ಪ್ರಧಾನಿ ನನ್ನ ಪ್ರಶ್ನೆಗೆ ಉತ್ತರಿಸಲು ಸಾಧ್ಯವಿಲ್ಲ: ರಾಹುಲ್ ಗಾಂಧಿ

Update: 2018-11-18 14:33 GMT

ಅಂಬಿಕಾಪುರ, ನ. 18: ರಫೇಲ್ ಯುದ್ಧ ವಿಮಾನ ಒಪ್ಪಂದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಿಯಾದರೂ ಯಾವಾಗಲಾದರೂ ನನ್ನೊಂದಿಗೆ ಕನಿಷ್ಠ 15 ನಿಮಿಷ ಚರ್ಚಿಸಲಿ. ಆದರೆ ಅವರಿಗೆ ತನ್ನ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

 ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಫೇಲ್ ಯುದ್ಧ ವಿಮಾನ ಒಪ್ಪಂದದ ಬಗ್ಗೆ ನನ್ನೊಂದಿಗೆ ಮಾತನಾಡುವ ಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲ ಎಂದಿದ್ದಾರೆ. ರಫೇಲ್ ಒಪ್ಪಂದ ಕುರಿತು ಯಾವಾಗಲಾದರೂ ಎಲ್ಲಿಯಾದರೂ ನನ್ನೊಂದಿಗೆ ಕೇವಲ 15 ನಿಮಿಷಗಳ ಕಾಲ ಮಾತನಾಡಲಿ ಎಂದು ನಾನು ಮೋದಿ ಅವರಿಗೆ ಸವಾಲು ಹಾಕುತ್ತೇನೆ. ನಾನು ಅನಿಲ್ ಅಂಬಾನಿ, ಎಚ್‌ಎಎಲ್, ಫ್ರಾನ್ಸ್‌ನ ಅಧ್ಯಕ್ಷರ ಹೇಳಿಕೆ ಹಾಗೂ ಯುದ್ಧ ವಿಮಾನದ ಬೆಲೆಯ ಬಗ್ಗೆ ಮಾತನಾಡಬಲ್ಲೆ ಎಂದು ಅವರು ಹೇಳಿದ್ದಾರೆ. ಪ್ರಧಾನಿ ಅವರ ನಗದು ನಿಷೇಧ ದೇಶದ ಅವರ ಕೆಲವೇ ಕೆಲವು ಉದ್ಯಮಿ ಗೆಳೆಯರಿಗೆ ನೆರವಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದರು. ವಿಧಾನ ಸಭೆ ಚುನಾವಣೆ ನಡೆಯಲಿರುವ ಛತ್ತೀಸ್‌ಗಡದಲ್ಲಿ ನಿರುದ್ಯೋಗದ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ, ಕಳೆದ 15 ವರ್ಷಗಳಿಂದ ಆಳ್ವಿಕೆ ನಡೆಸುತ್ತಿದ್ದರೂ ಮುಖ್ಯಮಂತ್ರಿ ರಮಣ್ ಸಿಂಗ್ ಸರಕಾರ ಉದ್ಯೋಗ ಒದಗಿಸುವುದರಲ್ಲಿ ವಿಫಲವಾಗಿದೆ ಎಂದರು. ರಮಣ್ ಸಿಂಗ್ ಅವರು ಕಳೆದ 15 ವರ್ಷಗಳಿಂದ ಅಧಿಕಾರದಲ್ಲಿ ಇದ್ದಾರೆ.

 ನರೇಂದ್ರ ಮೋದಿ ಅವರು ನಾಲ್ಕೂವರೆ ವರ್ಷ ಅಧಿಕಾರಾವಧಿಯನ್ನು ಸಂಪೂರ್ಣಗೊಳಿಸಿದ್ದಾರೆ. ಆದರೆ, ಕೇಂದ್ರ ಹಾಗೂ ರಾಜ್ಯ ಸರಕಾರ ಯುವಕರಿಗೆ ನೀಡಿದ ಉದ್ಯೋಗದ ಭರವಸೆ ಈಡೇರಿಸುವಲ್ಲಿ ವಿಫಲವಾಗಿದೆ ಎಂದು ರಾಹುಲ್ ಗಾಂಧಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News