ಶರೀಫ್ ಕುಟುಂಬದ ವಿರುದ್ಧ ಅಧಿಕಾರದ ದುರ್ಬಳಕೆ ಆರೋಪ: ನಾಲ್ಕು ಹೊಸಪ್ರಕರಣ ಎನ್‌ಎಬಿ ಹಸ್ತಾಂತರಿಸಲು ಪಾಕ್ ನಿರ್ಧಾರ

Update: 2018-11-18 15:53 GMT

ಇಸ್ಲಾಮಾಬಾದ್,ನ.18: ಹಿಂದಿನ ಸರಕಾರದ ಅವಧಿಯಲ್ಲಿ ನವಾಝ್ ಶರೀಫ್ ಕುಟುಂಬವು ಅಧಿಕಾರದ ದುರ್ಬಳಕೆ ಮಾಡಿದೆಯೆನ್ನಲಾದ ನಾಲ್ಕು ಪ್ರಕರಣಗಳ ತನಿಖೆಯನ್ನು ಪಾಕ್ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಸರಕಾರವು ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ಸಂಸ್ಥೆ (ಎನ್‌ಎಬಿ)ಗೆ ಹಸ್ತಾಂತರಿಸಲು ನಿರ್ಧರಿಸಿದೆ.

ಇಮ್ರಾನ್ ಖಾನ್ ಅವರ ಸಲಹೆಗಾರರಾದ ಶೆಹಝಾದ್ ಅಕ್ಬರ್ ಹಾಗೂ ವಿಶೇಷ ಸಹಾಯಕ ಇಫ್ತಿಕಾರ್ ದುರ್ರಾನಿ ಅವರು ಇಸ್ಲಾಮಾಬಾದ್‌ನಲ್ಲಿ ರವಿವಾರ ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡುತ್ತಾ, ಹಿಂದಿನ ಸರಕಾರದ ಅವಧಿಯಲ್ಲಿ ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಹಾಗೂ ಪಾಕಿಸ್ತಾನ ಮುಸ್ಲಿಂ ಲೀಗ್‌ನ ವರಿಷ್ಠ ಶಹಬಾಝ್ ಶರೀಫ್ ಹಾಗೂ ಉಚ್ಚಾಟಿತ ಪ್ರಧಾನಿ ನವಾಝ್ ಶರೀಫ್ ಅವರ ಪುತ್ರಿ ಮರಿಯಮ್ ನವಾಝ್ ಅವರಿಂದ ಸರಕಾರಿ ಸಂಪನ್ಮೂಲಗಳು ದುರ್ಬಳಕೆಯಾಗಿರುವ ಬಗ್ಗೆ ವಿವರಗಳನ್ನು ನೀಡಿದರೆಂದು ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಲಂಡನ್‌ನಲ್ಲಿ ಅಕ್ರಮವಾಗಿ ನಾಲ್ಕು ಐಶಾರಾಮಿ ಫ್ಲಾಟ್‌ಗಳ ಖರೀದಿಸಿದ ಹಗರಣಕ್ಕೆ ಸಂಬಂಧಿಸಿ 2017ರ ಜುಲೈನಲ್ಲಿ ಆಗಿನ ಪಾಕ್ ಪ್ರಧಾನಿ ನವಾಝ್ ಶರೀಫ್ (68) ಅವರನ್ನು ಸುಪ್ರೀಂಕೋರ್ಟ್ ಅನರ್ಹಗೊಳಿಸಿತ್ತು. 2018ರ ಜುಲೈನಲ್ಲಿ ನವಾಝ್ ಶರೀಫ್, ಅವರ ಪುತ್ರಿ ಮರಿಯಮ್ ಹಾಗೂ ಅವರ ಅಳಿಯ ನಿವೃತ್ತ ಕ್ಯಾಪ್ಟನ್ ಮುಹಮ್ಮದ್ ಸಫ್ದರ್ ಅವರಿಗೆ ಕ್ರಮವಾಗಿ 11 ವರ್ಷ, ಎಂಟು ವರ್ಷ ಹಾಗೂ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು

.

ಶರೀಫ್ ಕುಟುಂಬದ ವಿರುದ್ಧ ಹೊಸ ಆರೋಪಗಳು

1ನ್ಯೂ ಲಂಡನ್‌ನಲ್ಲಿ ಶರೀಫ್ ಕುಟುಂಬ ಹೊಂದಿರುವ ಆಸ್ತಿಯ ಬಗ್ಗೆ ತನಿಖೆ. ಈ ಆಸ್ತಿಗೆ ಸಂಬಂಧಿಸಿದ ಒಡೆತನದ ದಾಖಲೆಗಳನ್ನು ತನಗೆ ಹಸ್ತಾಂತರಿಸುವಂತೆ ಪಾಕ್ ಸರಕಾರವು ಬ್ರಿಟನನ್ನು ಕೋರಿದೆ.

2.ಶರೀಫ್ ಕುಟುಂಬದ ರಾವಲ್ಪಿಂಡಿ ನಿವಾಸಕ್ಕೆ ಭದ್ರತಾಬೇಲಿಯನ್ನು ನಿರ್ಮಾಣಕ್ಕಾಗಿ ಮಂಜೂರಾಗಿದ್ದ 60 ಕೋಟಿ ರೂ. ನಿಧಿಯ ದುರ್ಬಳಕೆ.

3. ಪ್ರಧಾನಿಯ ವಿಮಾನದಲ್ಲಿ ಮರಿಯಮ್ರ ಪ್ರಯಾಣದಿಂದ ಪಾಕ್ ಬೊಕ್ಕಸಕ್ಕೆ 3 ಕೋಟಿ ರೂ. ನಷ್ಟ.

4. ಶಹಬಾಝ್‌ರಿಂದ ಪ್ರಧಾನಿ ವಿಮಾನದ ದುರುಪಯೋಗ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News