ಹತ್ತು ಸಾವಿರಕ್ಕೂ ಅಧಿಕ ಹುದ್ದೆಗಳ ನೇರ ನೇಮಕಕ್ಕೆ ಸಿದ್ಧತೆ

Update: 2018-11-17 16:49 GMT

ಬೆಂಗಳೂರು, ನ.17: ರಾಜ್ಯ ಸರಕಾರ ನಿರುದ್ಯೋಗ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದು, 10 ಸಾವಿರಕ್ಕೂ ಅಧಿಕ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಮುಂದಾಗಿದೆ.

ವಿವಿಧ ಇಲಾಖೆಗಳಲ್ಲಿ ನೌಕರರ ಹುದ್ದೆಗಳು ಖಾಲಿ ಇರುವುದರಿಂದ ಆಡಳಿತಾತ್ಮಕ ಸಮಸ್ಯೆಗಳು ಎದುರಾಗಿರುವುದನ್ನು ಮನಗಂಡ ಸರಕಾರ ತುರ್ತಾಗಿ ನೇಮಕ ಮಾಡಿಕೊಳ್ಳಲು ತೀರ್ಮಾನಿಸಿದ್ದು, ಅನುಚ್ಛೇದ 371 ಜೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸ್ಥಳೀಯ ವೃಂದ ರಚನೆ ಮಾಡಿ, ಅಧಿಸೂಚನೆ ಹೊರಡಿಸಿ ಖಾಲಿ ಹುದ್ದೆಗಳನ್ನು ತುಂಬಿಕೊಳ್ಳಲು ಸುತ್ತೋಲೆ ಹೊರಡಿಸಿದೆ.

ವಿವಿಧ ಇಲಾಖೆಗಳಲ್ಲಿ ಕಲಂ 371(ಜೆ) ಅಡಿಯಲ್ಲಿ ರಚಿಸಲಾದ ಪ್ರಾದೇಶಿಕ ಮಟ್ಟದ, ರಾಜ್ಯಮಟ್ಟದ ಹಾಗೂ ರಾಜ್ಯವ್ಯಾಪಿ ಸ್ಥಳೀಯ ವೃಂದಗಳಲ್ಲಿ ಅಪಾರ ಪ್ರಮಾಣದ ಹುದ್ದೆಗಳು ಖಾಲಿ ಇದ್ದು, ವಿವಿಧ ಇಲಾಖೆ ಹಾಗೂ ನೇಮಕಾತಿ ಪ್ರಾಧಿಕಾರಗಳಲ್ಲಿ ತುಂಬಬೇಕಾದ ನೇರ ನೇಮಕಾತಿ ಹುದ್ದೆಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಕುರಿತು ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಸುತ್ತೊಲೆಯಲ್ಲಿ ನೇಮಕಾತಿಗೆ ನಿರ್ದೇಶನ ನೀಡಲಾಗಿದೆ.

ರಾಜ್ಯಾದ್ಯಂತ ಸುಗಮವಾದ ಆಡಳಿತಕ್ಕೆ ಅಡಚಣೆಯಾಗುತ್ತಿರುವ ಆಡಳಿತ ಇಲಾಖೆಗಳ ಎಲ್ಲ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಹಾಗೂ ಕ್ಷೇತ್ರ, ಇಲಾಖೆ, ನಿಗಮ, ಮಂಡಳಿ ಮತ್ತು ಸ್ವಾಯತ್ತ ಸಂಸ್ಥೆಗಳ ಮುಖ್ಯಸ್ಥರು ತ್ವರಿತವಾಗಿ ಸ್ಥಳೀಯ ವೃಂದದ ನೇರ ನೇಮಕಾತಿಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಕರ್ನಾಟಕ ಸಾರ್ವಜನಿಕ ಉದ್ಯೋಗ ನೇಮಕಾತಿ ಆದೇಶದಂತೆ ಹಾಗೂ ಜಾರಿಯಲ್ಲಿರುವ ನೇರ ನೇಮಕಾತಿ ನಿಯಮಗಳ ಅನುಸಾರ ಭರ್ತಿ ಮಾಡಲು ಕ್ರಮಕ್ಕೆ ಸೂಚಿಸಲಾಗಿದೆ.

ರಾಜ್ಯದಲ್ಲಿ ಪ್ರಸ್ತುತ ಜಾರಿಯಲ್ಲಿರುವ ನೇಮಕಾತಿ ಪ್ರಕ್ರಿಯೆ ಪ್ರಕರಣಗಳನ್ನು ಶೀಘ್ರ ಪೂರ್ಣ ಮಾಡಬೇಕು. ಕಲಂ 371(ಜೆ) ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸ್ಥಳೀಯ ವೃಂದ ರಚಿಸಿ, ಅಧಿಸೂಚಿಸಿ, ಖಾಲಿ ಹುದ್ದೆಗಳನ್ನು ತುಂಬುವಲ್ಲಿ ಅನುಸರಿಸಬೇಕಾದ ವಿಧಾನಗಳನ್ನು ಪಾಲಿಸಬೇಕು ಎಂದು ನಿರ್ದೇಶನ ನೀಡಲಾಗಿದೆ. ಗ್ರೂಪ್ ಡಿ ಹಾಗೂ ವಾಹನ ಚಾಲಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ನಿಟ್ಟಿನಲ್ಲಿ 2008ರ ಆದೇಶದಲ್ಲಿ ನೀಡಲಾದ ಸೂಚನೆಗಳನ್ನು ಪಾಲಿಸುವಂತೆ ಸುತ್ತೊಲೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News