ಬೆಂಗಳೂರು: ವಿವೇಕಾನಂದ ಉದ್ಯಾನವನ ಲೋಕಾರ್ಪಣೆ

Update: 2018-11-18 18:00 GMT

ಬೆಂಗಳೂರು, ನ.18: ಬಿಬಿಎಂಪಿ ವ್ಯಾಪ್ತಿಯ ನಾಗಪುರ ವಾರ್ಡ್‌ನಲ್ಲಿ ನವೀಕೃತಗೊಂಡಿರುವ ಸ್ವಾಮಿ ವಿವೇಕಾನಂದ ಉದ್ಯಾನವನವನ್ನು ಕೇಂದ್ರ ಸಚಿವ ಸದಾನಂದಗೌಡ ರವಿವಾರ ಲೋಕಾರ್ಪಣೆ ಮಾಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾರದರ್ಶಕ ಆಡಳಿತ ಇದ್ದರೆ ಅಭಿವೃದ್ಧಿ ಕೆಲಸಗಳು ವೇಗವಾಗಿ ನಡೆಯುತ್ತದೆ. ಜೊತೆ ಜೊತೆಗೆ, ರಾಜಕಾರಣ ಇರಬೇಕು. ಆದರೆ, ಅಭಿವೃದ್ಧಿ ಕೆಲಸಗಳಿಗೆ ಅದು ಅಡ್ಡಿಯಾಗಬಾರದು ಎಂದರು.

ಶಾಸಕ ಗೋಪಾಲಯ್ಯ ಮಾತನಾಡಿ, ಸ್ವಾಮಿ ವಿವೇಕಾನಂದ ಉದ್ಯಾನವನಕ್ಕೆ ಬರುವ ಸಾರ್ವಜನಿಕರು ಸ್ವಚ್ಛತೆ ಮತ್ತು ಸುರಕ್ಷತೆಗೆ ಹೆಚ್ಚಿನ ಒತ್ತು ಕೊಡಬೇಕು. 3 ಕೋಟಿ ರೂ. ವೆಚ್ಚದಲ್ಲಿ ಉದ್ಯಾನವನ ನವೀಕರಣಗೊಳಿಸಲಾಗಿದೆ. ಸಾರ್ವಜನಿಕರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ಲೋಕಾರ್ಪಣೆ: ಸ್ವಾಮಿ ವಿವೇಕಾನಂದ ಉದ್ಯಾನವನದ ನೂತನ ಪಾದಚಾರಿ ಮಾರ್ಗ, ಶಾಂತಿ ತಾಣ, ಹಸಿ ಕಸದಿಂದ ಗೊಬ್ಬರ ತಯಾರಿಕಾ ಘಟಕ ಮತ್ತು ಒಳಾಂಗಣ ಕ್ರೀಡಾ ಸಲಕರಣೆಗಳನ್ನು ಲೋಕಾರ್ಪಣೆಗೊಳಿಸಿದರು.

ಸುಮಾರು 10 ಸಾವಿರ ಚದರ ಅಡಿ ವಿಸ್ತೀರ್ಣ ಹೊಂದಿರುವ ಈ ಉದ್ಯಾನವನಕ್ಕೆ ಆಧುನಿಕ ಸ್ಪರ್ಶ ನೀಡಲಾಗಿದ್ದು, ಸುಸಜ್ಜಿತ ಸಲಕರಣೆಗಳನ್ನು ಅಳವಡಿಸಲಾಗಿದೆ. ದಿನದ 24 ಗಂಟೆಯೂ ಭದ್ರತಾ ವ್ಯವಸ್ಥೆ ಹೊಂದಿರುವ ಈ ಪಾರ್ಕ್‌ನಲ್ಲಿ ನೆಲಹಾಸು, ಪಾರ್ಕಿನ ಸುತ್ತಲೂ ಸಸಿಗಳು ಗಮನ ಸೆಳೆಯುತ್ತಿವೆ.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ನೆ.ಲ.ನರೇಂದ್ರಬಾಬು, ಮಾಜಿ ಉಪಮಹಾಪೌರ ಎಸ್.ಹರೀಶ್, ಹೇಮಲತಾ ಗೋಪಾಲಯ್ಯ, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಗಂಗಮ್ಮ ರಾಜಣ್ಣ, ನಾಗಪುರ ವಾರ್ಡ್ ಬಿಬಿಎಂಪಿ ಸದಸ್ಯ ಭದ್ರೇಗೌಡರು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News