ಕನ್ನಡ ಉಳಿಸುವ ಕಾಯಕ ಆಗಬೇಕು: ಡಾ.ಎಲ್.ಹನುಮಂತಯ್ಯ

Update: 2018-11-18 16:55 GMT

ಹೊಸದಿಲ್ಲಿ/ಬೆಂಗಳೂರು, ನ.18: ಹೊರ ರಾಜ್ಯಗಳಲ್ಲೂ ಕನ್ನಡ ಭಾಷಾಭಿಮಾನ ಬೆಳೆಸಬೇಕು.ಈ ನಿಟ್ಟಿನಲ್ಲಿ ಎಲ್ಲೆಡೆ ಸಾಂಸ್ಕೃತಿಕ, ಸಾಹಿತ್ಯ ಕಾರ್ಯಕ್ರಮಗಳನ್ನು ಆಯೋಜಿಸುವ ಕಾಯಕ ನಡೆಯಬೇಕು ಎಂದು ರಾಜ್ಯಸಭಾ ಸದಸ್ಯ ಡಾ.ಎಲ್. ಹನುಮಂತಯ್ಯ ಸಲಹೆ ಮಾಡಿದರು.

ಕರ್ನಾಟಕ ವಾರ್ತಾ ಕೇಂದ್ರ, ನೋಯಿಡಾ ಕನ್ನಡ ಕೂಟ ಹಾಗೂ ಜೆ.ಎಸ್.ಎಸ್ ತಾಂತ್ರಿಕ ಮಹಾವಿದ್ಯಾಲಯ ಸಹಯೋಗದೊಂದಿಗೆ ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಆಯೋಜಿಸಿದ್ದ, ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ನಾಡಿನ ಕವಿಗಳು, ಸಂಶೋಧಕರು, ಸಾಮಾಜಿಕ ಚಿಂತಕರು ತಮ್ಮದೆಯಾದ ರೀತಿಯಲ್ಲಿ ಕನ್ನಡ ಭಾಷೆ ಮತ್ತು ನಾಡನ್ನು ಶ್ರೀಮಂತಗೊಳಿಸಿದ್ದಾರೆ. ಅದನ್ನು ಉಳಿಸಿಕೊಂಡು ಮುನ್ನೆಡೆಸುವ ಜವಾಬ್ದಾರಿ ನಮ್ಮೆಲರದ್ದು ಎಂದು ನುಡಿದರು.

ಜೆಎನ್‌ಯು ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥ ಡಾ.ಪುರುಷೋತ್ತಮ ಬಿಳಿಮಲೆ ಮಾತನಾಡಿ, ಕನ್ನಡದಲ್ಲಿ ಸೊಗಸಾದ ಶಬ್ದ ಪದಪುಂಜಗಳಿವೆ. ಆದರೆ ಇತ್ತೀಚಿಗೆ ಕನ್ನಡದ ಟಿವಿ ಮಾಧ್ಯಮಗಳು ಇಂಗ್ಲಿಷ್ ಶಬ್ದಗಳನ್ನು ಹೆಚ್ಚಾಗಿ ಬಳಸುವ ಮೂಲಕ ಕನ್ನಡ ಕೊಲ್ಲುವ ಕೆಲಸ ಮಾಡುತ್ತಿವೆ ಎಂದು ವಿಷಾದಿಸಿದರು.

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಮಂತ್ರಾಲಯದ ಜಂಟಿ ಕಾರ್ಯದರ್ಶಿ ಗಿರೀಶ ಹೊಸೂರ ಮಾತನಾಡಿ, ಕನ್ನಡ ಅತ್ಯಂತ ಪುರಾತನ ಭಾಷೆ. ನಮ್ಮ ಭಾಷೆಗೆ ತನ್ನದೆಯಾದ ಸ್ವಂತಿಕೆಯಿದೆ. ಕನ್ನಡ ಸಮೃದ್ಧ ಭಾಷೆ, ಭಾಷೆಯನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ಕಂಕಣಬದ್ಧರಾಗೋಣ ಎಂದು ಕರೆ ನೀಡಿದರು. ಕರ್ನಾಟಕ ವಾರ್ತಾ ಕೇಂದ್ರದ ವಾರ್ತಾಧಿಕಾರಿ ಡಾ.ಎಲ್.ಪಿ.ಗಿರೀಶ ಮಾತಮಾಡಿ, ರಾಜ್ಯೋತ್ಸವದ ಹೆಸರಿನಲ್ಲಿ ನಾಡಿನ ಸಂಸ್ಕೃತಿ ಪರಂಪರೆ, ಇತಿಹಾಸ, ಕಲೆ, ಜಾನಪದ ವೈವಿಧ್ಯತೆಯನ್ನು ಹೊರನಾಡಿನ ಕನ್ನಡಿಗರಿಗೆ ಹಾಗೂ ಯುವ ಪೀಳಿಗೆಗೆ ತಿಳಿಸಿಕೊಡಬೇಕಾಗಿದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಜೆಎಸ್‌ಎಸ್ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಜಿ.ಬಿ.ಪಾಟೀಲ ಸೇರಿದಂತೆ ಮತ್ತಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News