ಹೊಟೇಲ್, ಬಾರ್, ಕ್ಲಬ್‌ಗಳಲ್ಲಿ ಧೂಮಪಾನ ನಿಷೇಧ: ಸಚಿವ ಯು.ಟಿ.ಖಾದರ್

Update: 2018-11-19 12:24 GMT

ಬೆಂಗಳೂರು, ನ. 19: ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ವಿಶೇಷವಾಗಿ ಎಲ್ಲ ದರ್ಶನಿ, ಹೊಟೇಲ್, ಬಾರ್, ರೆಸ್ಟೋರೆಂಟ್, ಪಬ್, ಕ್ಲಬ್‌ಗಳಲ್ಲಿ ಸಿಗರೇಟ್ ಮತ್ತು ತಂಬಾಕು ಸೇವನೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಸೋಮವಾರ ವಿಕಾಸಸೌಧದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪೌರಾಡಳಿತ ಇಲಾಖೆಯಿಂದ ಈ ಸಂಬಂಧ ಸುತ್ತೋಲೆ ಹೊರಡಿಸಲಾಗಿದೆ. ಸಾರ್ವಜನಿಕರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ರಾಜ್ಯ ಸರಕಾರ ಈ ಕ್ರಮ ಕೈಗೊಂಡಿದೆ ಎಂದರು.

‘ಧೂಮಪಾನ ನಿಷೇಧ ಹಾಗೂ ಧೂಮಪಾನಿಗಳಲ್ಲದವರ ಆರೋಗ್ಯ ರಕ್ಷಣೆ ಕಾಯ್ದೆ-2001ರನ್ವಯ ಎಲ್ಲ ಹೊಟೇಲ್, ಬಾರ್-ರೆಸ್ಟೋರೆಂಟ್, ಪಬ್, ಕ್ಲಬ್‌ಗಳಲ್ಲಿ ಧೂಮಪಾನ ನಿಷೇಧಿಸಿ ಆದೇಶ ಹೊರಡಿಸಿದ್ದು, ಇಂದಿನಿಂದಲೇ ಈ ಆದೇಶ ಕಾರ್ಯರೂಪಕ್ಕೆ ಬರಲಿದ್ದು, ಈ ಆದೇಶ ಪಾಲಿಸದಿದ್ದರೆ ಹೊಟೇಲ್, ಬಾರ್ ಪರವಾನಿಗೆ ರದ್ದುಗೊಳಿಸಲಾಗುವುದು ಎಂದು ಎಚ್ಚರಿಸಿದರು.

ತಂಬಾಕು ಆಧಾರಿತ ಆರೋಗ್ಯ ಸಮಸ್ಯೆಗಳ ನಿಯಂತ್ರಣಕ್ಕೆ ನಮಗೆ ಎಲ್ಲ ಇಲಾಖೆಗಳ ಸಹಕಾರ ಅಗತ್ಯ. ಹೀಗಾಗಿ ಸಿಎಂ ಅಧ್ಯಕ್ಷತೆಯಲ್ಲಿ ಎಲ್ಲ ಇಲಾಖೆಗಳ ಪ್ರಮುಖರ ಸಭೆ ಕರೆಯಲಾಗಿದೆ ಎಂದ ಅವರು, ತಂಬಾಕು ಮತ್ತು ಆಲ್ಕೋಹಾಲ್ ಉತ್ಪನ್ನಗಳಿಗೆ ತೆರಿಗೆ ರಿಯಾಯಿತಿ ರದ್ದುಪಡಿಸುವ ಬಗ್ಗೆಯೂ ಸರಕಾರ ಚಿಂತನೆ ನಡೆಸಿದೆ ಎಂದರು.

ಅಪ್ರಾಪ್ತರಿಗೆ ಅಥವಾ ಧೂಮಪಾನ ಮಾಡದ ಸಾರ್ವಜನಿಕರಿಗೆ ‘ಧೂಮಪಾನ ಪ್ರದೇಶ’ದಲ್ಲಿ ಪ್ರವೇಶ ಅವಕಾಶ ಇರತಕ್ಕದ್ದಲ್ಲ. ಧೂಮಪಾನ ವಲಯದಲ್ಲಿ ಯಾವುದೇ ರೀತಿ ತಿಂಡಿ, ಊಟ, ಮದ್ಯ, ಸಿಗರೇಟ್, ನೀರು, ಟೀ, ಕಾಫಿ ಇತರೆ ಪದಾರ್ಥಗಳ ಪೂರೈಕೆ ಮಾಡತಕ್ಕದ್ದಲ್ಲ ಎಂದು ಅವರು ಇದೇ ವೇಳೆ ಸೂಚಿಸಿದರು.

ಇದೇ ವೇಳೆ ನಗರ ಆರೋಗ್ಯ ಯೋಜನೆಗಳು ಹಾಗೂ ಸಾಂಕ್ರಾಮಿಕ ರೋಗ ನಿಯಂತ್ರಣ ಕುರಿತಂತೆ ಅಮೆರಿಕಾ ನಿಯೋಗದೊಂದಿಗೆ ಸಚಿವ ಯು.ಟಿ. ಖಾದರ್ ಸಮಾಲೋಚನೆ ನಡೆಸಿದರು. ಈ ವೇಳೆ ಮಾಜಿ ಸಚಿವ ಸುರೇಶ್ ಕುಮಾರ್, ಪರಿಷತ್ ಸದಸ್ಯ ಶ್ರೀಕಂಠೇಗೌಡ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News