ಪ್ರವಾದಿ ಮುಹಮ್ಮದ್ ರನ್ನು ಎಲ್ಲರೂ ಓದಬೇಕು: ಡಾ.ಎಲ್.ಹನುಮಂತಯ್ಯ

Update: 2018-11-18 13:54 GMT

ಬೆಂಗಳೂರು, ನ.18: ಶಾಂತಿಯ ಸಂದೇಶ ಸಾರಿದ ಮುಹಮ್ಮದ್ ಪೈಗಂಬರ್‌ರನ್ನು ಎಲ್ಲ ಭಾಷೆ ಹಾಗೂ ಧರ್ಮದ ಜನರು ಓದಬೇಕು. ಪೈಗಂಬರ್‌ರನ್ನು ಓದದೆ ಇರುವವರು ಧರ್ಮದ ಬಗ್ಗೆ ತಪ್ಪಾಗಿ ಅರ್ಥ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ರಾಜ್ಯಸಭಾ ಸದಸ್ಯ ಹಾಗೂ ಸಾಹಿತಿ ಡಾ.ಎಲ್.ಹನುಮಂತಯ್ಯ ಅಭಿಪ್ರಾಯಪಟ್ಟರು.

ರವಿವಾರ ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶಾಂತಿ ಪ್ರಕಾಶನದಿಂದ ಆಯೋಜಿಸಿದ್ದ ಪ್ರವಾದಿ ಮುಹಮ್ಮದ್(ಸ) (ಸಾಹಿತಿಗಳ ಲೇಖನಗಳ ಸಂಕಲನ), ಪ್ರವಾದಿ ಮುಹಮ್ಮದ್(ಸ) (ವಿಶ್ವ ದಾರ್ಶನಿಕರ ದೃಷ್ಟಿಯಲ್ಲಿ ಪ್ರವಾದಿ) ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇಡೀ ವಿಶ್ವಕ್ಕೆ ಮುಹಮ್ಮದ್ ಶಾಂತಿ ಹಾಗೂ ನೆಮ್ಮದಿಯಿಂದ ಮನುಕುಲ ಉಳಿಯಲು ಸಾಧ್ಯ ಎಂಬ ಸಂದೇಶ ಸಾರಿದರು. ಹೀಗಾಗಿ, ಅವರನ್ನು ಮುಸ್ಲಿಮ್ ಸಮುದಾಯವಷ್ಟೇ ಅಲ್ಲದೆ, ಎಲ್ಲ ಧರ್ಮದವರು ಹಾಗೂ ಎಲ್ಲ ಭಾಷಿಕರೂ ಓದಬೇಕಿದೆ ಎಂದು ತಿಳಿಸಿದರು.

ಮುಹಮ್ಮದ್ ಪೈಗಂಬರ್ ಜಿಹಾದ್ ಎಂದರೆ ಆಸೆ, ಆಮಿಷಗಳ ವಿರುದ್ಧ ಧ್ವನಿ ಎತ್ತಿ ಹೋರಾಡುವುದು ಎಂದು ಪ್ರತಿಪಾದಿಸಿದ್ದರು. ಆದರೆ, ಇಂದಿನ ದಿನಗಳಲ್ಲಿ ಜಿಹಾದ್ ಎಂದರೆ ಭಯ ಹುಟ್ಟಿಸುವಂತ ಸ್ಥಿತಿ ನಿರ್ಮಾಣವಾಗಿದೆ. ವಿಶ್ವದಾದ್ಯಂತ ಜಿಹಾದ್ ಹೆಸರಲ್ಲಿ ಭಯೋತ್ಪಾದಕ ಸಂಘಟನೆ ಬೆಳೆದು, ಜನ ನೆಮ್ಮದಿಯಿಂದ ಬದುಕಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿರುವುದು ದುರದೃಷ್ಟಕರ ಸಂಗತಿ ಎಂದರು.

ತಲಾಕ್ ವಿಷಯಕ್ಕೆ ಸಂಬಂಧಿಸಿದಂತೆ ಕೋರ್ಟ್ ನೀಡಿರುವ ತೀರ್ಪನ್ನು ಮುಂದಿಟ್ಟುಕೊಂಡು ಕೆಲವರು ಅಲ್ಪಸಂಖ್ಯಾತರನ್ನು ಓಲೈಸಲು ಪ್ರಯತ್ನಿಸುತ್ತಿದ್ದಾರೆ. ಕೇರಳದ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಋತುಮತಿಯಾಗುವ ಮಹಿಳೆಯರಿಗೆ ಪ್ರವೇಶ ಕಲ್ಪಿಸುವ ವಿಚಾರದಲ್ಲಿಯೂ ರಾಜಕೀಯ ಮಾಡುತ್ತಿರುವುದು ಅಸಹ್ಯವೆನಿಸುತ್ತಿದೆ ಎಂದು ನುಡಿದರು.

ಧರ್ಮವನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುವ ಪ್ರಯತ್ನ ಎಲ್ಲ ಕಾಲದಲ್ಲಿಯೂ ನಡೆಯುತ್ತ ಬಂದಿದೆ. ಹಾಗಾಗಿ, ಇಂದು ಧರ್ಮದ ಸತ್ಯವನ್ನು ಬಯಲು ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಶಾಂತಿಯ ಸಂದೇಶ ಸಾರಿದ ಮುಹಮ್ಮದ್ ಪೈಗಂಬರ್‌ರನ್ನು ಜನರ ಬಳಿಗೆ ಕೊಂಡೊಯ್ಯುವ ಅಗತ್ಯ ಹೆಚ್ಚಿದೆ ಎಂದು ಅವರು ತಿಳಿಸಿದರು.

ಸಾಹಿತಿ ಶಾಕಿರಾ ಖಾನುಮ್ ಮಾತನಾಡಿ, ಪ್ರವಾದಿ ಮುಹಮ್ಮದ್(ಸ) (ವಿಶ್ವ ದಾರ್ಶನಿಕರ ದೃಷ್ಟಿಯಲ್ಲಿ ಪ್ರವಾದಿ) ಪುಸ್ತಕದಲ್ಲಿ ಗಾಂಧೀಜಿ, ವಿವೇಕಾನಂದ ಹಾಗೂ ಸರೋಜಿನಿ ನಾಯ್ಡು ಸೇರಿದಂತೆ ದೇಶದ 5 ಜನ ದಾರ್ಶನಿಕರು ಹಾಗೂ ಅನಿಬೆಸೆಂಟ್ ಸೇರಿದಂತೆ 25 ಜನ ವಿದೇಶಿ ದಾರ್ನಿಕರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ. ನಮ್ಮನ್ನು ನಾವು ಕಂಡುಕೊಳ್ಳುವುದೆ ದೈವ ಎನ್ನುವುದನ್ನು ಸಾರಿದ ಪೈಗಂಬರ್ ಅವರ ವ್ಯಕ್ತಿತ್ವದ ಪರಿಚಯವನ್ನು ಪುಸ್ತಕ ತಿಳಿಸುತ್ತದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಎನ್.ಎಸ್.ಶಂಕರ್, ಮುಹಮ್ಮದ್ ಕುಂಞಿ, ಶಾಂತಿ ಪ್ರಕಾಶನದ ಅಧ್ಯಕ್ಷ ಮುಹಮ್ಮದ್ ಅತ್ತರುಲ್ಲಾ ಶರೀಫ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಮಹಿಳೆಗೂ ಒಂದು ಜೀವನವಿರುತ್ತದೆ. ಆಕೆಗೂ ಸ್ವತಂತ್ರವಾಗಿ ಬದುಕುವ ಕನಸಿರುತ್ತದೆ ಎಂದು ಮಹಿಳೆಯರಿಗೂ ಹಕ್ಕುಗಳನ್ನು ನೀಡಿದವರು ಪೈಗಂಬರ್. ಪಾಪದ ಮೇಲೆ ಪುಣ್ಯ, ಸುಳ್ಳಿನ ಮೇಲೆ ಸತ್ಯಗಳು ಎಂದಿಗೂ ಗೆಲ್ಲುತ್ತವೆ ಎಂಬ ಸಂದೇಶವನ್ನು ಪೈಗಂಬರ್ ಸಮಾಜಕ್ಕೆ ನೀಡಿದ್ದಾರೆ. ಅಲ್ಲದೆ, ಅವರು ನೈತಿಕ ಶಕ್ತಿಯನ್ನು ಪರಿಚಯ ಮಾಡಿಸಿಕೊಟ್ಟಿದ್ದಾರೆ. ಶತ್ರುಗಳಿಗೂ ಕನಿಕರ, ಕರುಣೆ ತೋರಿಸು ಎಂದಿದ್ದರು. ಅಂತಹ ಮುಹಮ್ಮದ್ ಪೈಗಂಬರ್‌ರ ವಿಚಾರಧಾರೆಗಳನ್ನು ಎಲ್ಲರಿಗೂ ತಲುಪಿಸುವ ನಿಟ್ಟಿನಲ್ಲಿ ಈ ಎರಡು ಕೃತಿಗಳು ಪ್ರಮುಖ ಎನಿಸುತ್ತವೆ.

-ಶಾಕಿರಾ ಖಾನುಮ್, ಲೇಖಕಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News