ಬೆಂಗಳೂರು: ಕೃಷಿ ಮೇಳ-2018 ಕ್ಕೆ ಅದ್ದೂರಿ ತೆರೆ; 12.5 ಲಕ್ಷಕ್ಕೂ ಅಧಿಕ ಜನರ ಭೇಟಿ

Update: 2018-11-18 14:46 GMT

ಬೆಂಗಳೂರು, ನ.18: ನಗರದ ಹೆಬ್ಬಾಳದ ಬಳಿಯಿರುವ ಗಾಂಧೀ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕಳೆದ ನಾಲ್ಕು ದಿನಗಳಿಂದ ಆಯೋಜಿಸಿದ್ದ ಕೃಷಿ ಮೇಳ-2018ಕ್ಕೆ ರವಿವಾರ ಅದ್ದೂರಿಯಾಗಿ ತೆರೆ ಬಿದ್ದಿದ್ದು, ಲಕ್ಷಾಂತರ ಜನ ಮೇಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.

ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ರೈತರು, ವಿದ್ಯಾರ್ಥಿ, ಯುವಜನರು ಕೃಷಿ ಮೇಳಕ್ಕೆ ಬಂದು ಮಾಹಿತಿ ಪಡೆದುಕೊಂಡಿದ್ದಾರೆ. ವೈಜ್ಞಾನಿಕ ಆವಿಷ್ಕಾರಗಳು, ಸಮಗ್ರ ಬೇಸಾಯ ಪದ್ಧತಿ, ಸಾವಯವ ಕೃಷಿ, ಸಿರಿಧಾನ್ಯಗಳು ಹಾಗೂ ಅದರ ಮಹತ್ವ, ಸುಧಾರಿತ ತೋಟಗಾರಿಕೆ ಪದ್ಧತಿಗಳು, ಪಶು ಸಂಗೋಪನೆ, ಕೋಳಿ ಸಾಕಾಣಿಕೆ, ಹೈನುಗಾರಿಕೆ ಮತ್ತು ಮೀನು ಸಾಕಾಣಿಕೆ ಸೇರಿದಂತೆ ಹಲವು ವಿಚಾರಗಳ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.

ಹಿಂದಿನ ವರ್ಷ ನಡೆದ ಕೃಷಿ ಮೇಳದಲ್ಲಿ ಸುಮಾರು 12 ಲಕ್ಷ ಜನ ರೈತರು, ವಿದ್ಯಾರ್ಥಿಗಳು ಆಗಮಿಸಿ ಮಾಹಿತಿ ಪಡೆದುಕೊಂಡಿದ್ದರು. ಈ ವರ್ಷ ವಾತಾವರಣವೂ ಸಹಕರಿಸಿದ್ದರಿಂದ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸಿದ್ದರು. ಮೇಳ ಉದ್ಘಾಟನೆಯಾದ ದಿನವೇ 1.1 ಲಕ್ಷ ಜನರು ಆಗಮಿಸಿ ಮಾಹಿತಿ ಪಡೆದುಕೊಂಡಿದ್ದರು. ಎರಡನೇ ದಿನ 2.5 ಲಕ್ಷ, ಮೂರನೇ ದಿನ 4 ಲಕ್ಷ ಹಾಗೂ ಕೊನೆ ದಿನ ಸರಕಾರಿ ರಜೆ ಇದ್ದುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿ, ಯುವಜನರು, ಸರಕಾರಿ ಅಧಿಕಾರಿಗಳು ಸೇರಿದಂತೆ ಸುಮಾರು ಐದು ಲಕ್ಷಕ್ಕೂ ಅಧಿಕ ಜನರು ಮೇಳಕ್ಕೆ ಭೇಟಿ ನೀಡಿದ್ದಾರೆ ಎಂದು ಅಂದಾಜಿಸಲಾಗಿದೆ.

ವಹಿವಾಟು: 2018 ನೆ ಸಾಲಿನ ಕೃಷಿ ಮೇಳದಲ್ಲಿ ಸುಮಾರು 5 ಕೋಟಿಗೂ ಅಧಿಕ ವಹಿವಾಟು ನಡೆದಿದ್ದು, ಮೊದಲ ದಿನ 97 ಲಕ್ಷ, ಎರಡನೇ ದಿನ 1.50 ಕೋಟಿ, ಮೂರನೇ ದಿನ 1.60 ಕೋಟಿ ಹಾಗೂ ಕೊನೆಯ ದಿನವಾದ ರವಿವಾರ ಎರಡೂವರೆ ಕೋಟಿಗೂ ಅಧಿಕ ವಹಿವಾಟು ನಡೆದಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ನಾಲ್ಕು ದಿನಗಳ ಮೇಳದಲ್ಲಿ ಛತ್ತೀಸ್‌ಗಡದ ಕಟಕ್‌ನಾಥ್ ಕೋಳಿ, ಗುಜರಾತ್ ಮೂಲದ ಗಿರ್ ತಳಿಯ ಹೋರಿ, ವಿವಿಧ ತಳಿಯ ಮೊಲ, ಕುರಿ, ಹಸುಗಳು ಆಕರ್ಷಣೆಯ ಕೇಂದ್ರವಾಗಿದ್ದವು. ಇನ್ನುಳಿದಂತೆ ಕೃಷಿಯ ಆಧುನಿಕತೆಯ ಉಪಕರಣಗಳು, ವಿದ್ಯಾರ್ಥಿಗಳ ಸಂಶೋಧನೆಗಳು, ಡ್ರೋನ್ ತಂತ್ರಜ್ಞಾನದ ಔಷಧಿ ಸಿಂಪಡಣೆ ಸೇರಿದಂತೆ ಹಲವು ಪ್ರಮುಖ ಆಕರ್ಷಣೆಯಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News