ನೈಸರ್ಗಿಕ ಗ್ರಾಮಗಳ ನಿರ್ಮಾಣಕ್ಕೆ ಒತ್ತು: ಸಚಿವ ಶಿವಾನಂದ ಪಾಟೀಲ್

Update: 2018-11-18 17:44 GMT

ಬೆಂಗಳೂರು, ನ.18: ಆಧುನಿಕತೆಯ ಒಡೆತಕ್ಕೆ ಸಿಕ್ಕಿ ಹಸಿರನ್ನು ಕಳೆದುಕೊಂಡಿರುವ ಹಳ್ಳಿಗಳನ್ನು ನೈಸರ್ಗಿಕ ಗ್ರಾಮಗಳನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಆರೋಗ್ಯ ಸಚಿವ ಶಿವಾನಂದ ಎಸ್.ಪಾಟೀಲ್ ತಿಳಿಸಿದರು.

ಇಂಡಿಯಾ ನ್ಯಾಚುರೋಪತಿ ಹಾಗೂ ಯೋಗ ಗ್ರಾಜುಯೇಟ್ಸ್ ಮೆಡಿಕಲ್ ಅಸೋಸಿಯೇಷನ್ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಿದ್ದ ಮೊದಲನೆ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರಾಯೋಗಿಕವಾಗಿ ಒಂದು ಗ್ರಾಮವನ್ನು ದತ್ತು ಪಡೆದುಕೊಂಡು, ಆ ಗ್ರಾಮವನ್ನು ಸಂಪೂರ್ಣವಾಗಿ ಹಸಿರುಮಯಗೊಳಿಸುವ ಯೋಜನೆ ಸಿದ್ಧಗೊಂಡಿದೆ ಎಂದು ತಿಳಿಸಿದರು.

ನಮ್ಮ ಸುತ್ತಮುತ್ತಲ ಪರಿಸರವನ್ನು ಶುದ್ಧವಾಗಿಟ್ಟುಕೊಂಡರೆ, ಯಾವ ರೋಗವು ಬರುವುದಿಲ್ಲ. ನೀರು, ಗಾಳಿ, ಮಣ್ಣನ್ನು ಕಲುಷಿತ ಮಾಡಿದ ಪರಿಣಾಮದಿಂದಾಗಿ ರೋಗಗಳು ಕಾಣಿಸಿಕೊಳ್ಳುತ್ತಿವೆ. ಹೀಗಾಗಿ ಕಾಡನ್ನು ಸಂರಕ್ಷಿಸುವ ಮೂಲಕ ಶುದ್ಧ ಗಾಳಿ, ನೀರನ್ನು ಪಡೆದು ಆರೋಗ್ಯವನ್ನು ಸುಧಾರಿಸಿಕೊಳ್ಳೋಣವೆಂದು ಅವರು ಹೇಳಿದರು.

ಎಸ್.ವ್ಯಾಸ ವಿಶ್ವವಿದ್ಯಾಲಯದ ಕುಲಪತಿ ಡಾ.ಎಚ್.ಆರ್.ನಾಗೇಂದ್ರ ಮಾತನಾಡಿ, ಸಾವಿರಾರು ವರ್ಷಗಳ ಹಿಂದೆಯೆ ಭಾರತ ಆರೋಗ್ಯ ಕ್ಷೇತ್ರದಲ್ಲಿ ವಿಶ್ವಕ್ಕೆ ಮಾದರಿಯಾಗಿತ್ತು. ನಮ್ಮ ಋಷಿ ಮುನಿಗಳು ಪ್ರಕೃತಿ ಚಿಕಿತ್ಸೆಯ ಮೂಲಕ ಜನತೆಗೆ ಎಲ್ಲ ರೀತಿಯಲ್ಲಿ ರೋಗಕ್ಕೆ ಚಿಕಿತ್ಸೆ ನೀಡುತ್ತಿದ್ದರು. ಆದರೆ, ಇವತ್ತು ನಮ್ಮ ಚಿಕಿತ್ಸಾ ಪದ್ಧತಿಯನ್ನು ಮರೆತು, ಪಾಶ್ಚಿಮಾತ್ಯ ಚಿಕಿತ್ಸಾ ಪದ್ಧತಿಗೆ ಮಾರು ಹೋಗಿದ್ದೇವೆ ಎಂದು ವಿಷಾದಿಸಿದರು.

ರಾಜೀವ್‌ಗಾಂಧಿ ವಿಶ್ವವಿದ್ಯಾಲಯದ ಉಪಕುಲಪತಿ ಮಾತನಾಡಿ, ಪ್ರಕೃತಿ ಚಿಕಿತ್ಸೆಯನ್ನು ಈ ಕಾಲಕ್ಕೆ ಸೂಕ್ತವಾಗುವಂತೆ ಪರಿವರ್ತಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಪ್ರಕೃತಿ ಚಿಕಿತ್ಸೆಗೆ ಸಂಬಂಧಿಸಿದಂತೆ ಮತ್ತಷ್ಟು ಸಂಶೋಧನೆಗಳಾಗಲಿ ಎಂದು ಆಶಿಸಿದರು. ಈ ವೇಳೆ ವಿಶ್ವ ನ್ಯಾಚುರೋಪತಿ ಫೆಡರೇಷನ್ ಕಾರ್ಯದರ್ಶಿ ಪ್ರೊ.ಜಾನ್ ವಾರ್ಡ್ಲೆ, ಆಯುಷ್ ಮಂತ್ರಾಲಯದ ಆಯುಕ್ತೆ ಮೀನಾಕ್ಷಿ ನೇಗಿ, ಗಾಂಧಿ ಭವನದ ಅಧ್ಯಕ್ಷ ವೂಡೇ ಪಿ.ಕೃಷ್ಣ ಮತ್ತಿತರರಿದ್ದರು.

ಬೇಡಿಕೆಗಳು

-ತಾಲೂಕು ಆಸ್ಪತ್ರೆಗಳಲ್ಲಿ ಪ್ರಕೃತಿ ಚಿಕಿತ್ಸಾ ಘಟಕಗಳನ್ನು ತೆರೆಯಬೇಕು.

-ಜಯದೇವ ಆಸ್ಪತ್ರೆಯ ಮಾದರಿಯಲ್ಲಿ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯನ್ನು ತೆರೆಯಬೇಕು.

-ಆಯುಷ್ ವೈದ್ಯರು ಹುದ್ದೆಗಳನ್ನು ಹೆಚ್ಚಿಸಬೇಕು.

ಪ್ರಕೃತಿ ಚಿಕಿತ್ಸಾಲಯಗಳ ಸ್ಥಾಪನೆ

ರಾಜ್ಯದಲ್ಲಿ ಆರ್ಯುವೇದ ಆಸ್ಪತ್ರೆಗಳ ಮಾದರಿಯಲ್ಲಿ ಪ್ರಕೃತಿ ಚಿಕಿತ್ಸಾಲಯಗಳನ್ನು ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಮುಂದಿನ ಬಜೆಟ್‌ನಲ್ಲಿ ಆಯುಷ್ ಇಲಾಖೆಗೆ ವಿಶೇಷ ಅನುದಾನವನ್ನು ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.

-ಶಿವಾನಂದ ಎಸ್.ಪಾಟೀಲ್ ಆರೋಗ್ಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News