ತನಿಖಾ ಸಂಸ್ಥೆಗಳಲ್ಲಿ ಕೇಂದ್ರದ ಹಸ್ತಕ್ಷೇಪ ಸಲ್ಲದು: ಮಲ್ಲಿಕಾರ್ಜುನ ಖರ್ಗೆ

Update: 2018-11-18 16:33 GMT

ಬೆಂಗಳೂರು, ನ.18: ಕೇಂದ್ರ ಸರಕಾರ ಸ್ವತಂತ್ರ ತನಿಖಾ ಸಂಸ್ಥೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ಈ ಬಗ್ಗೆ ಸಂಸತ್‌ನಲ್ಲಿ ಹಲವು ಬಾರಿ ಹೇಳಿದ್ದೇನೆ. ಆದರೂ ಪ್ರಧಾನಿ ನರೇಂದ್ರ ಮೋದಿ ತನ್ನ ತಪ್ಪನ್ನು ತಿದ್ದಿಕೊಳ್ಳುತ್ತಿಲ್ಲವೆಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುಪಿಎ ಸರಕಾರ ತನಿಖೆ ಸಂಸ್ಥೆಗಳ ಮೇಲೆ ಯಾವ ಸಂದರ್ಭದಲ್ಲೂ ಹಿಡಿತ ಸಾಧಿಸಿಲ್ಲ. ಆದರೆ, ಬಿಜೆಪಿ ಸರಕಾರ ತಮ್ಮ ಆರೋಪಗಳನ್ನು ಮುಚ್ಚಿಕೊಳ್ಳುವುದಕ್ಕಾಗಿ ತನಿಖಾ ಸಂಸ್ಥೆಗಳ ಮೇಲೆ ಹಸ್ತಕ್ಷೇಪ ಮಾಡಲು ಹೊರಟಿದೆ ಎಂದು ಆರೋಪಿಸಿದರು.

ಸಿಬಿಐ ಹಾಗೂ ಇಡಿ ತನಿಖಾ ಸಂಸ್ಥೆಗಳು ವಿಶ್ವವಿದ್ಯಾಲಯಗಳು, ಪತ್ರಿಕಾ ಸಂಸ್ಥೆಗಳ ಮೇಲೆ ದಾಳಿ ಮಾಡುತ್ತಿವೆ. ಕೇಂದ್ರದ ಬಿಜೆಪಿ ಸರಕಾರದ ವಿರುದ್ಧ ವರದಿಗಳು ಬಂದಾಗ ಈ ರೀತಿ ಆಗುತ್ತಿದೆ. ಮಾಧ್ಯಮಗಳ ಮೇಲೂ ಒತ್ತಡ ಹೇರಿ ಹಿಡಿತ ಸಾಧಿಸಿ ತಮ್ಮ ಅಜೆಂಡಾ ಹೇರುತ್ತಿದ್ದಾರೆ. ಇದು ಸರಿಯಾದ ವರ್ತನೆ ಅಲ್ಲ ಎಂದು ಅವರು ಆರೋಪ ಮಾಡಿದರು.

ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಮೆರಿಟ್ ಆಧಾರದ ಮೇಲೆ ನೇಮಕ ಮಾಡಬೇಕು. ಹೈದ್ರಾಬಾದ್ ಕರ್ನಾಟಕದಲ್ಲಿ 4 ರಿಂದ 5 ಸಾವಿರ ಶಿಕ್ಷಕರ ಹುದ್ದೆ ಖಾಲಿ ಇವೆ. ಬೇರೆ ಬೇರೆ ಕಡೆ ಲಕ್ಷಾಂತರ ಹುದ್ದೆಗಳಿವೆ. ಅವುಗಳನ್ನು ಸಂವಿಧಾನ ಬದ್ಧ ಮೀಸಲಾತಿ ಪ್ರಕಾರ ತುಂಬುವ ಕೆಲಸ ಮಾಡಬೇಕು ಎಂದು ಅವರು ಸರಕಾರಕ್ಕೆ ಮನವಿ ಮಾಡಿದರು. 

ಕೆಪಿಎಸ್ಸಿ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಎಸ್ಸಿ-ಎಸ್ಟಿ, ಒಬಿಸಿ ಸಮುದಾಯಕ್ಕೆ ಮೀಸಲಾತಿ ಮಿತಿಗೊಳಿಸಿ ಆದೇಶ ಹೊರಡಿಸಿರುವುದು ಸಂವಿಧಾನ ಪ್ರಕಾರವಾಗಿದೆಯೆ, ಇಲ್ಲವೆ ಎಂಬುದನ್ನು ಪರಿಶೀಲಿಸಬೇಕು. ಯಾವುದೆ ಒಂದು ಆದೇಶ ಸಂವಿಧಾನಕ್ಕೆ ಹಾಗೂ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದ್ದರೆ ಕೂಡಲೆ ಆದೇಶವನ್ನು ರದ್ದು ಪಡಿಸಬಹುದು. ಹೀಗಾಗಿ ರಾಜ್ಯ ಸರಕಾರ ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳ ಜತೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು. ಹಾಗೂ ಭಡ್ತಿ ಮೀಸಲಾತಿ ವಿಚಾರದಲ್ಲಿ ರಾಜ್ಯ ಸರಕಾರ ದೃಢ ನಿರ್ಧಾರ ತೆಗೆದುಕೊಳ್ಳಬೇಕು.

ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News