ಕಡಿಮೆ ನೀರಾವರಿಯಲ್ಲೂ ಭತ್ತದ ಫಸಲು: ಶೇ.60ರಷ್ಟು ನೀರು ಉಳಿತಾಯ, ಅಧಿಕ ಪೌಷ್ಟಿಕಾಂಶ

Update: 2018-11-18 17:51 GMT

ಬೆಂಗಳೂರು, ನ. 18: ಒಣಭೂಮಿಯಲ್ಲಿ ಬೆಳೆಯುವ ಏರೋಬಿಕ್ಸ್ ವಿಧಾನದ ಎರಡು ಭತ್ತದ ತಳಿಗಳನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಕೃಷಿ ಮೇಳದಲ್ಲಿ ಪರಿಚಯಿಸಿದೆ. ಇದರಿಂದ ಕಡಿಮೆ ನೀರನ್ನು ಬಳಸಿ ಭತ್ತವನ್ನು ಬೆಳೆಯಬಹುದು ಎಂಬ ವಿಚಾರವನ್ನು ತಿಳಿದ ಯುವ ರೈತರು ಪ್ರಯೋಗಕ್ಕೆ ಮುಂದಾಗಿದ್ದಾರೆ.

ನೀರಾವರಿ ಹಾಗೂ ಅಣೆಕಟ್ಟೆ ಭಾಗದ ಜಲಾನಯನ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿರುವ ಭತ್ತದ ಬೆಳೆಯನ್ನು ಕಡಿಮೆ ಮಳೆ ಬೀಳುವ ಒಣಪ್ರದೇಶದಲ್ಲೂ ಯಶಸ್ವಿಯಾಗಿ ಬೆಳೆಯಬಹುದಾಗಿದೆ. ಎಂಎಎಸ್ 9461 ಹಾಗೂ ಎಂಎಎಸ್ 26 ಹೆಸರಿನ ತಳಿಗಳ ಪ್ರಾತ್ಯಕ್ಷಿಕೆ ನೀಡಲಾಗುತ್ತಿದೆ. ನೀರಾವರಿಗೆ ಅವಕಾಶ ಕಡಿಮೆ ಇರುವ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರದಂತಹ ಜಿಲ್ಲೆಗಳಿಗೆ ಇದು ಸಹಕಾರಿಯಾಗುತ್ತದೆ.

ಸಾಂಪ್ರದಾಯಿಕ ಕೆಸರುಗದ್ದೆ ಮಾದರಿಯಲ್ಲಿ ಭತ್ತ ಬೆಳೆಯುವ ವಿಧಾನಕ್ಕೆ ಹೋಲಿಸಿದರೆ ಏರೋಬಿಕ್ಸ್ ವಿಧಾನದಲ್ಲಿ ಶೇ.60ರಷ್ಟು ನೀರು ಉಳಿತಾಯವಾಗುತ್ತದೆ. ಸಾಂಪ್ರದಾಯಿಕ ವಿಧಾನದಲ್ಲಿ ಎಕರೆಗೆ 30 ಕೆ.ಜಿ ಬಿತ್ತನೆ ಭತ್ತ ಅಗತ್ಯವಿದ್ದರೆ, ಇಲ್ಲಿ ಕೇವಲ 3 ಕೆ.ಜಿ ಸಾಕು. ಒಂದು ಅಡಿ ಮತ್ತು ಅರ್ಧ ಅಡಿ ಅಂತರದಲ್ಲಿ ನಾಟಿ ಮಾಡಬೇಕು. ಸಸಿಯಿಂದ ಸಸಿಯ ನಡುವೆ ಅಂತರ ಹೆಚ್ಚಿರುವ ಕಾರಣ ಗಾಳಿ ಚೆನ್ನಾಗಿ ಸುಳಿದಾಡುತ್ತದೆ. ಇದಕ್ಕಿರುವ ಒಂದೇ ತೊಂದರೆ ಎಂದರೆ ಕಳೆ. ಎಕರೆಗೆ 20ರಿಂದ 22 ಕ್ವಿಂಟಾಲ್ ಇಳುವರಿ ಪಡೆಯಬಹುದು. ರಾಗಿ, ಜೋಳ ಅಥವಾ ತರಕಾರಿ ಬೇಳೆಯುವ ರೀತಿಯಲ್ಲೇ ಇವನ್ನು ಬೆಳೆಯಬಹುದು.

ಅಧಿಕ ಪೌಷ್ಟಿಕಾಂಶ:

ಸತು, ಕಬ್ಬಿಣ, ಪ್ರೋಟಿನ್ ಅಂಶಗಳು ತರಕಾರಿ, ಸೊಪ್ಪಿನ ಮೂಲಕ ಸಿಗುತ್ತವೆ. ಇನ್ನು ಮುಂದೆ ಅಕ್ಕಿಯಲ್ಲೇ ಇವೆಲ್ಲವೂ ದೊರೆಯಲಿವೆ. ಪೌಷ್ಟಿಕ್1 (ಸತು), ಪೌಷ್ಟಿಕ್ 7 (ಕಬ್ಬಿಣ) ಹಾಗೂ ಪೌಷ್ಟಿಕ್ 9 (ಪ್ರೋಟಿನ್) ಹೆಸರಿನ ಮೂರು ಭತ್ತದ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ದ್ವಿದಳ ಧಾನ್ಯಗಳ ಫಸಲು ಕಡಿಮೆ ಇರುವ ಪ್ರದೇಶಗಳು ಈ ಭತ್ತವನ್ನು ಬೆಳೆಯಬಹುದು. ಪೌಷ್ಟಿಕಾಂಶ ಕೊರತೆಯಿರುವ ಮಕ್ಕಳಿಗೆ ಈ ಅಕ್ಕಿಯಿಂದ ಮಾಡಿದ ಅನ್ನ ಉಪಯುಕ್ತ. ಸಾಂಪ್ರದಾಯಿಕ ಕೆಸರುಗದ್ದೆ ಹಾಗೂ ಏರೋಬಿಕ್ಸ್ ಎರಡೂ ಮಾದರಿಗಳಲ್ಲಿ ಬೆಳೆಯಬಹುದಾಗಿದೆ.

ಹನಿ ನೀರಾವರಿ ಬಳಕೆ: ಹನಿ ನೀರಾವರಿ ವಿಧಾನದಲ್ಲಿಯೂ ಭತ್ತ ಬೆಳೆಯಬಹುದು. ಹನಿ ನೀರಾವರಿ ವಿಧಾನದಲ್ಲಿ ಪೈರು ನಾಟಿ ಮಾಡುವಾಗ ಪ್ರತಿ ಸಾಲಿನ ನಡುವೆ 25-30 ಸೆಂ.ಮೀ ಅಂತರ ಕಾಯ್ದುಕೊಳ್ಳಬೇಕು. ನಂತರ ಡ್ರಿಪ್ ಪೈಪುಗಳ ಮೂಲಕ ಪೈರಿನ ಬೇರಿಗೆ ನೀರು ಹೋಗುವಂತೆ ವ್ಯವಸ್ಥೆ ಮಾಡಬೇಕಾಗುತ್ತದೆ. ಇದರಿಂದ ಶೇ.20ರಷ್ಟು ಹೆಚ್ಚುವರಿ ಇಳುವರಿ ಪಡೆಯುವ ಜತೆಗೆ, ಶೇ.60ರಷ್ಟು ನೀರು ಉಳಿತಾಯವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News