ ಹೆಸರಿದ್ದರೂ, ತಮ್ಮ ಊರಿನಲ್ಲಿಯೇ ಮತದಾನ ಮಾಡುತ್ತಾರೆ. ಇದರಿಂದಾಗಿ ಮತದಾನ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಹೇಳಿದರು.

ಆಧಾರ್ ಲಿಂಕ್ ಮಾಡಿ: ಮತದಾರರ ಪಟ್ಟಿಯು ಪರಿಪೂರ್ಣವಾಗಿ ಇರಬೇಕಾದರೆ ಹಾಗೂ ಒಂದೇ ಸ್ಥಳದಲ್ಲಿ ಮತದಾನ ಮಾಡಲು ಅವಕಾಶ ಸಿಗಬೇಕಾದರೆ ಮತದಾರರ ಪಟ್ಟಿಗೆ ಆಧಾರ್ ಜೋಡಣೆ ಮಾಡುವುದು ಉತ್ತಮ. ಇದರಿಂದ ಮತದಾನವೂ ಹೆಚ್ಚಾಗುತ್ತದೆ ಎಂದ ಅವರು, ಇಂದು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾವಂತರೇ ಹಣ ಪಡೆದು ಮತ ಚಲಾವಣೆ ಮಾಡುತ್ತಿರುವುದು ದುರಂತ ಎಂದು ಸುರೇಶ್ ಕುಮಾರ್ ನುಡಿದರು.

ಪತ್ರಕರ್ತ ಮಹದೇವ ಪ್ರಕಾಶ್ ಮಾತನಾಡಿ, ಭ್ರಷ್ಟಾಚಾರಿಗಳಿಗೆ ಸಿಂಹಸ್ವಪ್ನವಾಗಿದ್ದ ಲೋಕಾಯುಕ್ತವು ಹಲ್ಲುಕಿತ್ತ ಹಾವಿನಂತಾಗಿದೆ. ಹಿಂದೆ ಮುಖ್ಯಮಂತ್ರಿಯಂತಹವರನ್ನೇ ಜೈಲಿಗೆ ಕಳಿಸಿದ ಇತಿಹಾಸವಿದೆ. ಆದರೆ, ಇಂದು ಎಲ್ಲಿ ನೋಡಿದರೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ರಾಜಕಾರಣಿಗಳೂ ಭ್ರಷ್ಟಾಚಾರದಲ್ಲಿ ಶಾಮೀಲಾಗುತ್ತಿರುವುದು ಅಸಹ್ಯ ಹುಟ್ಟಿಸುತ್ತದೆ ಎಂದರು.

ಸರಕಾರಿ ಕಚೇರಿಗಳಲ್ಲಿ ಹಣ ಮತ್ತು ಅಧಿಕಾರದ ಬಲವಿದ್ದರೆ ಕೆಲಸವಾಗುತ್ತದೆ ಎಂಬ ಭಾವನೆ ಜನರಲ್ಲಿದೆ. ಚಾರ್ಟೆಡ್ ಅಕೌಂಟೆಂಟ್ ಆಗಬೇಕೆಂದರೆ ಸಿಎ, ಡಾಕ್ಟರ್ ಆಗಬೇಕೆಂದರೆ ಎಂಬಿಬಿಎಸ್ ಓದಬೇಕು. ಆದರೆ ಪತ್ರಿಕೋದ್ಯಮದಲ್ಲಿ ಡ್ರೈವರ್ ಅಥವಾ ಅಟೆಂಡರ್ ಯಾರಾದರು ಪತ್ರಿಕೆಯನ್ನು ಪ್ರಾರಂಭಿಸಿ ಅಧಿಕಾರಿಗಳ ವಿರುದ್ಧ ಬರೆಯಬಹುದು. ಇಂದು ಮೌಲ್ಯಾಧಾರಿತ ಪತ್ರಿಕೋದ್ಯಮ ನಶಿಸಿ ಹೋಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಚರ್ಚಾಗೋಷ್ಠಿಯಲ್ಲಿ ಮಾಜಿ ಸಚಿವೆ ಲೀಲಾದೇವಿ ಆರ್ ಪ್ರಸಾದ್, ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್, ಶ್ರೀನಿವಾಸಮೂರ್ತಿ, ಪ್ರೊ. ಸುದೀರ್ ಕೃಷ್ಣಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮೇಯರ್ ಅಧಿಕಾರ ಅವಧಿ ಹೆಚ್ಚಾಗಬೇಕು

ಬಿಬಿಎಂಪಿ ಸೇರಿದಂತೆ ಮಹಾನಗರ ಪಾಲಿಕೆಗಳಲ್ಲಿ ಮೇಯರ್ ಅಧಿಕಾರದ ಅವಧಿ ಒಂದು ವರ್ಷದಿಂದ ಕನಿಷ್ಠ ಎರಡೂವರೆ ವರ್ಷಕ್ಕೆ ಹೆಚ್ಚಳ ಮಾಡಬೇಕು. ಒಂದು ವರ್ಷದ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಮಾಡಲು ಸಾಧ್ಯವಿಲ್ಲ. ಮಹಿಳೆಯರು ರಾಜಕೀಯಕ್ಕೆ ಬರುವುದು ಮುಖ್ಯ. ಅಧಿಕಾರವಿದ್ದರೆ ಅಷ್ಟೇ ನಮಗೆ ಬೆಲೆ ಸಿಗುತ್ತದೆ. ಆದರೆ, ಇಂದು ಸ್ವತಂತ್ರವಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಸಾಧ್ಯವಿಲ್ಲ. ಹಣ, ಜಾತಿ, ಧರ್ಮದ ಮೇಲೆ ಚುನಾವಣೆಗಳು ನಡೆಯುತ್ತಿವೆ.

-ಲೀಲಾದೇವಿ ಆರ್.ಪ್ರಸಾದ್, ಮಾಜಿ ಸಚಿವೆ

ರಸ್ತೆ, ಕಾಲುವೆ, ಉದ್ಯಾನವನಗಳು ಸೇರಿದಂತೆ ನಗರದ ಅಭಿವೃದ್ಧಿಗಾಗಿ ಸಾಕಷ್ಟು ಹಣದ ಕೊರತೆ ಎದುರಾಗುತ್ತಿದೆ. ಅಲ್ಲದೆ, ಪಾಲಿಕೆಯಲ್ಲಿನ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕಾದ ಅಗತ್ಯವಿದೆ. ಅಗತ್ಯವಿರುವಷ್ಟು ಮಾನವಶಕ್ತಿಯಿಲ್ಲದೆ ಎಲ್ಲ ಕೆಲಸ ಮಾಡಲು ಆಗುವುದಿಲ್ಲ. ಆಸ್ತಿ ತೆರಿಗೆ ಹಾಗೂ ಮತ್ತಿತರ ತೆರಿಗೆಗಳಿಂದಲೇ ಎಲ್ಲವನ್ನೂ ಕಾಲ-ಕಾಲಕ್ಕೆ ತಕ್ಕಂತೆ ಸರಿದೂಗಿಸಿಕೊಂಡು ಹೋಗಲಾಗುತ್ತಿದೆ.

-ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News