ಕ್ರಿಯಾಶೀಲತೆಗೆ ಸ್ಪರ್ಧಾ ಚಟುವಟಿಕೆ ಅಗತ್ಯ: ಟಿ.ವೆಂಕಟಲಕ್ಷ್ಮೀ

Update: 2018-11-18 18:03 GMT

ಬೆಂಗಳೂರು, ನ.18: ಮಕ್ಕಳ ಮನಸ್ಸು ಕ್ರಿಯಾಶೀಲತೆಯನ್ನು ಪಡೆಯಲು ವಿವಿಧ ರೀತಿಯ ಸ್ಪರ್ಧಾ ಚಟುವಟಿಕೆಗಳು ಅಗತ್ಯ ಎಂದು ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ಟಿ.ವೆಂಕಟಲಕ್ಷ್ಮೀ ಹೇಳಿದರು.

ನಗರದ ಆಭಯಾಶ್ರಮದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ, ರಸಪ್ರಶ್ನೆ ಸ್ಪರ್ಧೆ ಹಾಗೂ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮಕ್ಕಳು ಜ್ಞಾನ ಸಂಪತ್ತನ್ನು ಪಠ್ಯದಿಂದ ಮಾತ್ರ ಪಡೆಯಲು ಸಾಧ್ಯವಿಲ್ಲ. ವಿದ್ಯಾ ಸಂಸ್ಥೆಗಳಲ್ಲಿ ನಡೆಯುವ ವಿವಿಧ ರೀತಿಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ವಿಚಾರಗಳನ್ನು ತಿಳಿದುಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ರಸಪ್ರಶ್ನೆ ಸ್ಪರ್ಧೆ ಆಯೋಜಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಆಧುನಿಕ ಯುಗದಲ್ಲಿ ಪ್ರಾಥಮಿಕ ಹಂತದಿಂದ ಮಕ್ಕಳಿಗೆ ರಸಪ್ರಶ್ನೆ, ಕ್ವಿಜ್, ವಿಜ್ಞಾನ ಮೇಳಗಳು, ಪ್ರತಿಭಾ ಕಾರಂಜಿಗಳಂತಹ ಕಾರ್ಯಕ್ರಮಗಳು ಅವಶ್ಯಕವಾಗಿವೆ. ಇಂತಹ ಕಾರ್ಯಕ್ರಮಗಳು ಇನ್ನಷ್ಟು ನಡೆಯಲಿ ಎಂದು ಹೇಳಿದರು.

ರಸ ಪ್ರಶ್ನೆ ಕಾರ್ಯಕ್ರಮದಲ್ಲಿ 11 ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಮಂಡಳಿ ಕಾರ್ಯದರ್ಶಿ ನಿರ್ಮಲಾ, ಚಾರ್ಲ್ಸ್, ಸುಧಾ ರೆಡ್ಡಿ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News