ಕೃಷಿ ಮೇಳ 2018: ಸಾವಯವ ಉತ್ಪನ್ನಗಳಿಗೆ ಭಾರಿ ಬೇಡಿಕೆ

Update: 2018-11-18 16:47 GMT

ಬೆಂಗಳೂರು, ನ.18: ನಾಲ್ಕು ದಿನಗಳ ಕಾಲ ನಡೆದ ಕೃಷಿ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಸಾವಯವ ಉತ್ಪನ್ನಗಳಿಗೆ ಆದ್ಯತೆ ನೀಡಿದ್ದರಿಂದ ಭಾರಿ ಬೇಡಿಕೆ ನಿರ್ಮಾಣವಾಗಿತ್ತು.

ಜಿಕೆವಿಕೆ ಆವರಣದಲ್ಲಿ ಅಲ್ಲಿನ ಕೃಷಿ ಸಂಶೋಧನಾ ವಿದ್ಯಾರ್ಥಿಗಳು ಸಾವಯವ ಕೃಷಿ ಚಟುವಟಿಕೆಗಳನ್ನು ನಡೆಸುತ್ತಿದ್ದು, ಅವರ ಬೆಳೆದ ಉತ್ಪನ್ನಗಳನ್ನು ಅವರೇ ಮಾರಾಟ ಮಾಡುವ ಮೂಲಕ ಆದಾಯ ಗಳಿಸುತ್ತಿದ್ದಾರೆ. ಸಾವಯವ ಪದ್ಧತಿಯಲ್ಲಿ ಸಂಶೋಧನಾ ವಿದ್ಯಾರ್ಥಿಗಳು ಬೆಳೆಯುತ್ತಿರುವ ಕೃಷಿ ಉತ್ಪನ್ನಗಳಿಗೆ ಭಾರೀ ಬೇಡಿಕೆಯಿದ್ದು, ಪ್ರತಿ ಸೋಮವಾರ ಹಾಗೂ ಶುಕ್ರವಾರ ನಡೆಯುವ ಸಂತೆಯಲ್ಲಿ ಜಿಕೆವಿಕೆ ಸಿಬ್ಬಂದಿ ಹಾಗೂ ಸಮೀಪದ ಬಡಾವಣೆಗಳಿಂದ ನೂರಾರು ಜನ ಬಂದು ತರಕಾರಿಗಳನ್ನು ಖರೀದಿಸುತ್ತಾರೆ ಎಂದು ಮೇಳದಲ್ಲಿ ಮಳಿಗೆ ಸ್ಥಾಪಿಸಿದ್ದ ವಿದ್ಯಾರ್ಥಿಗಳು ಹೇಳಿದರು.

ಒಂದು ಎಕರೆ ಜಾಗದ 36 ವಿಭಾಗಗಳಲ್ಲಿ ಬೀನ್ಸ್, ಕ್ಯಾರಟ್, ನವಿಲುಕೋಲು, ಮೆಣಸಿನ ಕಾಯಿ ಸೇರಿದಂತೆ ಹಲವು ತರಕಾರಿ ಬೆಳೆಗಳನ್ನು ಬೆಳೆಯುತ್ತೇವೆ. ಅಲ್ಲದೆ, ವಿವಿಧ ವಿದಧ ಸೊಪ್ಪುಗಳನ್ನು ಬೆಳೆಯುತ್ತಿದ್ದೇವೆ ಎಂದು ವಿದ್ಯಾರ್ಥಿ ಬೀರೇಶ್ ಮಾಹಿತಿ ನೀಡಿದರು. ಇಲ್ಲಿ ಮಾರಾಟ ಮಾಡುತ್ತಿದ್ದ ಉತ್ಪನ್ನಗಳಿಗೆ ಭಾರಿ ಬೇಡಿಕೆ ಇತ್ತು. ಅಲ್ಲದೆ, ಹಲವಾರು ರೈತರು ಇವರಿಂದ ಮಾಹಿತಿಯನ್ನೂ ಪಡೆದುಕೊಳ್ಳುತ್ತಿದ್ದರು.

ಅಲ್ಲದೆ, ಮೇಳದಲ್ಲಿ ಬಹುತೇಕ ಸಾವಯವ ಮಳಿಗೆಗಳು ಹೆಚ್ಚು ಸ್ಥಾನವನ್ನು ಪಡೆದುಕೊಂಡಿದ್ದು, ಸಾವಿರಾರು ಜನರು ಆ ಮಳಿಗೆಗಳತ್ತ ಹೆಜ್ಜೆ ಹಾಕಿ ಮಾಹಿತಿ ಪಡೆಯುತ್ತಿದ್ದರು. ಜತೆಗೆ, ಸಾವಯವ ಉತ್ಪನ್ನಗಳ ಮಾರಾಟವೂ ಜೋರಾಗಿತ್ತು. ಸಾಮೆ, ಸಜ್ಜೆ, ಆರಕ, ಬರಗು, ಊದಲು, ರಾಗಿ, ನವಣೆ ಉತ್ಪನ್ನಗಳ ಮಾರಾಟ ಭರ್ಜರಿಯಾಗಿ ನಡೆದಿದೆ.

ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶದ ಜನರು ಆರೋಗ್ಯದ ದೃಷ್ಟಿಯಿಂದ ಸಾವಯವ ಆಹಾರ ಪದಾರ್ಥಗಳನ್ನು ಬಳಕೆ ಮಾಡುತ್ತಿರುವುದು ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಹುತೇಕ ನಗರ ಪ್ರದೇಶದ ಜನರು ಸಿರಿಧಾನ್ಯಗಳಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಖರೀದಿ ಮಾಡುತ್ತಿದ್ದರಿಂದ ಅಗತ್ಯ ಪ್ರಮಾಣದಲ್ಲಿ ಸಿರಿಧಾನ್ಯಗಳನ್ನು ಪೂರೈಕೆ ಮಾಡಲಾಗುತ್ತಿತ್ತು. ಇದರಿಂದಾಗಿ ಯಾವುದೇ ಗೊಂದಲವಿಲ್ಲದೆ ಮೇಳವು ಪೂರ್ತಿಗೊಂಡಿತು.

ರಾಜ್ಯ ಸರಕಾರ ಸಿರಿಧಾನ್ಯಗಳನ್ನು ಉತ್ತೇಜಿಸುವ ಉದ್ದೇಶದಿಂದ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ. ಅಲ್ಲದೆ, ರಾಸಾಯನಿಕ ಮುಕ್ತ ಆಹಾರಕ್ಕೂ ವಿವಿಧ ಕಾರ್ಯಯೋಜನೆ ಕೈಗೊಂಡಿದೆ.

ಐದು ಲಕ್ಷ ಸಾವಯವ ಕೃಷಿಕರು: ರಾಜ್ಯಾದ್ಯಂತ ನೈಸರ್ಗಿಕ ಕೃಷಿ ಪದ್ಧತಿ ಅನುಸರಿಸುತ್ತಿರುವ ರೈತರಿಗೆ ಸರಕಾರ ಹಾಗೂ ಕೃಷಿ ಇಲಾಖೆಗಳಿಂದ ವಿವಿಧ ಸೌಲಭ್ಯಗಳನ್ನು ಲಭ್ಯವಿದೆ. ರಾಜ್ಯದಲ್ಲಿ ಅಂದಾಜು ಐದು ಲಕ್ಷ ಸಾವಯವ ಕೃಷಿಕರು ಪರ್ಯಾಯ ಕೃಷಿ ಪದ್ಧತಿಯಲ್ಲಿ ಪಾಲ್ಗೊಂಡಿದ್ದು, ಎಲ್ಲರೂ ರಾಜ್ಯ ಸಾವಯವ ಪ್ರಮಾಣನ ಸಂಸ್ಥೆಯಿಂದ ಪ್ರಮಾಣ ಪತ್ರಗಳನ್ನೂ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News