ನ.19 ರಂದು ಸಚಿವ ಸಂಪುಟ ಸಭೆ

Update: 2018-11-18 16:44 GMT

ಬೆಂಗಳೂರು, ನ.18: ಮೈತ್ರಿ ಸರಕಾರದ ಸಂಪುಟ ಸಭೆ ಸೋಮವಾರ(ನ.19) ನಡೆಯಲಿದ್ದು, ಹಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆ. ಈರುಳ್ಳಿ ಬೆಲೆ ಕುಸಿತ, ಕಬ್ಬು ಬೆಲೆ ನಿಗದಿ, ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಬೆಳೆಗಾರರಿಗೆ ಬರಬೇಕಾದ ಬಾಕಿ ಪಾವತಿ ವಿಚಾರ, ಮಹದಾಯಿ ನೀರು ಹಂಚಿಕೆ ಕುರಿತು ಪುನರ್ ಪರಿಶೀಲನೆ ಅರ್ಜಿ ಸಲ್ಲಿಸುವುದು ಹಾಗೂ ಕೆಪಿಎಸ್ಸಿ ಮೀಸಲಾತಿ ಗೊಂದಲ ಸೇರಿದಂತೆ ಹಲವು ವಿಷಯಗಳು ಚರ್ಚೆಯಲ್ಲಿ ಇವೆ ಎಂದು ಮೂಲಗಳು ತಿಳಿಸಿವೆ.

ಡಿ.2ನೇ ವಾರದಿಂದ ಆರಂಭವಾಗಲಿರುವ ಚಳಿಗಾಲದ ಅಧಿವೇಶನ ದಿನಾಂಕ ನಿಗದಿ ಮಾಡುವ ಬಗ್ಗೆಯೂ ಚರ್ಚಿಸಲಾಗುತ್ತದೆ. ರಾಜ್ಯ ಮಟ್ಟದ ಎಲ್ಲಾ ನೀರಾವರಿ ಯೋಜನೆ ಹಾಗೂ ಜಲ ವಿವಾದಗಳ ಬಗ್ಗೆ ಸರಕಾರವು ಮುಂದಿನ ನಿಲುವು ತೆಗೆದುಕೊಳ್ಳುವ ಬಗ್ಗೆ ವಿಸ್ತೃತವಾಗಿ ಚರ್ಚಿಸಲು ಡಿ.6 ರಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಿರ್ಧರಿಸಿದ್ದಾರೆ.

ಮಹದಾಯಿ ನ್ಯಾಯಾಧೀಕರಣದ ಇತ್ತೀಚಿನ ಬೆಳವಣಿಗೆ ಕುರಿತು ವಿರೋಧ ಪಕ್ಷಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಈಗಾಗಲೇ ಸಭೆ ನಡೆಸಿದ್ದಾರೆ.

ಅದೇ ರೀತಿ, ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಕಬ್ಬು ಬೆಳೆಗಾರರು ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ಆಹೋರಾತ್ರಿ ಧರಣಿ ನಡೆಸುತ್ತಿದ್ದು, ಈ ಬಗ್ಗೆ, ಮುಖ್ಯಮಂತ್ರಿ ಕುಮಾರಸ್ವಾಮಿ ಮಂಗಳವಾರ ರೈತರ ಜೊತೆ ಚರ್ಚೆ ನಡೆಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News