ಸ್ವಾರ್ಥ, ದ್ವೇಷ, ಅಸೂಯೆ ಕಡಿವಾಣಕ್ಕೆ ಸಾಹಿತ್ಯವೇ ಮದ್ದು: ಎಚ್.ಎನ್.ನಾಗಮೋಹನ್‌ ದಾಸ್

Update: 2018-11-18 16:38 GMT

ಬೆಂಗಳೂರು, ನ.18: ದೇಶದಲ್ಲಿ ಸ್ವಾರ್ಥ, ದ್ವೇಷ, ಅಸೂಯೆ ಹೆಚ್ಚಾಗುತ್ತಿದ್ದು, ಈ ಎಲ್ಲ ಕೆಡಕುಗಳನ್ನು ಹೋಗಲಾಡಿಸಲು ಸಾಹಿತ್ಯದ ಕೃಷಿ ಹೆಚ್ಚಾಗಬೇಕು. ಹಾಗೂ ಈ ಸಾಹಿತ್ಯವನ್ನು ಯುವ ಜನಾಂಗ ಓದಲು ಪ್ರೇರೇಪಿಸಬೇಕೆಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ ದಾಸ್ ಹೇಳಿದ್ದಾರೆ.

ರವಿವಾರ ರವೀಂದ್ರ ಕಲಾ ಕ್ಷೇತ್ರ ಆವರಣದ ಸಂಸ ಬಯಲು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಎಚ್.ಆರ್.ಸುಜಾತಾ ರಚಿಸಿರುವ ಕಾಡುಜೇಡ ಹಾಗೂ ಬಾತುಕೋಳಿ ಹೂ ಕವನ ಸಂಕಲನವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳ ಮನಸ್ಸನ್ನು ಅರಿಯಲು ನಾನು ರಾಜ್ಯದ ಹಲವು ಕಾಲೇಜುಗಳಿಗೆ ಭೇಟಿ ನೀಡಿ ಮಾತನಾಡಿಸಿದಾಗ ವಿದ್ಯಾರ್ಥಿಗಳು ಗೊಂದಲದ ಮನಸ್ಥಿತಿಯಲ್ಲಿ ಇರುವುದು ಕಂಡು ಬಂತು. ಈ ವಿದ್ಯಾರ್ಥಿಗಳನ್ನು ಹಾಗೂ ಈ ದೇಶದ ಯುವಕರನ್ನು ದಾರಿಗೆ ತರಲು ಸಾಹಿತ್ಯವೇ ಮದ್ದು ಎಂದು ನನ್ನ ಮನಸ್ಸಿಗೆ ಬಂದಿದೆ ಎಂದು ಹೇಳಿದರು.

ಡಾ.ಬಿ.ಆರ್.ಅಂಬೇಡ್ಕರ್, ಬಸವಣ್ಣ, ಮಹಾತ್ಮ ಗಾಂಧಿ ಅವರು ಈ ಸಮಾಜ ಸರಿ ದಾರಿಯಲ್ಲಿ ಹೋಗಲಿ ಎಂಬ ಕಾರಣಕ್ಕಾಗಿ ಹಲವು ರೀತಿಯಲ್ಲಿ ಹೋರಾಟಗಳನ್ನು ನಡೆಸಿದ್ದಾರೆ, ಕೃತಿಗಳನ್ನು ರಚಿಸಿದ್ದಾರೆ. ಆದರೆ, ಇಂದು ಈ ಸಮಾಜದಲ್ಲಿ ಯಾರಿಗೂ ಸ್ವಾತಂತ್ರವಿಲ್ಲವಾಗಿದ್ದು, ಭಯದ ರೀತಿಯಲ್ಲಿ ಬದುಕುತ್ತಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್, ಪತ್ರಕರ್ತ ಬಿ.ಎಂ.ಹನೀಫ್, ಪ್ರಕಾಶಕ ಪಲ್ಲವ ವೆಂಕಟೇಶ್, ಕವಿ ಕೆ.ವೈ.ನಾರಾಯಣಸ್ವಾಮಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News