ರೈತರ ಹೆಸರಿನಲ್ಲಿ ಗೂಂಡಾಗಿರಿ ಸಹಿಸುವುದಿಲ್ಲ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2018-11-18 13:01 GMT

ಬೆಂಗಳೂರು, ನ.18: ರೈತರ ಹೆಸರು ಬಳಸಿಕೊಂಡು ಗೂಂಡಾಗಿರಿ ಮಾಡುವುದನ್ನು ನಮ್ಮ ಸರಕಾರ ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ರವಿವಾರ ನಗರದ ಹೆಬ್ಬಾಳದ ಬಳಿಯಿರುವ ಜಿಕೆವಿಕೆಯಲ್ಲಿ ಹಮ್ಮಿಕೊಂಡಿದ್ದ ನಾಲ್ಕು ದಿನಗಳ ಕೃಷಿ ಮೇಳದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಬೆಳಗಾವಿಯ ಸುವರ್ಣಸೌಧದ ಎದುರು ಕಬ್ಬಿಗೆ ನಾಲ್ಕು ವರ್ಷದಿಂದ ಸಿಗಬೇಕಾದ ಹಣ ಸಿಕ್ಕಿಲ್ಲ ಎಂದು ಹೋರಾಟ ಮಾಡುತ್ತಿದ್ದು, ಗೇಟ್‌ಗಳ ಬೀಗಗಳನ್ನು ಹೊಡೆಯಲು ಮುಂದಾಗಿದ್ದಾರೆ. ನಮ್ಮ ಸರಕಾರ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳಾಗಿದೆ. ನಾಲ್ಕು ವರ್ಷದಿಂದ ಹಣ ಸಿಗದೇ ಇರುವುದಕ್ಕೆ ಏಕಾಏಕಿ ನಾವೇನು ಮಾಡಲು ಸಾಧ್ಯ. ಅಲ್ಲದೆ, ನಮ್ಮ ರೈತರು ಮೃದು ಸ್ವಭಾವದವರು. ಆದರೆ, ಇಲ್ಲಿ ಗಲಾಟೆ ನಡೆಸುತ್ತಿರುವ ಮಹಿಳೆ ರೈತ ಮಹಿಳೆಯೇ ಅಲ್ಲ. ಅನಗತ್ಯವಾಗಿ ರೈತರ ಹೆಸರಿನಲ್ಲಿ ಗೂಂಡಾಗಿರಿ ಮಾಡಲು ಮುಂದಾದರೆ ಸಹಿಸುವುದಿಲ್ಲ ಎಂದರು.

ರಾಜ್ಯದಲ್ಲಿ ರೈತರು ಋಣಮುಕ್ತವಾಗಬೇಕು ಎಂಬ ಉದ್ದೇಶದಿಂದ ಸರಕಾರ ಸಾಲ ಮನ್ನಾ ಘೋಷಣೆ ಮಾಡಿದೆ. ರಾಜ್ಯದ ಆರ್ಥಿಕತೆಯ ಮೇಲೆ ಹೊರೆಯಾಗದಂತೆ ಸಾಲದ ಹಣ ಭರ್ತಿಗಾಗಿ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮುಂದಿನ ಜೂನ್ ತಿಂಗಳಿನಲ್ಲಿ ಎಲ್ಲ ಬ್ಯಾಂಕ್‌ಗಳಲ್ಲಿ ರೈತರು ಮಾಡಿರುವ ಸಾಲವನ್ನು ಮನ್ನಾ ಮಾಡಿ ಹಣ ಭರ್ತಿ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.

ವಿಧಾನಸೌಧದ ಕಟ್ಟಡಗಳಲ್ಲಿ ಸಮಯವನ್ನು ವ್ಯರ್ಥ ಮಾಡಲು ಕುಳಿತಿಲ್ಲ. ರೈತರ ಸಂಕಷ್ಟಗಳನ್ನು ಪರಿಹರಿಸುವ ಉದ್ದೇಶದಿಂದ ಕೆಲಸ ಮಾಡುತ್ತಿದ್ದೇವೆ. ಹೀಗಾಗಿ, ರೈತರು ಸರಕಾರದಿಂದ ನೀಡುವ ಸಂದೇಶಗಳನ್ನು ಪಾಲಿಸಬೇಕಾದ ಅಗತ್ಯವಿದೆ. ರೈತರು ಹಣಕ್ಕಾಗಿ ಕೈಚಾಚಬಾರದು, ಹಣ ನೀಡುವಂತಾಗಬೇಕು. ರಾಜ್ಯದ ರೈತರು ಕೆಲವರು ಮಾಡುತ್ತಿರುವ ಅಪಪ್ರಚಾರಕ್ಕೆ ಬಲಿಯಾಗಬಾರದು ಎಂದು ಕಿವಿಮಾತು ಹೇಳಿದರು.

ರೈತರು ಲಾಭದಾಯಕ ಬೆಳೆಗಳಿಗೆ ಹೆಚ್ಚು ಒತ್ತು ನೀಡುತ್ತಾರೆ. ಅದರ ಬದಲಿಗೆ ಆಧುನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಎಲ್ಲ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು. ಕೃಷಿ ಪದ್ಧತಿಗಳನ್ನು ಬದಲಿಸಿಕೊಳ್ಳಲು ಮಾನಸಿಕವಾಗಿ ಎಲ್ಲರೂ ಸಿದ್ಧರಾಗಬೇಕಾದ ಅಗತ್ಯವಿದೆ. ಇದಕ್ಕೆ ಸರಕಾರ ಸಂಪೂರ್ಣ ಸಹಕಾರ ಹಾಗೂ ಸಹಾಯವನ್ನು ನೀಡುತ್ತದೆ. ಅಲ್ಲದೆ, ವೈಜ್ಞಾನಿಕ ಬೆಲೆ ಮತ್ತು ಬೆಂಬಲ ಬೆಲೆ ನೀಡಲು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಇತ್ತೀಚಿಗೆ ಬೀದರ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಕೃಷಿ ಮಾಡುತ್ತಿದ್ದ ಒಬ್ಬರ ತೋಟಕ್ಕೂ ಭೇಟಿ ನೀಡಿದ್ದೆ. ಅವರ ಮನೆಯಲ್ಲಿನ ದಂಪತಿ ಇಬ್ಬರೂ ಉನ್ನತ ಶಿಕ್ಷಣ ಪಡೆದು, ಕೃಷಿಯಲ್ಲಿಯೇ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಹಳೆ ಕೃಷಿ ಪದ್ಧತಿಗಳು ಕಣ್ಮರೆಯಾಗುತ್ತಿವೆ. ಅದರ ಬದಲಿಗೆ ನೂತನ ಆವಿಷ್ಕಾರಗಳು, ಸಂಶೋಧನೆಗಳು ನಡೆಯುತ್ತಿದ್ದು, ಅದರ ಕಡೆಗೆ ರೈತರು ಬರಬೇಕು ಎಂದು ಕರೆ ನೀಡಿದರು.

ಸಂಸದ ವೀರಪ್ಪ ಮೊಯ್ಲಿ ಮಾತನಾಡಿ, ಸಂಶೋಧನೆಗಳು ದ್ವೀಪಗಳಾಗದೇ ಸಮಸ್ತ ಕೃಷಿಕರ ಜಮೀನುಗಳಿಗೆ ತಲುಪುವಂತಾಗಬೇಕು. ಆಗ ಮಾತ್ರ ನೂತನ ಸಂಶೋಧನೆಗಳಿಗೆ ಹೆಚ್ಚು ಮಾನ್ಯತೆ ಸಿಗುತ್ತದೆ. ರೈತರು ಸ್ವಾವಲಂಬಿಗಳಾಗಿ ಬೆಳೆಯಲು ಆರ್ಥಿಕವಾಗಿ ಸಮೃದ್ದಿಯಾಗಬೇಕು. ಆ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.

ಕಾರ್ಯಕ್ರದಲ್ಲಿ ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ, ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ, ಕೃಷಿ ವಿವಿ ಕುಲಪತಿ ಡಾ.ಎಸ್.ರಾಜೇಂದ್ರ ಪ್ರಸಾದ್, ವಾರ್ತಾ ಇಲಾಖೆ ನಿರ್ದೇಶಕ ವಿಶುಕುಮಾರ್ ಸೇರಿದಂತೆ ಹಲವರು ಉಸ್ಥಿತರಿದ್ದರು.

ಪ್ರಶಸ್ತಿ ಪ್ರದಾನ

1. ಸಿ.ಭೈರೇಗೌಡ ರಾಜ್ಯಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ- ಬಾಗಲಕೋಟೆ ಜಿಲ್ಲೆಯ ದುಂಡಪ್ಪ ಯಂಕಪ್ಪಹಳ್ಳಿ

2. ಡಾ.ಆರ್.ದ್ವಾರಕೀನಾಥ್ ಅತ್ಯುತ್ತಮ ರೈತ ಪ್ರಶಸ್ತಿ- ಮಾಗಡಿ ತಾಲೂಕಿನ ಜಿ.ರಮೇಶ್

3. ಡಾ.ಆರ್.ದ್ವಾರಕೀನಾಥ್ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿ- ತುಮಕೂರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಕೆ.ಆರ್.ಶ್ರೀನಿವಾಸ

ಕೃಷಿ ಕ್ಷೇತ್ರದಲ್ಲಿ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದು, ಅದನ್ನು ನಿವಾರಿಸಲು ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಕೃಷಿ ಮಾಡುವ ರೈತರಿಗೆ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ತೆಲಂಗಾಣದ ಮಾದರಿಯಲ್ಲಿ ರೈತರಿಗೆ ‘ಇನ್ಸೂರೆನ್ಸ್ ಪಾಲಿಸಿ’ ಜಾರಿ ಮಾಡುವ ಕುರಿತು ಸರಕಾರ ಚಿಂತನೆ ನಡೆಸಿದೆ. ಬೆಳೆ ಸಮೀಕ್ಷೆ ಮಾಡುವ ಪದ್ಧತಿಯಲ್ಲಿಯೂ ಹೊಸ ಆವಿಷ್ಕಾರವನ್ನು ಮಾಡಲಾಗುತ್ತದೆ.

-ಎನ್.ಎಚ್.ಶಿವಶಂಕರರೆಡ್ಡಿ, ಕೃಷಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News