​ನೂರರ ವೇಗದಲ್ಲಿ ದಾವಣಗೆರೆ ಎಕ್ಸ್‌ಪ್ರೆಸ್

Update: 2018-11-17 18:30 GMT

 ''ನಮ್ಮ ಶ್ರಮದ ಫಲ ದಿನದ ಕೊನೆಯಲ್ಲಿ ಕಾಣಬೇಕು, ಅದೇ ನಿಜವಾದ ದಾಖಲೆ'' ಎಂದು ಯಾವಾಗಲೂ ತಂಡದ ಜಯಕ್ಕಾಗಿಯೇ ಆಡುವ, ವೈಯಕ್ತಿಕ ದಾಖಲೆಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದ ವಿನಯ್ ಕುಮಾರ್ ಎಂದರೆ ಎದುರಾಳಿ ತಂಡ ಯಾವಾಗಲೂ ವಿವಿಧ ರೀತಿಯ ರಣತಂತ್ರಕ್ಕೆ ಎದುರಾಗಬೇಕಾಗುತ್ತದೆ. ವಿನಯ್ ಕುಮಾರ್ ಎಷ್ಟು ಪಂದ್ಯವಾಡಿದರು ಎನ್ನುವುದಕ್ಕಿಂತ ರಾಜ್ಯ ಕ್ರಿಕೆಟ್‌ಗೆ ಯಾವ ರೀತಿಯ ಕೊಡುಗೆ ನೀಡಿದರು ಎಂಬುದು ಮುಖ್ಯ.

ಕ್ರಿಕೆಟ್ ವಲಯದಲ್ಲಿ ದಾವಣಗೆರೆ ಎಕ್ಸ್‌ಪ್ರೆಸ್ ಎಂದೇ ಜನಪ್ರಿಯಗೊಂಡಿರುವ ಕರ್ನಾಟಕದ ಆರ್. ವಿನಯ್ ಕುಮಾರ್ ವಿದರ್ಭ ವಿರುದ್ಧದ ಈ ಬಾರಿಯ ಮೊದಲ ಪಂದ್ಯದಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸುವ ಮೂಲಕ 100ನೇ ಪಂದ್ಯವನ್ನಾಡಿದರು. ಸಾಮಾನ್ಯವಾಗಿ ಉತ್ತಮ ಪ್ರದರ್ಶನ ತೋರುತ್ತಿರುವವರಿಗೆ ಹೆಚ್ಚು ಪಂದ್ಯಗಳನ್ನಾಡಿದಂತೆ ಇಂತಹ ಮೈಲುಗಲ್ಲುಗಳು ಸಾಮಾನ್ಯವಾಗಿರುತ್ತದೆ. ಆದರೆ ವಿನಯ್ ಕುಮಾರ್ ನಡೆದು ಬಂದ ಹಾದಿ ಹಾಗಿಲ್ಲ.
ತಂದೆ ರಂಗನಾಥ್ ಅಟೋ ಚಾಲಕರನಾಗಿದ್ದುಕೊಂಡು ಮಗನ ಕ್ರಿಕೆಟ್‌ಗೆ ಪ್ರೋತ್ಸಾಹ ನೀಡಿದವರು. ವಿನಯ್ ಕುಮಾರ್ ಕ್ರಿಕೆಟ್ ಹಾದಿಯಲ್ಲಿ ಹಲವಾರು ಮೈಲುಗಲ್ಲುಗಳನ್ನು ದಾಟಿ ಮುಂದೆ ಬಂದವರು. ಒಂದು ಟೆಸ್ಟ್ ಹಾಗೂ 31 ಏಕದಿನ ಪಂದ್ಯಗಳನ್ನಾಡಿರುವ ವಿನಯ್ ಅನುಭವಕ್ಕೆ ರಾಷ್ಟ್ರೀಯ ತಂಡದಲ್ಲಿ ಆಡುವ ಅವಕಾಶ ಸಿಕ್ಕಿದ್ದು ಕಡಿಮೆ. 2004ಲ್ಲಿ ಪ್ರಥಮದರ್ಜೆ ಕ್ರಿಕೆಟ್‌ಗೆ ಕಾಲಿಟ್ಟ ವಿನಯ್ ನಿರಂತರವಾಗಿ ವಿಕೆಟ್ ಗಳಿಸುತ್ತಲೇ ಬಂದರು. ಕರ್ನಾಟಕಕ್ಕೆ ಸತತ ಎರಡು ಬಾರಿ ರಣಜಿ ಟ್ರೋಫಿ ಪಟ್ಟವನ್ನು ನೀಡಿದ ಗರಿಮೆ ವಿನಯ್ ಕುಮಾರ್‌ಗೆ ಸಲ್ಲುತ್ತದೆ.
ಸ್ಥಿರ ಪ್ರದರ್ಶನ ತೋರಿದ ವಿನಯ್ ಕುಮಾರ್ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದರು, ಅಲ್ಲದೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದರು. ಐಪಿಎಲ್ ಹಾಗೂ ಭಾರತ ತಂಡದಲ್ಲಿ ಅವರು ತಮ್ಮ ನೈಜ ಪ್ರದರ್ಶನ ತೋರುವಲ್ಲಿ ವಿಫಲರಾದರು. ಆದರೆ ದೇಶೀಯ ಕ್ರಿಕೆಟ್‌ನಲ್ಲಿ ವಿನಯ್ ಹಾಕಿ ಕೊಟ್ಟ ದಾರಿ ಇತರ ಆಟಗಾರರಿಗೆ ಮಾದರಿಯಾಗಿದೆ. ಬ್ರಿಜೇಶ್ ಪಟೇಲ್ ಹಾಗೂ ಸುನಿಲ್ ಜೋಶಿ ಅವರ ನಂತರ ಕರ್ನಾಟಕಕ್ಕಾಗಿಯೇ ನೂರು ಪಂದ್ಯಗಳನ್ನಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅದೇ ರೀತಿ ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ರಾಹುಲ್ ದ್ರಾವಿಡ್, ಜಿ.ಆರ್. ವಿಶ್ವನಾಥ್, ಬಿ.ಎಸ್. ಚಂದ್ರಶೇಖರ್, ಪ್ರಸನ್ನ ಅವರು ಹಾಕಿಕೊಟ್ಟ ಹಾದಿಯಲ್ಲಿ ಸಾಗಿದ ರಾಜ್ಯದ ಯುವ ಕ್ರಿಕೆಟಿಗ ಎಂದರೆ ಅದು ವಿನಯ್ ಕುಮಾರ್.
''ನಮ್ಮ ಶ್ರಮದ ಫಲ ದಿನದ ಕೊನೆಯಲ್ಲಿ ಕಾಣಬೇಕು, ಅದೇ ನಿಜವಾದ ದಾಖಲೆ'' ಎಂದು ಯಾವಾಗಲೂ ತಂಡದ ಜಯಕ್ಕಾಗಿಯೇ ಆಡುವ, ವೈಯಕ್ತಿಕ ದಾಖಲೆಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದ ವಿನಯ್ ಕುಮಾರ್ ಎಂದರೆ ಎದುರಾಳಿ ತಂಡ ಯಾವಾಗಲೂ ವಿವಿಧ ರೀತಿಯ ರಣತಂತ್ರಕ್ಕೆ ಎದುರಾಗಬೇಕಾಗುತ್ತದೆ. ವಿನಯ್ ಕುಮಾರ್ ಎಷ್ಟು ಪಂದ್ಯವಾಡಿದರು ಎನ್ನುವುದಕ್ಕಿಂತ ರಾಜ್ಯ ಕ್ರಿಕೆಟ್‌ಗೆ ಯಾವ ರೀತಿಯ ಕೊಡುಗೆ ನೀಡಿದರು ಎಂಬುದು ಮುಖ್ಯ. ರಣಜಿ ಟ್ರೋಫಿ, ವಿಜಯ್ ಹಝಾರೆ ಟ್ರೋಫಿ ಹಾಗೂ ಇರಾನಿ ಟ್ರೋಫಿಯನ್ನು ಗೆದ್ದುಕೊಟ್ಟು ಇತಿಹಾಸ ಬರೆದ ಆಟಗಾರ ಎಂದರೆ ಅದು ವಿನಯ್ ಕುಮಾರ್.


   ಕ್ರಿಕೆಟಿಗರ ಬಗ್ಗೆ ಮಾತನಾಡುವಾಗ ಬರೀ ರನ್ ಹಾಗೂ ವಿಕೆಟ್ ಬಗ್ಗೆ ಮಾತನಾಡುತ್ತೇವೆ. ಆದರೆ ಕರ್ನಾಟಕದ ಕ್ರಿಕೆಟ್ ವಿಷಯ ಬಂದಾಗ ದ್ರಾವಿಡ್ ಹಾಗೂ ವಿನಯ್ ಕುಮಾರ್ ಬಗ್ಗೆ ರನ್ ಹಾಗೂ ವಿಕೆಟ್ ಹೊರತಾಗಿಯೂ ಮಾತನಾಡುವುದಿದೆ. ಸಚಿನ್ ತೆಂಡುಲ್ಕರ್ ಅವರನ್ನು ಕ್ರಿಕೆಟ್ ಅಭಿಮಾನಿಗಳು ಇಷ್ಟುಪಟ್ಟು ಕ್ರಿಕೆಟ್ ದೇವರು ಎಂದು ಕರೆದರು. ಆದರೆ ಕ್ರಿಕೆಟ್ ಜಗತ್ತಿನಲ್ಲಿ ಎದುರಾಳಿಯ ತಂಡದ ಆಟಗಾರರೂ ಇಷ್ಟಪಡುವ ಆಟಗಾರ ಎಂದರೆ ಅದು ರಾಹುಲ್ ದ್ರಾವಿಡ್. ಯುವಕರಲ್ಲಿ ಸ್ಫೂರ್ತಿ ತುಂಬುವ ವಿಷಯ ಬಂದಾಗ ನಮ್ಮ ಮೊದಲ ಆಯ್ಕೆ ರಾಹುಲ್ ದ್ರಾವಿಡ್ ಹೊರತು ಸಚಿನ್ ಅಲ್ಲ. ಅದೇ ರೀತಿ ಕರ್ನಾಟಕ ರಣಜಿ ತಂಡದಲ್ಲಿ ವಿನಯ್ ಏರಿ ಬಂದ ಏಣಿ ಮರೆತಿಲ್ಲ. ದೇಶಕ್ಕಾಗಿ ಆಡಿ ಆ ನಂತರ ರಣಜಿಯಲ್ಲಿ ಮುಂದುವರಿದು ಈಗಲೂ 2004ರಲ್ಲಿ ಯಾವ ಉತ್ಸಾಹದಲ್ಲಿ ಆಡಿದ್ದಾರೋ ಅದೇ ರೀತಿಯಲ್ಲಿ ಆಡುತ್ತಿದ್ದಾರೆ. ಕೆಲವು ಆಟಗಾರರಿದ್ದಾರೆ ರಣಜಿ ಆಡುವಾಗ ಇದ್ದ ವಿನಯ ಭಾರತ ತಂಡವನ್ನು ಸೇರಿದ ನಂತರ ಹೊರಟು ಹೋಗುತ್ತದೆ. ಮತ್ತೆ ಅವರಿಗೆ ರಣಜಿ ಆಡಲು ಬಿಸಿಸಿಐ ಆದೇಶವನ್ನೇ ಹೊರಡಿಸಬೇಕು. ಅವರ ಜೀವನ ಶೈಲಿಯೇ ಬದಲಾಗುತ್ತದೆ. ಹಿಂದೆ ಸತತವಾಗಿ ಮಾತನಾಡಿದವರು ಆ ನಂತರ ಬಿಡುವಿಲ್ಲದವರಾಗುತ್ತಾರೆ. ಆದರೆ ವಿನಯ್ ಕುಮಾರ್ ಹಾಗಲ್ಲ, ಅವರು ಏನಿದ್ದರೂ ಮೊದಲನೆಯದಾಗಿ ಕನ್ನಡಿಗರರೊಂದಿಗೆ ಕನ್ನಡದಲ್ಲೇ ಮಾತನಾಡುತ್ತಾರೆ. ಆಟದ ಸಮಯ ಬಿಟ್ಟು ಇತರ ಸಮಯದಲ್ಲಿ ಎಷ್ಟೇ ಹೊತ್ತು ಕರೆ ಮಾಡಿದರೂ ಉತ್ತರಿಸುವ ಸೌಜನ್ಯ ಇದೆ. ತಮಗಿರುವ ಅಪಾರ ಅನುಭವವನ್ನು ಅವರು ಅಧಿಕಾರದಂತೆ ಚಲಾಯಿಸಿಲ್ಲ. ಬದಲಾಗಿ ಪಂದ್ಯ ಗೆಲ್ಲಿಸಿಕೊಡಲು ಯುವ ಆಟಗಾರರೊಂದಿಗೆ ಹಂಚಿಕೊಂಡಿದ್ದಾರೆ. ಹ್ಯಾಟ್ರಿಕ್ ಸಾಧನೆ, ಶತಕ ಹಾಗೂ 11 ಬಾರಿ ಐದಕ್ಕಿಂತ ಹೆಚ್ಚು ವಿಕೆಟ್ ಸಾಧನೆ ಮಾಡಿರುವುದು ವಿನಯ್ ರಣಜಿ ಕ್ರಿಕೆಟ್‌ನಲ್ಲಿ ತೋರಿದ ಅಪೂರ್ವ ಸಾಧನೆ.
 ಮುಂಬೈಯ ಅಭಿಷೇಕ್ ನಾಯರ್ ಕೂಡ ಪಾಂಡಿಚೇರಿ ಪರ ಆಡುತ್ತ 100ನೇ ಪಂದ್ಯವನ್ನಾಡಿದರು. ಆದರೆ ವಿನಯ್ ತೋರಿಸಿದ ಸಾಹಸ ಕ್ರಿಕೆಟ್ ಅಂಗಣ ದಲ್ಲಿ ನಾಯರ್ ತೋರಿಲ್ಲ ಎಂದರೆ ತಪ್ಪಾಗಲಾರದು. 2010-11ರಲ್ಲಿ ಕರ್ನಾಟಕ ತಂಡವನ್ನು ಸೋಲಿಸಿದ ಮುಂಬೈ ರಣಜಿ ಚಾಂಪಿಯನ್ ಪಟ್ಟ ಗೆದ್ದುಕೊಂಡಿತ್ತು. 2013-14ರಲ್ಲಿ ವಿನಯ್ ಕುಮಾರ್ ಶತಕ ಹಾಗೂ 5 ವಿಕೆಟ್‌ಗಳ ಸಾಧನೆಯೊಂದಿಗೆ ಕರ್ನಾಟಕ ಚಾಂಪಿಯನ್ ಮುಂಬೈ ತಂಡವನ್ನು ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತು. ಇದು ರಣಜಿ ಕ್ರಿಕೆಟ್ ಇತಿಹಾಸದಲ್ಲೇ ನಾಯಕನೊಬ್ಬ ತೋರಿದ ಅಪೂರ್ವ ಸಾಧನೆ.
ವಿಭಿನ್ನ ಪಿಚ್, ನಿರಂತರ ಬದಲಾಗುತ್ತಿರುವ ತಂಡ ಗಳು, ಹೊಸ ಆಟಗಾರರು, ಸವಾಲಿನ ನಾಲ್ಕು ದಿನಗಳ ಪಂದ್ಯ
  ಭಾರತ ಏಕದಿನ ಅಥವಾ ಟಿ20 ತಂಡದಲ್ಲಿ ಸ್ಫೋಟಕ ಆಟ ಪ್ರದರ್ಶಿಸಿ ಸ್ಥಾನವನ್ನು ಗಟ್ಟಿಗೊಳಿಸಿಕೊಳ್ಳಬಹುದು. ಆದರೆ ರಣಜಿ ಕ್ರಿಕೆಟ್ ಹಾಗಲ್ಲ. ಅದು ಕೌಂಟಿ ಕ್ರಿಕೆಟ್‌ಗಿಂತಲೂ ಕಠಿಣವಾದುದು. ನಾಲ್ಕು ದಿನಗಳ ಪಂದ್ಯವಾಗಿರುತ್ತದೆ. ಸ್ಥಿರ ಪ್ರದರ್ಶನ ತೋರಬೇಕು. ಇಲ್ಲವಾದಲ್ಲಿ ಮತ್ತೊಬ್ಬ ಯುವ ಆಟಗಾರ ಈ ಸ್ಥಾನವನ್ನು ತುಂಬಲು ಕಾಯುತ್ತಿರುತ್ತಾರೆ. ಆಯ್ಕೆ ಸಮಿತಿಗೂ ಪ್ರಕಟಿಸಿದ ಪಟ್ಟಿಯನ್ನೇ ಪುನಃ ಪ್ರಕಟಿಸುವ ಬೇಸರ. ವಿನಯ್ ಅವರ ರಣಜಿ ಕ್ರಿಕೆಟ್ ಬದುಕನ್ನೊಮ್ಮೆ ಹಿಂದಿರುಗಿ ನೋಡಿದಾಗ ಅದೊಂದು ಹಾದಿಯಲ್ಲ, ಆಟವಲ್ಲ ಬದಲಾಗಿ ತಪಸ್ಸು.
ಕ್ರಿಕೆಟ್‌ಗೆ ಈಗ ಪ್ರಚಾರ ಬೇಕಾಗಿಲ್ಲ. ಸಹಜವಾಗಿಯೇ ಅದು ಕ್ರೀಡಾಪುಟದಲ್ಲಿ ಪ್ರಮುಖ ಸುದ್ದಿಯಾಗಿ ಹೋಗುತ್ತದೆ. ಏಕೆಂದರೆ ಅದಕ್ಕಿರುವ ಮಾರುಕಟ್ಟೆ ಶಕ್ತಿ, ಯುವಕರ ಆಕರ್ಷಣೆ, ಹಣ ಇತ್ಯಾದಿ. ಆದರೆ ಕ್ರಿಕೆಟಿಗರ ಬಗ್ಗೆ ಮಾತ್ರ ಬೆಳಕು ಹರಿಸಲೇಬೇಕು. ಸಚಿನ್, ವಿರಾಟ್ ಕೊಹ್ಲಿ ಅವರಂಥ ಆಟಾಗರರನ್ನು ಶ್ರೀಮಂತಿಕೆಗೆ ಅಥವಾ ಹಣ ಗಳಿಕೆಗೆ ಉದಾಹರಣೆ ಕೊಡಬಹುದು. ಆದರೆ ಹೃದಯ ಶ್ರೀಮಂತಿಕೆೆ ವಿಚಾರ ಬಂದಾಗ ಭಾರತ ತಂಡದಲ್ಲಿ ಕಾಣಸಿಗುವುದು ರಾಹುಲ್ ದ್ರಾವಿಡ್ ಹಾಗೂ ಮಹೇಂದ್ರ ಸಿಂಗ್ ಧೋನಿ. ಅದೇ ದೇಶೀಯ ಕ್ರಿಕೆಟ್‌ಗೆ ಬಂದಾಗ ಕನ್ನಡಿಗ ವಿನಯ್ ಕುಮಾರ್ ಹಾಗೂ ವಿದರ್ಭದ ವಾಸಿಂ ಜಾಫರ್ ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತಾರೆ. ಮುಂಬೈಯ ರಾಜಕೀಯಕ್ಕೆ ಬೇಸತ್ತ ಜಾಫರ್ ಈಗ ವಿದರ್ಭದ ಪರ ಆಡುತ್ತಿದ್ದು, ಕಳೆದ ಬಾರಿ ತಂಡ ಪ್ರಶಸ್ತಿ ಗೆಲ್ಲುವಲ್ಲಿ ಅವರ ಅನುಭವ ನೆರವಾಗಿತ್ತು.
ಕೆಲವೊಂದು ಆಟಗಾರರ ಕ್ರೀಡಾ ಸಾಧನೆಯನ್ನು ಮಾತ್ರ ನೋಡಿದರೆ ಸಾಲದು, ಅವರ ವ್ಯಕ್ತಿತ್ವವವೂ ಪ್ರಮುಖವಾಗಿರುತ್ತದೆ. ದ್ರಾವಿಡ್, ಕುಂಬ್ಳೆ, ಶ್ರೀನಾಥ್ ಅವರ ರೀತಿಯಲ್ಲಿ ವಿನಯ್ ಕುಮಾರ್ ರಾಜ್ಯದ ಯುವಕರಿಗೆ ಮಾದರಿಯಾದ ಕ್ರಿಕೆಟಿಗರಾಗಿ ಈಗ 101ನೇ ಪಂದ್ಯ ಆಡಲು ಸಜ್ಜಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News