ಗ್ರಾಮೀಣ ಪ್ರದೇಶಕ್ಕೆ ನಿರಂತರ ನೀರು ಪೂರೈಕೆಗೆ ‘ಜಲಧಾರೆ’ ಯೋಜನೆ: ಸಿಎಂ ಕುಮಾರಸ್ವಾಮಿ

Update: 2018-11-19 12:41 GMT

ಬೆಂಗಳೂರು, ನ. 19: ಗ್ರಾಮೀಣ ಪ್ರದೇಶದ ಜನತೆ ಶೌಚಾಲಯ ಬಳಕೆಗೆ ಪ್ರೋತ್ಸಾಹಿಸಲು ಎಲ್ಲ ಹಳ್ಳಿಗಳಿಗೂ 24 ಗಂಟೆ ನೀರು ಪೂರೈಕೆಗೆ ಜಲಧಾರೆ ಯೋಜನೆಗೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

ಸೋಮವಾರ ವಿಧಾನಸೌಧ-ವಿಕಾಸೌಧದ ಮಧ್ಯದಲ್ಲಿನ ಮಹಾತ್ಮ ಗಾಂಧಿ ಪುತ್ಥಳಿ ಬಳಿ ‘ವಿಶ್ವ ಶೌಚಾಲಯ’ ದಿನದ ಅಂಗವಾಗಿ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಏರ್ಪಡಿಸಿದ್ದ ‘ಸ್ವಚ್ಛ ಮೇವ ಜಯತೇ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಗ್ರಾಮೀಣ ಕರ್ನಾಟಕವನ್ನು ಬಯಲು ಬಹಿರ್ದೆಸೆ ಮುಕ್ತ’ ಎಂದು ಘೋಷಿಸಿದರು.

ನಾಲ್ಕು ವರ್ಷಗಳಲ್ಲಿ ಸುಮಾರು 45 ಲಕ್ಷ ಶೌಚಾಲಯ ನಿರ್ಮಾಣದ ಮೂಲಕ ರಾಜ್ಯವನ್ನು ಬಯಲು ಬಹಿರ್ದೆಸೆ ಮುಕ್ತವನ್ನಾಗಿಸಲಾಗಿದೆ ಎಂದ ಅವರು, ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯ ಬಳಕೆಗೆ ನೀರಿನ ಸಮಸ್ಯೆ ಇದೆ. ಹೀಗಾಗಿ ಸುಮಾರು 60 ಸಾವಿರ ಕೋಟಿ ರೂ.ವೆಚ್ಚದಲ್ಲಿ ಜಲಧಾರೆ ಯೋಜನೆಗೆ ಶೀಘ್ರ ಚಾಲನೆ ನೀಡಲಾಗುವುದು ಎಂದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ‘ಸ್ವಚ್ಛ ಮೇವ ಜಯತೇ’ ಕಾರ್ಯಕ್ರಮವನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಸರಕಾರ ಬದ್ಧ ಎಂದು ಅವರು ಪ್ರಕಟಿಸಿದರು.

ಶೌಚಾಲಯ ನಿರ್ಮಾಣ ಖುಷಿಗಾಗಿ ಅಲ್ಲ: ರಾಜ್ಯದಲ್ಲಿ ಶೌಚಾಲಯ ನಿರ್ಮಾಣ ಸರಕಾರದ ಖುಷಿಗಾಗಿ ನಿರ್ಮಿಸುತ್ತಿಲ್ಲ. ಬದಲಿಗೆ ರಾಜ್ಯದ ಸ್ವಚ್ಛತೆ, ಜನತೆಯ ಆರೋಗ್ಯಕ್ಕಾಗಿ ನಿರ್ಮಿಸುತ್ತಿದ್ದು, ಜನ ಶೌಚಾಲಯ ಬಳಕೆಗೆ ಮುಂದಾಗಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಮನವಿ ಮಾಡಿದರು.

ರಾಜ್ಯದಲ್ಲಿ ಶೌಚಾಲಯ ಬಳಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ‘ಶೌಚಾಲಯ ಆಗಲಿ ಸ್ವಚ್ಛಾಲಯ, ಸ್ವಚ್ಛ ಮೇವ ಜಯತೇ’ ಘೋಷಣೆಯಡಿ ಒಂದು ವರ್ಷ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದ ಅವರು, ಗ್ರಾಮೀಣ ಪ್ರದೇಶದಲ್ಲಿನ ಕಸ ನಿರ್ವಹಣೆಗೆ ಅಭಿಯಾನ ಕೈಗೊಳ್ಳಲಾಗುವುದು ಎಂದರು.

ಸ್ವಚ್ಛ ಭಾರತ್ ಅಭಿಯಾನದಡಿಯಲ್ಲಿ ನಾಲ್ಕು ವರ್ಷಗಳಲ್ಲಿ 45 ಲಕ್ಷ ಶೌಚಾಲಯ ನಿರ್ಮಿಸಿದ್ದು, ನಿರ್ಮಲ ಭಾರತ ಅಭಿಯಾನದಡಿ 25 ಲಕ್ಷ ಶೌಚಾಲಯ ಸೇರಿದಂತೆ ರಾಜ್ಯದಲ್ಲಿ ಒಟ್ಟು 70 ಲಕ್ಷ ಶೌಚಾಲಯ ನಿರ್ಮಿಸಲಾಗಿದೆ ಎಂದ ಅವರು, ಬಿಟ್ಟು ಹೋಗಿರುವ ಕುಟುಂಬಗಳಿಗೆ ಇನ್ನೂ 5ಲಕ್ಷ ಶೌಚಾಲಯ ನಿರ್ಮಿಸಲು ಕ್ರಮ ವಹಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಆಹಾರ ಸಚಿವ ಬಿ.ಝಡ್.ಝಮೀರ್ ಅಹ್ಮದ್ ಖಾನ್, ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್, ಬಾಗಲಕೋಟೆ ಜಿ.ಪಂ.ಅಧ್ಯಕ್ಷೆ ವೀಣಾ ಕಾಶಪ್ಪನವರ್, ವಿಧಾನಸಭೆ ಸಚೇತಕ ಗಣೇಶ್ ಹುಕ್ಕೇರಿ, ಗ್ರಾಮೀಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಎ.ಅತೀಕ್ ಸೇರಿದಂತೆ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News