‘ಅಜ್ಮಲ್ ಕಸಬ್’ಗೆ ಉ.ಪ್ರದೇಶದಲ್ಲಿ ವಸತಿ ಪ್ರಮಾಣಪತ್ರ ನೀಡಿಕೆ !

Update: 2018-11-18 16:19 GMT

ಕಾನ್ಪುರ,ನ.18: ಉ.ಪ್ರದೇಶದ ಬಿಧೂನಾ ತಾಲೂಕು ಕಚೇರಿಯಲ್ಲಿನ ದಾಖಲೆಗಳನ್ನು ನಂಬುವುದಾದರೆ 2012,ನ.21ರಂದು ಪುಣೆಯ ಯೆರವಾಡಾ ಜೈಲಿನಲ್ಲಿ ಗಲ್ಲಿಗೇರಿದ್ದ ಮುಂಬೈ ದಾಳಿಗಳ ಪಾತಕಿ ಅಜ್ಮಲ್ ಕಸಬ್‌ಗೆ ವಸತಿ ಪ್ರಮಾಣಪತ್ರವನ್ನು ನೀಡಲಾಗಿದೆ.

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತವು ಪ್ರಾಥಮಿಕ ತನಿಖೆಯ ಬಳಿಕ ವಸತಿ ಪ್ರಮಾಣಪತ್ರವನ್ನು ರದ್ದುಗೊಳಿಸಿದೆ ಮತ್ತು ಕಂದಾಯ ಅಧಿಕಾರಿಯನ್ನು ಅಮಾನತುಗೊಳಿಸಿದ ಬಳಿಕ ಈ ಸಂಬಂಧ ಸಮಗ್ರ ತನಿಖೆಗೆ ಆದೇಶಿಸಿದೆ.

ಅಪರಿಚಿತ ವ್ಯಕ್ತಿಯೋರ್ವ ಸಲ್ಲಿಸಿದ್ದ ನಕಲಿ ದಾಖಲೆಗಳ ಆಧಾರದಲ್ಲಿ ಅಜ್ಮಲ್ ಕಸಬ್‌ಗೆ ವಸತಿ ಪ್ರಮಾಣಪತ್ರವನ್ನು ವಿತರಿಸಲಾಗಿದ್ದನ್ನು ಉಪ ವಿಭಾಗಾಧಿಕಾರಿ ಪ್ರವೇಂದ್ರ ಕುಮಾರ್ ಅವರು ದೃಢಪಡಿಸಿದ್ದಾರೆ.

ಅಪರಿಚಿತ ವ್ಯಕ್ತಿಯೋರ್ವ ಕಳೆದ ಅಕ್ಟೋಬರ್‌ನಲ್ಲಿ ವಸತಿ ಪ್ರಮಾಣಪತ್ರವನ್ನು ಕೋರಿ ಭಯೋತ್ಪಾದಕ ಅಜ್ಮಲ್ ಕಸಬ್‌ನ ಭಾವಚಿತ್ರದೊಂದಿಗೆ ಅರ್ಜಿಯನ್ನು ಸಲ್ಲಿಸಿದ್ದ. ಅಧಿಕಾರಿಗಳು ಅರ್ಜಿಯ ಸತ್ಯಾಸತ್ಯತೆಯನ್ನು ದೃಢಪಡಿಸಿಕೊಳ್ಳದೆ ಅ.21ರಂದು ಪ್ರಮಾಣಪತ್ರವನ್ನು ವಿತರಿಸಿದ್ದರು ಎಂದು ಕುಮಾರ್ ತಿಳಿಸಿದರು.

ಲಭ್ಯ ವಿವರಗಳಂತೆ ಕಸಬ್ ಜನ್ಮಸ್ಥಳವನ್ನು ಬಿಧೂನಾ ಎಂದು ಮತ್ತು ಆತನ ತಂದೆ-ತಾಯಿಯ ಹೆಸರುಗಳನ್ನು ಮುಹಮ್ಮದ್ ಅಮೀರ್ ಮತ್ತು ಮುಮ್ತಾಝ್ ಬೇಗಂ ಎಂದು ಉಲ್ಲೇಖಿಸಲಾಗಿದೆ. ಪ್ರಮಾಣಪತ್ರವು 181620020060722 ನೋಂದಣಿ ಸಂಖ್ಯೆಯನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News