ಕಡತ ವಿಲೇವಾರಿ ಸಪ್ತಾಹಕ್ಕೆ ಯಶಸ್ವಿ ತೆರೆ: ಸಚಿವ ದೇಶಪಾಂಡೆ

Update: 2018-11-18 17:02 GMT

ಬೆಂಗಳೂರು, ನ.18: ನೆನೆಗುದಿಗೆ ಬಿದ್ದಿದ್ದ ಕಡತಗಳನ್ನು ವಿಲೇವಾರಿ ಮಾಡಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕಂದಾಯ ಇಲಾಖೆಯಲ್ಲಿ ಇದೇ ತಿಂಗಳ 12ರಿಂದ ಹಮ್ಮಿಕೊಂಡಿದ್ದ ‘ಕಡತ ಲೇವಾರಿ ಸಪ್ತಾಹ’ವು ಯಶಸ್ವಿಯಾಗಿ ಮುಗಿದಿದೆ ಎಂದು ಕಂದಾಯ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಆರ್.ದೇಶಪಾಂಡೆ ತಿಳಿಸಿದ್ದಾರೆ.

ರವಿವಾರ ಕಡತ ವಿಲೇವಾರಿ ಸಪ್ತಾಹಕ್ಕೆ ಕೊನೆಯ ದಿನವಾಗಿತ್ತು. ಹೀಗಾಗಿ, ಸಾರ್ವತ್ರಿಕ ರಜಾ ದಿನವಾದ ರವಿವಾರವೂ ಸಹ ರಾಜ್ಯಾದ್ಯಂತ ತಮ್ಮ ಕಚೇರಿಯೂ ಸೇರಿದಂತೆ ಎಲ್ಲ ಪ್ರಾದೇಶಿಕ ಆಯುಕ್ತರ ಕಚೇರಿಗಳು, ಜಿಲ್ಲಾಧಿಕಾರಿಗಳ ಕಚೇರಿಗಳು, ತಾಲ್ಲೂಕು ಕಚೇರಿಗಳೂ ಸೇರಿದಂತೆ ಇತರೆ ಎಲ್ಲ ಕಂದಾಯ ಇಲಾಖೆಯ ಕ್ಷೇತ್ರ ಮಟ್ಟದ ಕಚೇರಿಗಳು ಎಂದಿನಂತೆ ಕರ್ತವ್ಯ ನಿರ್ವಹಿಸಿದವು. ಸಪ್ತಾಹದ ಹಿನ್ನೆಲೆಯಲ್ಲಿ, ಕಂದಾಯ ಇಲಾಖೆಗೆ ಅನ್ವಯವಾಗುವಂತೆ ರವಿವಾರವನ್ನು ಕರ್ತವ್ಯದ ದಿನವನ್ನಾಗಿ ಮಾಡಲಾಗಿತ್ತು ಎಂದು ಹೇಳಿದ್ದಾರೆ.

ಸರಕಾರದ ಎಲ್ಲ ಇಲಾಖೆಗಳಿಗೂ ಆಧಾರ ಸ್ತಂಭದಂತಿರುವ ಕಂದಾಯ ಇಲಾಖೆಯು ಜನ ಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಬೇಕೆನ್ನುವುದು ಸರಕಾರದ ಆಶಯವಾಗಿದೆ. ಈ ನಿಟ್ಟಿನಲ್ಲಿ ಕಡತ ವಿಲೇವಾರಿ ಸಪ್ತಾಹ ಒಂದು ಹೆಜ್ಜೆಯಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಇನ್ನಷ್ಟು ರಚನಾತ್ಮಕ ಮತ್ತು ಜನಪರ ಕ್ರಮಗಳನ್ನು ವಿಸ್ತೃತವಾಗಿ ಕೈಗೊಳ್ಳಲಾಗುವುದು ಎಂದರು.

ತಂತ್ರಜ್ಞಾನವನ್ನು ಆಧರಿಸಿದ 21ನೇ ಶತಮಾನದಲ್ಲಿ ಕಂದಾಯ ಇಲಾಖೆಯ ಚಟುವಟಿಕೆಗಳು ತ್ವರಿತವಾಗಿ ಮತ್ತು ಪಾರದರ್ಶಕವಾಗಿ ನಡೆಯಬೇಕಾಗಿದೆ. ಜತೆಗೆ, ಕಂದಾಯ ಇಲಾಖೆಯು ತನ್ನ ಮೇಲಿರುವ ಉತ್ತರದಾಯಿತ್ವವನ್ನು ಗಂಭೀರವಾಗಿ ಪರಿಗಣಿಸಿದೆ. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕಡತಗಳು ಕ್ಷಿಪ್ರವಾಗಿ ವಿಲೇವಾರಿಗೊಳ್ಳಬೇಕು ಎನ್ನುವುದೇ ಸರಕಾರದ ಸಂಕಲ್ಪವಾಗಿದೆ ಎಂದು ದೇಶಪಾಂಡೆ ವಿವರಿಸಿದ್ದಾರೆ.

ಸರಕಾರದ ಸೂಚನೆಯಂತೆ ಸಪ್ತಾಹ ಆರಂಭವಾಗುವ ಮೊದಲು ತಮ್ಮ ವ್ಯಾಪ್ತಿಯಲ್ಲಿ ಬಾಕಿ ಇದ್ದ ಕಡತಗಳೆಷ್ಟು ಸಪ್ತಾಹದ ಅವಧಿಯಲ್ಲಿ ಎಷ್ಟು ಕಡತಗಳನ್ನು ಇತ್ಯರ್ಥಗೊಳಿಸಲಾಗಿದೆ ಮತ್ತು ಸಪ್ತಾಹದ ಬಳಿಕ ತಮ್ಮಲ್ಲಿ ಎಷ್ಟು ಕಡತಗಳು ಬಾಕಿ ಉಳಿದಿವೆ ಎನ್ನುವ ವರದಿಯನ್ನು ಎಲ್ಲ ಅಧಿಕಾರಿಗಳೂ ನೀಡುತ್ತಿದ್ದಾರೆ. ಇವುಗಳನ್ನು ಕ್ರೋಡೀಕರಿಸಿ, ಬಾಕಿ ಉಳಿದಿರುವ ಕಡತಗಳ ಇತ್ಯರ್ಥಕ್ಕೆ ಮುಂದಿನ ಮಾರ್ಗೋಪಾಯಗಳನ್ನು ಗಂಭೀರವಾಗಿ ಚಿಂತಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News