ಹೆಂಡತಿಯ ಓಲೆ ಮಾರಿ ವೃತ್ತಿ ಜೀವನ ಆರಂಭಿಸಿದೆ: ಎಚ್.ಡಿ.ದೇವೇಗೌಡ

Update: 2018-11-17 16:14 GMT

ಬೆಂಗಳೂರು, ನ.17: ನನ್ನ ಹೆಂಡ್ತಿಯ ಕಿವಿಯಲ್ಲಿದ್ದ ಓಲೆಗಳನ್ನು ಮಾರಿ ಬಂದ ಹಣದಿಂದ ನಾನು ಕಂಟ್ರಾಕ್ಟರ್ ವೃತ್ತಿ ಆರಂಭಿಸಿದೆ. ಅಲ್ಲಿಂದ ಪ್ರಾರಂಭಗೊಂಡು ಪ್ರಧಾನಿ ಆಗುವವರೆಗೆ ಆಕೆಯ ತ್ಯಾಗ, ಪರಿಶ್ರಮದಿಂದ ನನ್ನ ಬೆಳವಣಿಯಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದರು.

ಶನಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ತಮ್ಮ ಬದುಕಿನ ಅನುಭವಗಳನ್ನು ಓದುಗರ ಮುಂದೆ ಬಿಚ್ಚಿಟ್ಟ ಅವರು, ನನ್ನ ಒಟ್ಟು ಬೆಳವಣಿಗೆಯಲ್ಲಿ ನನ್ನ ಹೆಂಡ್ತಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿಕೊಂಡೇ ನನಗೆ ಬದುಕಿಗೆ ಇಂದಿಗೂ ಸ್ಫೂರ್ತಿಯಾಗಿದ್ದಾಳೆ ಎಂದು ತಿಳಿಸಿದರು.

1953ರಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದರೂ, ವಿದ್ಯಾರ್ಥಿ ಜೀವನದಿಂದಲೂ ರಾಜಕೀಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದೆ. ಮೈಸೂರು ಪ್ರಾಂತ್ಯ ಸ್ವಾತಂತ್ರ ಭಾರತದ ಒಳಗೆ ಸೇರಲು ಹಿಂದೇಟು ಹಾಕುತ್ತಿದ್ದ ಸಂದರ್ಭದಲ್ಲಿ, ವಿದ್ಯಾರ್ಥಿ ನಾಯಕನಾಗಿ ಹೋರಾಟವನ್ನು ಮುನ್ನಡೆಸಿದ್ದೆ. ಆ ಸಂದರ್ಭದಲ್ಲಿ ನ್ಯಾಯಾಧೀಶರೊಬ್ಬರು ಈ ವಯಸ್ಸಿನಲ್ಲಿ ಹೋರಾಟದ ಬದಲಿಗೆ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಗಮನ ಕೊಡು ಎಂದು ತಿಳಿ ಹೇಳಿದ್ದರು ಎಂದು ಸ್ಮರಿಸಿಕೊಂಡರು.

ಅರಸು ಅಪ್ರತಿಮ ನಾಯಕ: ದೇಶದ ಭವಿಷ್ಯದಲ್ಲಿ ದೇವರಾಜ ಅರಸು ಅಂತಹ ಮಾನವೀಯ, ಧೀಮಂತ ನಾಯಕನನ್ನು ನೋಡಲು ಸಾಧ್ಯವಿಲ್ಲ. ರಾಜ್ಯ, ದೇಶದಲ್ಲಿ ಅನೇಕ ಮಂದಿ ಮುಖ್ಯಮಂತ್ರಿಗಳು ಬಂದು ಹೋಗಿದ್ದಾರೆ. ಅವರಲ್ಲಿ ನಾನು ಅತ್ಯಂತ ಇಷ್ಟ ಪಡುವ ನಾಯಕರಲ್ಲಿ ದೇವರಾಜ ಅರಸು ಮೊದಲಿಗರು ಎಂದು ಅವರು ಹೇಳಿದರು.

ದೇವರಾಜ ಅರಸು ಮುಖ್ಯಮಂತ್ರಿಯಾಗಿ, ನಾನು ವಿರೋಧ ಪಕ್ಷದ ನಾಯಕನಾಗಿ ಸದನದಲ್ಲಿ ನಡೆಯುತ್ತಿದ್ದ ಚರ್ಚೆಗಳು ಸ್ಮರಣೀಯವಾದದ್ದು. ನಾನು ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದರೂ ಅವರೆಂದೂ ವೈಯಕ್ತಿಕವಾಗಿ ನನ್ನ ಮೇಲೆ ಹಗೆ ಸಾಧಿಸಿದವರಲ್ಲ. ಖಾಸಗಿಯಾಗಿ ಅವರು ನನ್ನೊಂದಿಗೆ ಅನ್ಯೋನ್ಯವಾಗಿದ್ದರು ಎಂದು ಅವರು ಹೇಳಿದರು.

ಮುಖ್ಯಮಂತ್ರಿಯಾಗಿ ದೇವರಾಜ ಅರಸು ತನಗಾಗಿ, ತನ್ನ ಕುಟುಂಬಕ್ಕಾಗಿ ಏನೇನು ಮಾಡಿಕೊಂಡವರಲ್ಲ. ಆದರೂ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದ್ದು ದುರಾದೃಷ್ಟಕರ. ತಮ್ಮ ಇಡೀ ಬದುಕನ್ನು ಬಡವರ, ಶೋಷಿತರ ಏಳ್ಗೆಗೆ ಮೀಸಲಿಟ್ಟವರು ಎಂದು ಅವರು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲಾ, ಇಲಾಖೆಯ ನಿರ್ದೇಶಕ ವಿಶುಕುಮಾರ್ ಹಾಗೂ ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News