ತಮಿಳುನಾಡಿನಲ್ಲಿ ‘ಗಜ’ ಚಂಡಮಾರುತಕ್ಕೆ ಬಲಿಯಾದವರ ಸಂಖ್ಯೆ 45ಕ್ಕೇರಿಕೆ

Update: 2018-11-18 13:10 GMT

ಸೇಲಂ,ನ.18: ರಾಜ್ಯದಲ್ಲಿ ಗಜ ಚಂಡಮಾರುತಕ್ಕೆ ಬಲಿಯಾದವರ ಸಂಖ್ಯೆ 45ಕ್ಕೇರಿದೆ ಎಂದು ರವಿವಾರ ಇಲ್ಲಿ ತಿಳಿಸಿದ ತಮಿಳುನಾಡು ಮುಖ್ಯಮಂತ್ರಿ ಇ.ಕೆ.ಪಳನಿಸ್ವಾಮಿ ಅವರು,ಪರಿಹಾರ ಕಾರ್ಯಾಚರಣೆಗಳಲ್ಲಿ ಪಾಲ್ಗೊಳ್ಳುವಂತೆ ಎಲ್ಲ ರಾಜಕೀಯ ಪಕ್ಷಗಳ ನಾಯಕರನ್ನು ಕೋರಿಕೊಂಡರು.

ಚಂಡಮಾರುತ ಪೀಡಿತ ಜಿಲ್ಲೆಗಳಲ್ಲಿ ಪರಿಹಾರ ಕಾರ್ಯಾಚರಣೆಗಳು ಸಮರೋಪಾದಿಯಲ್ಲಿ ನಡೆಯುತ್ತಿದ್ದು,ಅವುಗಳ ಮೇಲೆ ನಿಗಾಯಿರಿಸಲು ನಾಗಪಟ್ಟಿಣಂ,ತಂಜಾವೂರು,ತಿರುವರೂರು ಮತ್ತು ಪುದುಕೊಟ್ಟೈ ಜಿಲ್ಲೆಗಳಲ್ಲಿ ರಾಜ್ಯದ ಸಚಿವರನ್ನು ನಿಯೋಜಿಸಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದ ಅವರು,ಚಂಡಮಾರುತದಿಂದ ತೀವ್ರ ಪೀಡಿತವಾಗಿರುವ ಪ್ರದೇಶಗಳ ಕುರಿತು ರಾಜ್ಯ ಸರಕಾರವು ವಿವರಗಳನ್ನು ಸಂಗ್ರಹಿಸುತ್ತಿದೆ ಎಂದರು.

ತಮಿಳುನಾಡು ಸರಕಾರವು ಮೃತರ ಕುಟುಂಬಗಳಿಗೆ ತಲಾ 10 ಲ.ರೂ. ಮತ್ತು ತೀವ್ರವಾಗಿ ಗಾಯಗೊಂಡವರಿಗೆ ತಲಾ ಒಂದು ಲ.ರೂ.ಗಳ ಪರಿಹಾರವನ್ನು ಘೋಷಿಸಿದೆ. ಸಾಮಾನ್ಯ ಗಾಯಾಳುಗಳು ತಲಾ 25,000 ರೂ. ಪರಿಹಾರವನ್ನು ಪಡೆಯಲಿದ್ದಾರೆ.

ಚಂಡಮಾರುತದಿಂದಾಗಿ ಕರಾವಳಿ ಜಿಲ್ಲೆಗಳಲ್ಲಿ 1.7 ಲಕ್ಷ ಮರಗಳು ಉರುಳಿಬಿದ್ದಿವೆ,735 ಜಾನುವಾರುಗಳು ಮೃತಪಟ್ಟಿವೆ,1.17 ಲ.ಮನೆಗಳಿಗೆ ಮತ್ತು 88,102 ಹೆಕ್ಟೇರ್ ಕೃಷಿಭೂಮಿಗೆ ಹಾನಿಯಾಗಿದೆ. ಸುಮಾರು 2.5 ಲ.ಜನರಿಗೆ 483 ಪರಿಹಾರ ಶಿಬಿರಗಳಲ್ಲಿ ಆಶ್ರಯ ಕಲ್ಪಿಸಲಾಗಿದ್ದು,1,014 ಸಂಚಾರಿ ಮೆಡಿಕಲ್ ವ್ಯಾನ್‌ಗಳನ್ನು ವ್ಯವಸ್ಥೆಗೊಳಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

39,938 ವಿದ್ಯುತ್ ಕಂಬಗಳು ಮತ್ತು 347 ಪರಿವರ್ತಕಗಳಿಗೆ ಹಾನಿಯುಂಟಾಗಿದ್ದು,ರಾಜ್ಯ ವಿದ್ಯುತ್ ಮಂಡಳಿಯ 12,532 ಸಿಬ್ಬಂದಿಗಳನ್ನು ದುರಸ್ತಿ ಕಾರ್ಯದಲ್ಲಿ ತೊಡಗಿಸಲಾಗಿದೆ ಎಂದರು.

ಈ ಅಗತ್ಯದ ಸಂದರ್ಭದಲ್ಲಿ ಸಹಾಯ ಹಸ್ತ ಚಾಚುವಂತೆ ಎಲ್ಲ ರಾಜಕೀಯ ಪಕ್ಷಗಳು ಮತ್ತು ಜನತೆಯನ್ನು ಅವರು ಆಗ್ರಹಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆಯೇ ಎಂಬ ಪ್ರಶ್ನೆಗೆ,ಚಂಡಮಾರುತದಿಂದ ಉಂಟಾಗಿರುವ ಹಾನಿಯ ಬಗ್ಗೆ ತನ್ನ ಸರಕಾರವು ಕೇಂದ್ರಕ್ಕೆ ಮಾಹಿತಿಯನ್ನು ಸಲ್ಲಿಸಿದೆ ಎಂದು ಪಳನಿಸ್ವಾಮಿ ಉತ್ತರಿಸಿದರು. ಅಗತ್ಯವಾದರೆ ಪರಿಹಾರ ಕಾರ್ಯಾಚರಣೆಗಳಿಗೆ ಸೇನೆಯ ನೆರವನ್ನು ಕೋರುವುದಾಗಿ ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News