ಕೇಂದ್ರ ಸರಕಾರದ ವಿರುದ್ಧ ದಿಲ್ಲಿ ಚಲೋ: ಸಚಿವ ಬಂಡೆಪ್ಪ ಕಾಶೆಂಪೂರ್

Update: 2018-11-17 15:11 GMT

ಬೆಂಗಳೂರು, ನ.17: ಸಹಕಾರಿ ಬ್ಯಾಂಕ್‌ಗಳ ಲಾಭದ ಮೇಲೆ ಕೇಂದ್ರ ಸರಕಾರ ಶೇ.33ರಷ್ಟು ತೆರೆಗೆ ವಿಧಿಸುತ್ತಿದೆ. ಇದರಿಂದ ಸಹಕಾರಿ ಬ್ಯಾಂಕ್‌ಗಳು ಜನಪರ ಕಾರ್ಯಕ್ರಮಗಳಿಗೆ ಹಣ ಒದಗಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಕಾನೂನನ್ನು ಕೂಡಲೆ ವಾಪಸ್ ಪಡೆಯಬೇಕೆಂದು ಆಗ್ರಹಿಸಲು ಶೀಘ್ರದಲ್ಲಿಯೆ ದಿಲ್ಲಿ ಚಲೋ ನಡೆಸಲಾಗುವುದು ಎಂದು ಸಹಕಾರಿ ಸಚಿವ ಬಂಡೆಪ್ಪ ಕಾಶೆಂಪೂರ್ ತಿಳಿಸಿದರು.

ಶನಿವಾರ ಸಹಕಾರಿ ಇಲಾಖೆಯಡಿ ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕ್‌ಗಳ ಮಹಾಮಂಡಳ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನೇತೃತ್ವದಲ್ಲಿ ನಗರದ ಶಿಕ್ಷಕರ ಸದನದಲ್ಲಿ ಆಯೋಜಿಸಿದ್ದ 65ನೆ ಅಖಿಲ ಭಾರತ ಸಹಕಾರ ಸಪ್ತಾಹ -2018 ಉದ್ಘಾಟಿಸಿ ಅವರು ಮಾತನಾಡಿದರು.

ಸಹಕಾರಿ ಬ್ಯಾಂಕ್‌ಗಳು ಲಾಭಗಳಿಕೆಯ ಉದ್ದೇಶದಿಂದ ಕಾರ್ಯನಿರ್ವಹಿಸುವುದಿಲ್ಲ. ಸ್ವ ಉದ್ಯೋಗಿಗಳಿಗೆ, ರೈತರಿಗೆ, ಕೃಷಿ ಕಾರ್ಮಿಕರಿಗೆ ಸಾಲ ಸೇರಿದಂತೆ ಜನಪರವಾದಂತಹ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಹಣವನ್ನು ವಿನಿಯೋಗಿಸುತ್ತದೆ. ಹೀಗಾಗಿ ಕೇಂದ್ರ ಸರಕಾರ ಸಹಕಾರಿ ಬ್ಯಾಂಕ್‌ಗಳ ಲಾಭದ ಮೇಲೆ ತೆರಿಗೆ ವಿಧಿಸುತ್ತಿರುವ ಕಾನೂನನ್ನು ಕೂಡಲೆ ಹಿಂಪಡೆಯಬೇಕೆಂದು ಅವರು ಒತ್ತಾಯಿಸಿದರು.

ಸಹಕಾರಿ ಬ್ಯಾಂಕ್‌ಗಳನ್ನು ಆರ್ಥಿಕವಾಗಿ ಉತ್ತೇಜಿಸುವ ನಿಟ್ಟಿನಲ್ಲಿ ಸರಕಾರದ ವಿವಿಧ ಯೋಜನೆಗಳಿಗೆ ಮಂಜೂರಾಗಿರುವ ಹಣವನ್ನು ಸಹಕಾರಿ ಬ್ಯಾಂಕ್‌ಗಳಲ್ಲೂ ಠೇವಣಿ ಇಟ್ಟು, ಜನಪರ ಕಾರ್ಯಕ್ರಮಗಳಿಗೆ ವಿನಿಯೋಗಿಸಲಾಗುವುದು ಎಂದು ಅವರು ಹೇಳಿದರು.

ಸಹಕಾರಿ ಸಂಸ್ಥೆಗಳು ಹಳ್ಳಿಗಳತ್ತ ಹೆಚ್ಚು ಗಮನ ಹರಿಸಿ, ಈ ಭಾಗದ ಜನತೆಗೆ ಹೆಚ್ಚು ಸಾಲ ಕೊಡಬೇಕು. ಪಟ್ಟಣದಲ್ಲೂ ಜನರ ಅಗತ್ಯಕ್ಕೆ ತಕ್ಕಂತೆ ಸಾಲ ನೀಡಿದರೆ ಸಮಾಜದ ಅಭಿವೃದ್ಧಿ ಸಾಧ್ಯವಾಗಲಿದೆ. ಹಾಗೂ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿರುವ ಸಹಕಾರಿ ಸಂಸ್ಥೆಗಳನ್ನು ರಾಜ್ಯ ಸರಕಾರ ಸಶಕ್ತಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ನೆರೆಯ ಮಹಾರಾಷ್ಟ್ರದಲ್ಲಿ ಸಹಕಾರ ಕ್ಷೇತ್ರ ಅದರಲ್ಲೂ ಸಕ್ಕರೆ ಕ್ಷೇತ್ರ ಬಹಳ ಪ್ರಭಾವಿಯಾಗಿದೆ. ನಮ್ಮಲ್ಲಿ ಸಹಕಾರ ಕ್ಷೇತ್ರದ 30 ಸಕ್ಕರೆ ಕಾರ್ಖಾನೆಗಳ ಪೈಕಿ ಎಲ್ಲವೂ ಮುಚ್ಚಿ ಈಗ ಏಳು ಮಾತ್ರ ಉಳಿದಿವೆ. ಬೀದರ್‌ನ ಸಕ್ಕರೆ ಕಾರ್ಖಾನೆ 1969ರಲ್ಲಿ ಆರಂಭವಾಗಿ, ಈಗ ನಷ್ಟದಲ್ಲಿದೆ. ಅದರ ಪುನಶ್ಚೇತನಕ್ಕೆ ಸರಕಾರದಿಂದ 20 ಕೋಟಿ ರೂ.ಅನುದಾನ ತೆಗೆದುಕೊಳ್ಳಲು ನಾನು ಮತ್ತು ಜಿಲ್ಲೆಯ ಇನ್ನೊಬ್ಬ ಸಚಿವರು ಪರದಾಡಬೇಕಾಯಿತು. ಸಹಕಾರಿ ಕ್ಷೇತ್ರಕ್ಕೆ ಇಂತಹ ದುಸ್ಥಿತಿ ಬಂದಿರುವುದರ ಕುರಿತು ಎಲ್ಲರೂ ಗಂಭೀರವಾಗಿ ಚಿಂತಿಸಬೇಕಿದೆ ಎಂದು ಅವರು ತಿಳಿಸಿದರು.

ಎನ್‌ಸಿಡಿ ಸಿಯಿಂದ ಕರ್ನಾಟಕ ಈವರೆಗೂ ಯಾವುದೇ ನೆರವು ಪಡೆದುಕೊಂಡಿಲ್ಲ. ನೆರೆಯ ಆಂಧ್ರ ಪ್ರದೇಶ ಹಾಗೂ ಇತರ ರಾಜ್ಯಗಳು ಮೂರು ವರ್ಷದಲ್ಲಿ 10 ಸಾವಿರ ಕೋಟಿ ರೂ.ಪಡೆದುಕೊಂಡಿವೆ. ಕೇಂದ್ರ ಕೃಷಿ ಸಚಿವರೊಂದಿಗೆ ನನಗೆ ಉತ್ತಮ ಭಾಂದವ್ಯವಿದೆ. ನೀವು ಪ್ರಸ್ತಾವನೆ ಕೊಡಿ 5 ವರ್ಷದಲ್ಲಿ 10 ಸಾವಿರ ಕೋಟಿ ಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ರಾಜ್ಯ ಸರಕಾರ ಪ್ರಸ್ತಾವನೆ ಕಳುಹಿಸಬೇಕಿದೆ ಎಂದು ಅವರು ಹೇಳಿದರು.

ಮಾಜಿ ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ಸಹಕಾರ ತತ್ವ ಅಧಿಕಾರಿಗಳಿಗೆ ಅರ್ಥವಾಗಿಲ್ಲ, ರಾಜಕಾರಣಿಗಳನ್ನು ಎದುರಾಳಿಗಳಂತೆ ನೋಡಿದ್ದರಿಂದ ಸಹಕಾರ ಕ್ಷೇತ್ರ ಹಿಂದುಳಿದಿದೆ. ನೂಲು, ಜವಳಿ ಕ್ಷೇತ್ರದಂತಹ ವಲಯವನ್ನು ದುರ್ಬಲಗೊಳಿಸಿದ್ದರಿಂದ ಖಾಸಗಿ ಗಾರ್ಮೆಂಟ್ಸ್ ಕಂಪೆನಿಗಳು ಬಲಿಷ್ಠವಾಗಿವೆ ಎಂದು ಆರೋಪಿಸಿದರು.

ರಾಜ್ಯದಲ್ಲಿ 36 ಸಾವಿರ ಕೋಟಿ ರೂ.ಠೇವಣಿ ಪಟ್ಟಣ ಸಹಕಾರ ಬ್ಯಾಂಕ್‌ಗಳಲ್ಲಿದೆ. ಅದರಲ್ಲಿ ಶೇ.10ರಷ್ಟನ್ನು ಅಂದರೆ ಸರಿ ಸುಮಾರು 10 ಸಾವಿರ ಕೋಟಿ ರೂ. ಆರ್‌ಬಿಐನ ಸೆಕ್ಷನ್ 25 ಬಳಸಿ ಸಹಕಾರಿ ಷೇರಿನಲ್ಲಿ ಮಾತ್ರ ಹೂಡಿಕೆ ಮಾಡಬೇಕೆಂದು ಸೂಚಿಸಲಾಗಿದೆ. ಇದರಿಂದ ಸಹಕಾರ ಕ್ಷೇತ್ರದ 10 ಸಾವಿರ ಕೋಟಿ ರೂ. ಇಲ್ಲವಾಗಿ ಜಿಲ್ಲಾ ಸಹಕಾರ ಬ್ಯಾಂಕ್‌ಗಳು ಖಾಲಿ ಹೊಡೆಯುತ್ತಿವೆ ಎಂದು ಅವರು ವಿಷಾದಿಸಿದರು.

2013ರ ವರೆಗೆ 2.5 ಲಕ್ಷ ಕೋಟಿಯಷ್ಟಿದ್ದ ಅನುತ್ಪಾದಕ ಆಸ್ತಿ (ಎನ್‌ಪಿ ಎ) 2014 ರಿಂದ 2018 ನಡುವೆ 10 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಸಾಲ ಪಡೆದು ಮರುಪಾವತಿಸದೆ ಅನುತ್ಪಾದಕ ಆಸ್ತಿಯನ್ನು ಹೆಚ್ಚಿಸಿದ ಕಾರ್ಪೋರೆಟ್ ಸಂಸ್ಥೆಗಳ ಹೆಸರನ್ನು ಬಹಿರಂಗ ಪಡಿಸಬಾರದೆಂದು ಒತ್ತಡ ಹೆಚ್ಚಾಗಿದೆ. ಅದೇ ಸಹಕಾರ ಸಂಸ್ಥೆಗಳಲ್ಲಿ ಶೇ.1ರಷ್ಟು ಅನುತ್ಪಾದಕ ಆಸ್ತಿ ಹೆಚ್ಚಾದರೂ ಸರಕಾರ ನೋಟಿಸ್ ನೀಡುವ ಕ್ರಮಕ್ಕೆ ಮುಂದಾಗುತ್ತದೆ. ಖಾಸಗಿ ಸಂಸ್ಥೆಗಳಿಗೆ ಇದೇ ರೀತಿಯ ನಿಯಮ ಯಾಕೆ ಅನ್ವಯಿಸಲ್ಲ ಎಂದು ಅವರು ಪ್ರಶ್ನಿಸಿದರು.

ಕಾರ್ಯಕ್ರಮದಲ್ಲಿ ಪರಿಷತ್ ಎಸ್.ರವಿ, ಪಟ್ಟಣ ಬಾಂಕ್‌ಗಳ ಮಹಾಮಂಡಲದ ಅಧ್ಯಕ್ಷ ಡಿ.ಟಿ.ಪಾಟೀಲ್, ನಿರ್ದೇಶಕರು ಮಾಜಿ ಶಾಸಕರಾದ ಎಎಂ ಹಿಂಡಸಗೇರಿ, ರಾಜ್ಯ ಸಹಕಾರ ಮಹಾಮಂಡಲದ ಅಧ್ಯಕ್ಷ ಎನ್.ಗಂಗಣ್ಣ, ಸಹಕಾರ ಸಂಘಗಳ ನಿಬಂಧಕರಾದ ಎಂ.ಕೆ.ಅಯ್ಯಪ್ಪ, ವಿಧಾನಪರಿಷತ್‌ನ ಮಾಜಿ ಸದಸ್ಯರಾದ ರಮೇಶ್ ಬಾಬು, ಮಾಜಿ ಶಾಸಕರಾದ ರಾಜಶೇಖರ ಮತ್ತಿತರರು ಹಾಜರಿದ್ದರು. ಉಡುಪಿಯ ಹಿರಿಯ ಸಹಕಾರಿ ಸರಳಯ್ಯ ಅವರಿಗೆ ಸಹಕಾರ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಬೀದರ್‌ನಲ್ಲಿ ಗಾರ್ಮೆಂಟ್ಸ್ ಕಂಪೆನಿ

ಖಾಸಗಿ ಕಂಪೆನಿಗಳು ಗಾರ್ಮೆಂಟ್ಸ್ ಉದ್ಯಮ ಸ್ಥಾಪಿಸಿ ಲಕ್ಷಾಂತರ ಜನರಿಗೆ ಉದ್ಯೋಗ ಕೊಡುವುದಾದರೆ ಸಹಕಾರಿ ಕ್ಷೇತ್ರಕ್ಕೆ ಯಾಕೆ ಸಾಧ್ಯವಿಲ್ಲ. ಹೀಗಾಗಿ ಪ್ರಾಯೋಗಿಕವಾಗಿ ಬೀದರ್‌ನಲ್ಲಿ ಸಹಕಾರಿ ಕ್ಷೇತ್ರದಿಂದ ಗಾರ್ಮೆಂಟ್ಸ್ ಆರಂಭಿಸಲು ಚಿಂತನೆ ನಡೆಸಲಾಗಿದೆ.

-ಬಂಡೆಪ್ಪ ಕಾಶೆಂಪೂರ್, ಸಹಕಾರಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News