ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ: ಮುಖ್ಯಮಂತ್ರಿ ನಿರ್ಧಾರ ಸರಿ; ಶಿಕ್ಷಣ ತಜ್ಞ ಡಾ.ನಿರಂಜನಾರಾಧ್ಯ

Update: 2018-11-18 16:53 GMT

ಬೆಂಗಳೂರು, ನ.18: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಕರ ವರ್ಗಾವಣೆ ತಕ್ಷಣದಿಂದಲೇ ಜಾರಿಗೆ ಬರುವಂತೆ ರದ್ದುಗೊಳಿಸಿ, ಮುಂದಿನ ಶೈಕ್ಷಣಿಕ ಸಾಲಿನ ಮಾರ್ಚ್-ಎಪ್ರಿಲ್ನಲ್ಲಿ ಪ್ರಾರಂಭಿಸಬೇಕೆಂದು ಸೂಚಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನಿರ್ಧಾರವನ್ನು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಸ್ವಾಗತಿಸಿದೆ.

ರವಿವಾರ ಈ ಕುರಿತು ವೇದಿಕೆಯ ಸಂಸ್ಥಾಪಕರೂ ಆಗಿರುವ ಶಿಕ್ಷಣ ತಜ್ಞ ಡಾ.ವಿ. ಪಿ.ನಿರಂಜನಾರಾಧ್ಯ ಮಾತನಾಡಿ, ಶಿಕ್ಷಣದ ಮೂಲಭೂತ ಹಕ್ಕುದಾರರಾದ ಮಕ್ಕಳ ಕಲಿಕೆ ಮತ್ತು ಸರಕಾರಿ ಶಾಲೆಗಳ ಬಲವರ್ಧನೆಯ ದೃಷ್ಟಿಯಿಂದ ಸರಕಾರದ ಈ ನಿರ್ಧಾರ ಸಕಾಲಿಕ. ಅಲ್ಲದೆ, ವರ್ಗಾವಣೆಗಳನ್ನು ತಕ್ಷಣ ನಿಲ್ಲಿಸುವಂತೆ ಆಗ್ರಹಿಸಿ ಆಗಸ್ಟ್ ತಿಂಗಳನಲ್ಲಿ ಮನವಿ ಪತ್ರವನ್ನು ಮುಖ್ಯಮಂತ್ರಿಗೆ ಸಲ್ಲಿಸಲಾಗಿತ್ತು ಎಂದರು.

ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಪ್ರಕಾರ, ಶೈಕ್ಷಣಿಕ ವರ್ಷ ಪ್ರಾರಂಭವಾದ ನಂತರ ನಡೆಯುವ ವರ್ಗಾವಣೆಗಳು ಕೇವಲ ಅವೈಜ್ಞಾನಿಕ ಮಾತ್ರವಲ್ಲ. ಸರಕಾರಿ ಶಾಲೆಗಳನ್ನು ದುರ್ಬಲಗೊಳಿಸುವ ಮೂಲಕ ಇಡೀ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬುಡಮೇಲು ಮಾಡುವ ಹುನ್ನಾರವಾಗಿದೆ ಎಂದು ಹೇಳಿದರು.

ಶಿಕ್ಷಣ ಇಲಾಖೆಯ ಯಾವುದೇ ವರ್ಗಾವಣೆಗಳು ಎಪ್ರಿಲ್-ಮೇ ತಿಂಗಳಿನಲ್ಲಿ ನಡೆಯಬೇಕು ಎಂದ ಅವರು, ಜೂನ್ ತಿಂಗಳಿನಿಂದ ಎಪ್ರಿಲ್ ವರೆಗೆ ಶೈಕ್ಷಣಿಕ ವರ್ಷದ ಅವಧಿಯಾಗಿದ್ದು, ಶಾಲಾ-ಕಾಲೇಜುಗಳು ಪೂರ್ಣ ಪ್ರಮಾಣದಲ್ಲಿ ಕಲಿಸುವ- ಬೋಧಿಸುವ ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಶಿಕ್ಷಣ ಹಕ್ಕು ಕಾಯ್ದೆಯ ಸೆಕ್ಷನ್ 24ರ ಅನ್ವಯ ಪ್ರಮುಖ ಜವಾಬ್ದಾರಿಯಾಗಿದೆ ಎಂದರು.

ಶೈಕ್ಷಣಿಕ ವರ್ಷದ ಅವಧಿಯು ಪ್ರಾರಂಭವಾದ ನಂತರ ಅಥವಾ ಶೈಕ್ಷಣಿಕ ವರ್ಷದ ಮಧ್ಯದಲ್ಲಿ ವರ್ಗಾವಣೆಗಳನ್ನು ಮಾಡುವುದರಿಂದ ಕಲಿಕಾ ವ್ಯವಸ್ಥೆ ಸಂಪೂರ್ಣವಾಗಿ ಬುಡಮೇಲಾಗಲಿದ್ದು, ಸರಕಾರಿ ಶಾಲೆಗಳ ಬಗ್ಗೆ ಪಾಲಕರಿಗೆ ಇರುವ ಕನಿಷ್ಠ ನಂಬಿಕೆಯೂ ಕಳೆದು ಹೋಗುವ ಸಾಧ್ಯತೆ ಹೆಚ್ಚಾಗುತ್ತದೆ. ಇದರಿಂದ, ಈಗ ಸರಕಾರಿ ಶಾಲೆಯಲ್ಲಿ ಓದಿಸುತ್ತಿರುವ ಪಾಲಕರೂ ಕೂಡ ತಮ್ಮ ಮಕ್ಕಳನ್ನು ಈ ಶಾಲೆಯಿಂದ ಹಿಂತೆಗೆಯುವ ಸಂಭವನೀಯತೆ ಹೆಚ್ಚುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

‘ಪ್ರತಿಭಟಿಸುವರ ವಿರುದ್ಧ ಕಾನೂನು ಕ್ರಮ’

ವರ್ಗಾವಣೆ ಪ್ರಕ್ರಿಯೆ ಸಂಬಂಧ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆದೇಶ ಧಿಕ್ಕರಿಸಿ, ಪ್ರತಿಭಟನೆಯ ಬೆದರಿಕೆ ಒಡ್ಡುತ್ತಿರುವ ಶಿಕ್ಷಕರ ವಿರುಧ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು.

-ಡಾ.ವಿ.ಪಿ.ನಿರಂಜನಾರಾಧ್ಯ, ಸಂಸ್ಥಾಪಕ, ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News