ರೈತರಿಗೆ ಸಂತಸ ತಂದ ಫಾರ್ಮ್ರೈಸ್ ಆ್ಯಪ್: ಆರು ಭಾಷೆಗಳಲ್ಲಿ ಮಾಹಿತಿ ಲಭ್ಯ

Update: 2018-11-17 16:45 GMT

ಬೆಂಗಳೂರು, ನ.17: ಕೃಷಿ ಮೇಳದ ಸ್ಟಾರ್ಟ್‌ಆಪ್ ಮಳಿಗೆಗಳಲ್ಲಿ ಫಾರ್ಮ್ರೈಸ್ ಆ್ಯಪ್ ಆಕರ್ಷಣೆಯ ಕೇಂದ್ರಬಿಂದು ಆಗಿದ್ದು, ಹತ್ತು ದಿನಗಳ ಹವಾಮಾನ ಮುನ್ಸೂಚನೆಯೊಂದಿಗೆ ಬೇಸಾಯದ ಪ್ರದೇಶದಲ್ಲಿರುವ ಬೆಳೆಗಳು, ಅವುಗಳಿಗೆ ರೋಗಬಾಧೆ ಬರುವ ಸಾಧ್ಯತೆ, ಅದರ ನಿಯಂತ್ರಣ ಕ್ರಮಗಳ ಸಮಗ್ರ ಮಾಹಿತಿ ಇನ್ನು ಮುಂದೆ ಇದರಲ್ಲಿ ದೊರೆಯಲಿದೆ.

ಜಮೀನಿನಲ್ಲಿ ನಿಂತು ಈ ಆ್ಯಪ್‌ನಲ್ಲಿರುವ ಜಿಪಿಎಸ್ ಮೇಲೆ ಒತ್ತಿದರೆ ಸಾಕು, ಏಕಕಾಲದಲ್ಲಿ ಇನ್ನೂರು ಕಿ.ಮೀ. ವ್ಯಾಪ್ತಿಯಲ್ಲಿನ ಪ್ರಮುಖ ಮಾರುಕಟ್ಟೆಗಳಲ್ಲಿ ಸುಮಾರು 54 ಬೆಳೆಗಳ ಧಾರಣೆ ಪಟ್ಟಿ ದೊರೆಯುತ್ತದೆ. ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋ ಮೂಲದ ಬಹುರಾಷ್ಟ್ರೀಯ ಕಂಪನಿಯೊಂದು ಈ ಆ್ಯಪ್ ಅಭಿವೃದ್ಧಿಪಡಿಸಿದ್ದು, ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ಗುಜರಾತ್, ತೆಲಂಗಾಣ, ಉತ್ತರಪ್ರದೇಶ ಸೇರಿದಂತೆ ದೇಶದ ಆರು ರಾಜ್ಯಗಳಲ್ಲಿ ಕನ್ನಡ ಒಳಗೊಂಡಂತೆ ಆರು ಭಾಷೆಗಳಲ್ಲಿ ಇದನ್ನು ಪರಿಚಯಿಸಲಾಗಿದೆ.

ಎರಡೂವರೆ ಲಕ್ಷ ರೈತರು ಇದನ್ನು ಬಳಸುತ್ತಿದ್ದು, ಈ ಪೈಕಿ ಮಾಹಿತಿ ತಂತ್ರಜ್ಞಾನದ ರಾಜಧಾನಿ ಎನಿಸಿರುವ ಕರ್ನಾಟಕದಲ್ಲೇ ಅತಿ ಹೆಚ್ಚು (70 ಸಾವಿರ) ರೈತರು ಆ್ಯಪ್‌ನ ಉಪಯೋಗ ಪಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬಿಹಾರ, ಹರಿಯಾಣ, ರಾಜಸ್ತಾನ, ಉತ್ತರಾಖಂಡದಲ್ಲೂ ಆ್ಯಪ್ ಪರಿಚಯಿಸುವ ಗುರಿ ಇದೆ ಎಂದು ಅವರು ಹೇಳಿದರು.

ಆಯಾ ಪ್ರದೇಶಗಳಲ್ಲಿನ ವಿವಿಧ ಬೆಳೆಗಳ ಬಿತ್ತನೆಯಿಂದ ಹಿಡಿದು ಪ್ರತಿ ಹಂತದ ಮಾಹಿತಿ ಸಿಗುವುದರಿಂದ ಬೆಳೆ ಸಂರಕ್ಷಣೆಗೂ ಅನುಕೂಲ ಆಗಲಿದೆ. ಇದಲ್ಲದೆ, ಸಂಬಂಧಿತ ಕೃಷಿ ವಿಷಯದ ಬಗ್ಗೆ ಪರಸ್ಪರ ಸಂಪರ್ಕ ಸಾಧಿಸಲು ರೈತರಿಗೆ ಸಂವಹನಾತ್ಮಕ ವೇದಿಕೆ ಇದರಲ್ಲಿದೆ. ಆಯ್ದ ಕೃಷಿ ಮತ್ತು ಗ್ರಾಮೀಣ ಸಂಬಂಧಿ ಸರಕಾರಿ ನೀತಿಗಳು, ಇತ್ತೀಚಿನ ಸುದ್ದಿಗಳು, ಕಾರ್ಯಕ್ರಮಗಳ ವಿವರವನ್ನು ಕೂಡ ಆ್ಯಪ್ ಮೂಲಕ ಪಡೆಯಬಹುದು.

ಧಾರಣೆ ಲಭ್ಯ: ಹತ್ತಾರು ಮಾರುಕಟ್ಟೆಗಳ ದೂರ ಮತ್ತು ಅಲ್ಲಿನ ಧಾರಣೆ ಲಭ್ಯವಾಗುವುದರಿಂದ ಬೆಳೆಯನ್ನು ಎಲ್ಲಿ ಕೊಂಡೊಯ್ದರೆ ತಮಗೆ ಲಾಭ ಆಗುತ್ತದೆ ಎಂಬುದನ್ನು ರೈತರು ಸುಲಭವಾಗಿ ನಿರ್ಧರಿಸಬಹುದು. ಮಾರುಕಟ್ಟೆ ದೂರ ಗೊತ್ತಾಗುವುದರಿಂದ ಸಾಗಣೆ ವೆಚ್ಚವನ್ನೂ ಲೆಕ್ಕಹಾಕಬಹುದು. ರಾಜ್ಯದಲ್ಲಿ ಹತ್ತಿ ಮತ್ತು ಮೆಕ್ಕೆಜೋಳ ಬೆಳೆಗಾರರು ಹಾಗೂ ಮಹಾರಾಷ್ಟ್ರದಲ್ಲಿ ಈರುಳ್ಳಿ ಬೆಳೆಗಾರರು ಹವಾಮಾನ ಮುನ್ಸೂಚನೆಯ ಹೆಚ್ಚು ಉಪಯೋಗ ಪಡೆಯುತ್ತಿದ್ದಾರೆ.

ಪ್ರಸ್ತುತ ಆನ್‌ಲೈನ್ ಮಾರುಕಟ್ಟೆ ವ್ಯವಸ್ಥೆ ರಾಜ್ಯದಲ್ಲಿ ಇದೆ. ಆದರೆ, ಅದು ಆಯ್ದ ಮಾರುಕಟ್ಟೆಗಳಿಗೆ ಸೀಮಿತವಾಗಿದ್ದು, ಅದರ ಲಾಭ ರೈತರಿಗೆ ಸಮರ್ಪಕವಾಗಿ ದೊರೆಯುತ್ತಿಲ್ಲ ಎಂಬ ಆರೋಪವೂ ಇದೆ. ಈಗ ಬಹುತೇಕ ರೈತರು ಸ್ಮಾರ್ಟ್‌ಫೋನ್ ಹೊಂದಿರುವುದರಿಂದ ಈ ಆ್ಯಪ್‌ನ ಲಾಭ ಪಡೆಯಬಹುದು. ಸದ್ಯ ಆ್ಯಂಡ್ರಾಯ್ಡ ಫೋನ್‌ಗಳಲ್ಲಿ ಮಾತ್ರ ಈ ಆ್ಯಪ್‌ಡೌನ್‌ಲೋಡ್ ಮಾಡಿಕೊಳ್ಳುವ ಸೌಲಭ್ಯ ಇದೆ.

ಉಚಿತ ಆ್ಯಪ್: ಗೂಗಲ್‌ಪ್ಲೇ ಸ್ಟೋರ್‌ನಲ್ಲಿ ಫಾರ್ಮ್ರೈಸ್ (FARMRISE) ಎಂದು ಟೈಪ್‌ಮಾಡಿ, ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಇದು ಸಂಪೂರ್ಣ ಉಚಿತ ಆ್ಯಪ್‌ವಾಗಿದೆ.

ಉಪಯೋಗ

-ರೋಗ ನಿಯಂತ್ರಣಕ್ಕೆ ಯಾವ ಔಷಧ ಸಿಂಪಡಿಸಬೇಕು.

-ಮಾರುಕಟ್ಟೆಗಳಲ್ಲಿನ 54 ಪ್ರಮುಖ ಬೆಳೆಗಳ ಧಾರಣೆ ಪಟ್ಟಿ.

-200 ಕಿ.ಮೀ. ವ್ಯಾಪ್ತಿಯಲ್ಲಿನ ಪ್ರಮುಖ ಮಾರುಕಟ್ಟೆಗಳ ಮಾಹಿತಿ.

-ಹತ್ತು ದಿನಗಳ ಹವಾಮಾನ ಮುನ್ಸೂಚನೆ.

-ಬಿತ್ತನೆ, ಬಿತ್ತನೆ ನಂತರದ ಪ್ರತಿ ಹಂತದ ಮಾಹಿತಿ.

-ಆಯಾ ಪ್ರದೇಶದಲ್ಲಿರುವ ಬೆಳೆಗಳು.

-ಬೆಳೆಗೆ ರೋಗಬಾಧೆ ಬರುವ ಮುನ್ಸೂಚನೆಗಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News