ಹಸಿ-ಒಣ ಕಸ ಪ್ರತ್ಯೇಕ ವಿಂಗಡಣೆಗೆ ಬಿಬಿಎಂಪಿ ಚಿಂತನೆ: ಕಸ ಎಸೆಯುವವರಿಗೆ ಎಲೆಕ್ಟ್ರಾನಿಕ್ ಸಾಧನ ಬಳಸಿ ದಂಡ

Update: 2018-11-17 17:06 GMT

ಬೆಂಗಳೂರು, ನ. 17: ಹಸಿ ಮತ್ತು ಒಣ ಕಸವನ್ನು ಒಂದೇ ಗುತ್ತಿಗೆದಾರರಿಗೆ ನೀಡಲಾಗಿದ್ದು, ಪೌರಕಾರ್ಮಿಕರು ಎರಡು ಬಗೆಯ ಕಸ ಸಂಗ್ರಹಿಸಿ ಒಂದೇ ಕಡೆ ಹಾಕುವುದರಿಂದ ಕಸ ವಿಂಗಡಣೆ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ. ಹೀಗಾಗಿ, ಹಸಿ ಮತ್ತು ಒಣ ಕಸ ವಿಂಗಡಣೆಯಾಗದೆ ವಿಲೇವಾರಿಯಾಗುವ ಸಮಸ್ಯೆ ನಿವಾರಿಸಲು ಎರಡನ್ನೂ ಪ್ರತ್ಯೇಕವಾಗಿ ಸಂಗ್ರಹಿಸುವ ತೀರ್ಮಾನಕ್ಕೆ ಬರಲಾಗಿದೆ. ಎರಡು ಬಗೆಯ ಕಸ ಸಂಗ್ರಹಣೆಯನ್ನು ಪ್ರತ್ಯೇಕವಾಗಿ ಎರಡು ಸಂಸ್ಥೆಗಳಿಗೆ ನೀಡಲು ಬಿಬಿಎಂಪಿ ಚಿಂತನೆ ನಡೆಸಿದೆ.

ಹಸಿ ಮತ್ತು ಒಣ ಕಸವನ್ನು ಒಂದೇ ಗುತ್ತಿಗೆದಾರರಿಗೆ ನೀಡಲಾಗಿದೆ. ಪೌರಕಾರ್ಮಿಕರು ಎರಡು ಬಗೆಯ ಕಸ ಸಂಗ್ರಹಿಸಿ ಒಂದೇ ಕಡೆ ಹಾಕುವುದರಿಂದ ಕಸ ವಿಂಗಡಣೆ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ. ಕಸ ಸಂಗ್ರಹಿಸಿದ ಬಳಿಕ ಅದನ್ನು ಒಂದೆಡೆ ಸುರಿದು ಲಾರಿಯಲ್ಲಿ ಹಾಕಿಕೊಂಡು ಹೋಗುವುದರಿಂದ ಕಸ ಮಿಶ್ರವಾಗುತ್ತಿದೆ. ಆದ್ದರಿಂದ ಎರಡೂ ಬಗೆಯ ಕಸ ಸಂಗ್ರಹವನ್ನು ಬೇರೆ ಬೇರೆ ಸಂಸ್ಥೆಗೆ ನೀಡಲು ನಿರ್ಧರಿಸಲಾಗಿದೆ. ಒಂದು ವಾರದಲ್ಲಿ ಕಸ ವಿಲೇವಾರಿ ಟೆಂಡರ್ ಆಹ್ವಾನಿಸಲಾಗುತ್ತದೆ. ವಾರದಲ್ಲಿ ಏಳು ದಿನ ಹಸಿ ಕಸ ಹಾಗೂ ಎರಡು ದಿನ ಒಣ ಕಸ ಸಂಗ್ರಹಿಸಲಾಗುತ್ತದೆ. ಎರಡನ್ನೂ ಪ್ರತ್ಯೆಕ ಸಂಸ್ಥೆಗಳು ಮಾಡುವುದರಿಂದ ಕಸ ವಿಂಗಡಣೆ ಸುಲಭವಾಗಲಿದೆ.

ಎಲೆಕ್ಟ್ರಾನಿಕ್ ಸಾಧನ: ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ತಪ್ಪಿಸಲು ಮಾರ್ಷಲ್‌ಗಳನ್ನು ನೇಮಿಸಲಾಗಿದೆ. ರಾತ್ರಿ ಎಂಟರಿಂದ ಮಧ್ಯರಾತ್ರಿ ಬಳಿಕದ ಒಂದು ಗಂಟೆ ಹಾಗೂ ಮುಂಜಾನೆ ಐದರಿಂದ ಬೆಳಗ್ಗೆ ಎಂಟು ಗಂಟೆವರೆಗೆ ಎರಡು ಪಾಳಿಗಳಲ್ಲಿ ನಲವತ್ತು ಮಾರ್ಷಲ್‌ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಒಟ್ಟು 233 ಮಾರ್ಷಲ್‌ಗಳನ್ನು ನೇಮಿಸುವಂತೆ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಕಸ ಎಸೆಯುವವರನ್ನು ಪತ್ತೆ ಮಾಡಿ ಅಲ್ಲೆ ದಂಡ ವಿಧಿಸಿ ರಸೀತಿ ನೀಡಲಾಗುತ್ತಿದೆ. ಇನ್ನು ಮುಂದೆ ಎಲೆಕ್ಟ್ರಾನಿಕ್ ಸಾಧನದ ಮೂಲಕ ರಸೀತಿಯನ್ನು ನೀಡಲಾಗುತ್ತದೆ. 10 ಸಾವಿರ ರೂ. ಮೌಲ್ಯದ ಈ ಸಾಧನವು ಬಸ್ ಕಂಡಕ್ಟರ್‌ಗಳು ಬಳಸುವ ಟಿಕೆಟ್ ಯಂತ್ರದಂತೆ ಇರುತ್ತದೆ. ರಸೀತಿ ಮುದ್ರಿಸುವ ಹಾಗೂ ಛಾಯಾಚಿತ್ರ ತೆಗೆಯುವ ತಂತ್ರಜ್ಞಾನ ಇದರಲ್ಲಿದೆ. 233 ಮಾರ್ಷಲ್‌ಗಳು ಹಾಗೂ ಇನ್ನೂರು ಆರೋಗ್ಯಾಧಿಕಾರಿಗಳಿಗೆ ಸೇರಿ ಒಟ್ಟು 433 ಸಾಧನಗಳನ್ನು ಖರೀದಿಸಲು ಟೆಂಡರ್ ಕರೆಯಲಾಗುತ್ತಿದೆ.

ದಂಡ ನಿಗದಿಗಾಗಿ ಸರಕಾರಕ್ಕೆ ಪ್ರಸ್ತಾವನೆ

-ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವವರಿಗೆ ನೂರು ರೂ.

-ಕಟ್ಟಡ ತ್ಯಾಜ್ಯ ಎಸೆಯುವವರಿಗೆ 1ಸಾವಿರ ರೂ.

-ಕಸ ಹಾಕುವವರಿಗೆ ಐನೂರು ರೂ.

-ಮೊದಲ ಬಾರಿ ಕಟ್ಟಡ ತ್ಯಾಜ್ಯ ಹಾಕುವವರಿಗೆ 5 ಸಾವಿರ ರೂ.

-ಎರಡನೇ ಬಾರಿ ಹಾಕುವವರಿಗೆ 25ಸಾವಿರ ರೂ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News