ಕಬ್ಬು ಬೆಳೆಗಾರರ ಹಿತ ಕಾಯಲು ಸರಕಾರ ಬದ್ಧ: ಕುಮಾರಸ್ವಾಮಿ

Update: 2018-11-19 12:32 GMT

ಬೆಂಗಳೂರು, ನ. 19: ಬೆಳಗಾವಿಯಲ್ಲಿ ರೈತರ ಪ್ರತಿಭಟನೆ ವೇಳೆ ನನ್ನನ್ನು ನಿಂದಿಸಿದ ಬಗೆಗೆ ನನಗೆ ಅತೀವ ನೋವಾಗಿತ್ತು. ಈ ಬಗ್ಗೆ ನಾನು ನೀಡಿದ ಪ್ರತಿಕ್ರಿಯೆಯಲ್ಲಿ ಯಾವುದೇ ದುರುದ್ದೇಶವಿರಲಿಲ್ಲ. ನನ್ನ ಮಾತಿನ ಅರ್ಥವನ್ನು ಗ್ರಹಿಸದೆ, ಚರ್ಚೆಯಾಗುತ್ತಿರುವುದು ದುರದೃಷ್ಟಕರ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಪಷ್ಟಣೆ ನೀಡಿದ್ದಾರೆ.

ಸೋಮವಾರ ಈ ಸಂಬಂಧ ಸ್ಪಷ್ಟಣೆ ನೀಡಿರುವ ಅವರು, ರೈತರ ಬಗ್ಗೆ, ಹೆಣ್ಣು ಮಕ್ಕಳ ಬಗ್ಗೆ ಅಪಾರ ಗೌರವ ಇಟ್ಟುಕೊಂಡ ವ್ಯಕ್ತಿ ನಾನು. ರೈತ ಬಾಂಧವರೆ, ನೆನಪಿಡಿ, ಇದು ನಿಮ್ಮ ಸರಕಾರ. ನಿಮ್ಮ ಹಿತ ಕಾಯಲು ಏನೆಲ್ಲ ಪ್ರಯತ್ನ ಮಾಡಲು ಸಾಧ್ಯವೋ, ಅಂತಹ ಎಲ್ಲ ಸಾಧ್ಯತೆಗಳನ್ನೂ ಪರಿಶೀಲಿಸುತ್ತದೆ ಎಂದು ಹೇಳಿದ್ದಾರೆ.

ನಾಳಿನ ಸಭೆಯಲ್ಲಿ ನಿಮ್ಮ ಒಳಿತನ್ನಷ್ಟೇ ಕೇಂದ್ರೀಕರಿಸಿ, ಸರಕಾರ ಮಾತುಕತೆ ನಡೆಸಲಿದೆ. ನಾಳಿನ ಸಭೆಯಲ್ಲಿ ಕಬ್ಬು ಬೆಳೆಗಾರರ ಸಮಸ್ಯೆಗಳ ಎಲ್ಲ ಅಂಶಗಳನ್ನು ಕೂಲಂಕಷವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಯತ್ನಿಸುತ್ತೇನೆ. ನಿಮ್ಮ ನೋವಿಗೆ ನಾವು ಖಂಡಿತ ಸ್ಪಂದಿಸುತ್ತೇವೆ ಎಂದು ಅವರು ಅಭಯ ನೀಡಿದ್ದಾರೆ.

ನಾನು ಹಿಂದಿನಿಂದಲೂ ರೈತರ ಪಕ್ಷಪಾತಿಯಾಗಿದ್ದವನು. ಇದರಲ್ಲಿ ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ ಎಂಬ ಭೇದವಿಲ್ಲ. ಬೆಳಗಾವಿಯ ಜಿಲ್ಲೆಯ ರೈತರಿಗೆ ಚೆಕ್‌ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲ್ಕತ್ತಾ ನ್ಯಾಯಾಲಯದಿಂದ ಬಂಧನ ವಾರಂಟ್ ಹೊರಡಿಸಿದಾಗಲೂ ಮಧ್ಯಪ್ರವೇಶಿಸಿ ಸಂಧಾನ ಸಭೆ ನಡೆಸಿ, ರೈತರ ರಕ್ಷಣೆಗೆ ಪ್ರಯತ್ನ ನಡೆಸಿದವನು ನಾನು. ಉತ್ತರ ಕರ್ನಾಟಕದವರು, ಇದು ಬ್ಯಾಂಕು ಮತ್ತು ರೈತರ ನಡುವಿನ ವಿಷಯ ಎಂದು ಕೈಕಟ್ಟಿ ಕೂರಲಿಲ್ಲ. ಸಿಎಂ ಆಗಿ ಅಧಿಕಾರ ವಹಿಸಿಕೊಂಡಾಗಿನಿಂದ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕೆ ಏನೇನು ಪ್ರಯತ್ನ ಮಾಡಬಹುದು ಎಂಬ ಬಗ್ಗೆ ವಿವಿಧ ಆಯಾಮಗಳಲ್ಲಿ ಪ್ರಯತ್ನಗಳನ್ನು ಮಾಡುತ್ತಲೇ ಇದ್ದೇನೆ.

ರಾಜ್ಯ ಸರಕಾರ ಕಬ್ಬು ಬೆಳೆಗಾರರ ಹಿತ ಕಾಯಲು ಬದ್ಧ. ಈಗಾಗಲೇ ಇದನ್ನು ಹಲವು ಬಾರಿ ಸ್ಪಷ್ಟಪಡಿಸಿದ್ದೇನೆ. ನಾಳೆ ಮಧ್ಯಾಹ್ನ ಕಬ್ಬು ಬೆಳೆಗಾರರ ಸಮಸ್ಯೆ ಕುರಿತು ಚರ್ಚಿಸಲು ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆ ಮಾಲಕರು ಮತ್ತು ಸಂಬಂಧಿಸಿದ ಅಧಿಕಾರಿಗಳ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ರೈತರ ಹಿತದೃಷ್ಟಿಯಿಂದ ಒಮ್ಮತದ ನಿರ್ಣಯ ಹೊರಹೊಮ್ಮುತ್ತದೆ ಎನ್ನುವ ವಿಶ್ವಾಸ ನನ್ನದು. ಆ ನಿಟ್ಟಿನಲ್ಲಿ ಎಲ್ಲ ರೀತಿಯ ಪ್ರಯತ್ನಗಳನ್ನೂ ಪ್ರಾಮಾಣಿಕವಾಗಿ ಮಾಡುವೆ. ರೈತರ ಹಿತ ಬಿಟ್ಟರೆ ಬೇರೆ ಯಾವ ಮುಲಾಜೂ ನನಗಿಲ್ಲ. ಈ ಬಗ್ಗೆ ನಮ್ಮ ಬದ್ಧತೆ ಸಂಶಯಾತೀತ ಎಂಬುದನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ಮೈತ್ರಿ ಸರಕಾರ ರೈತಪರ ಸರಕಾರ. ಕೃಷಿ ಕ್ಷೇತ್ರದ ಸಮಸ್ಯೆಗಳಿಗೆ ಆಮೂಲಾಗ್ರವಾಗಿ ಪರಿಹಾರ ಕಂಡುಕೊಳ್ಳಲು ನಾವು ಮುಂದಾಗಿದ್ದೇವೆ.

ಸಾಲಮನ್ನಾ ರೈತರ ಸಮಸ್ಯೆಗಳಿಗೆ ಪರಿಹಾರ ಅಲ್ಲ. ಆದರೆ ಒಮ್ಮೆ ರೈತ ಋಣಭಾರ ಕಳೆದುಕೊಂಡು ಹೊಸ ಬದುಕು ಪ್ರಾರಂಭಿಸಬೇಕು ಎಂಬ ಆಶಯದೊಂದಿಗೆ ಸಹಕಾರಿ ಬ್ಯಾಂಕುಗಳಷ್ಟೇ ಅಲ್ಲ, ವಾಣಿಜ್ಯ ಬ್ಯಾಂಕುಗಳಲ್ಲಿನ ಬೆಳೆ ಸಾಲಕ್ಕೂ ನಮ್ಮ ಸರಕಾರ ಮುಂದಾಗಿದೆ. ಜೊತೆಗೆ ಸಿದ್ಧತೆಯ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಶೀಘ್ರವೇ ಸಾಲಮನ್ನಾ ಪ್ರಕ್ರಿಯೆ ಪ್ರಾರಂಭವಾಗಲಿದೆ. ಇದಕ್ಕೆ ಸುಮಾರು 48 ಸಾವಿರ ಕೋಟಿ ರೂ.ಸಂಪನ್ಮೂಲ ಅಗತ್ಯವಿದ್ದು, ಪ್ರತಿ ಸಾಲದ ಖಾತೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಾಗಿರುವುದರಿಂದ ಸ್ವಲ್ಪಸಮಯಾವಕಾಶದ ಅಗತ್ಯವಿದೆ. ರೈತ ಬಾಂಧವರು ಹತಾಶರಾಗದೆ ತಾಳ್ಮೆಯಿಂದ ಇರಬೇಕೆಂದು ಕಳಕಳಿಯಿಂದ ಮನವಿ ಮಾಡುತ್ತೇನೆ. ನಮ್ಮ ಅಧಿಕಾರಿಗಳು ಈ ಯೋಜನೆಯ ಜಾರಿಗಾಗಿ ಹಗಲು-ರಾತ್ರಿಯೆನ್ನದೆ ಶ್ರಮಿಸುತ್ತಿದ್ದಾರೆ. ಮಾಹಿತಿ ಸಂಗ್ರಹ, ಪರಿಶೀಲನೆಯ ಕಾರ್ಯ ನಡೆಸುತ್ತಿದ್ದಾರೆ. ದಯವಿಟ್ಟು ನೀವೂ ಸಹಕರಿಸಿ ಎಂದು ಸಿಎಂ ಕುಮಾರಸ್ವಾಮಿ ಪ್ರಕಟಣೆಯಲ್ಲಿ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News