ಟಿಪ್ಪು ಎಲ್ಲರಿಗೂ ಮಾದರಿ: ಕವಿತಾ ಲಂಕೇಶ್

Update: 2018-11-19 13:29 GMT

ಬೆಂಗಳೂರು, ನ.19: ಟಿಪ್ಪು ಸುಲ್ತಾನ್ ಸಂಯುಕ್ತ ರಂಗದಿಂದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಟಿಪ್ಪು ಜನ್ಮದಿನಾಚರಣೆಯ ಅಂಗವಾಗಿ ಟಿಪ್ಪು ಏಕತಾ ಪ್ರಶಸ್ತಿಯನ್ನು ಪ್ರದಾನ ಮಾಡಿ ಸನ್ಮಾನಿಸಲಾಯಿತು.

ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಟಿಪ್ಪು ಸುಲ್ತಾನ್ ಪ್ರಚಾರ ಸಮಿತಿ ಅಧ್ಯಕ್ಷ ವೌಲಾನ ಮುಹಮ್ಮದ್ ಝುಲ್ಫಿಕರ್ ನೂರಿ, ತಲಕಾಡು ಚಿಕ್ಕರಂಗೇಗೌಡ, ಕರ್ನಾಟಕ ರೈತರ ಸಂಘದ ವೀರಸಂಗಯ್ಯ, ಗೌರಿ ಲಂಕೇಶ್ ಪರವಾಗಿ ಕವಿತಾ ಲಂಕೇಶ್, ಚನ್ನಕೃಷ್ಣಪ್ಪ ಅವರುಗಳಿಗೆ ಪ್ರಶಸ್ತಿಯನ್ನು ನೀಡಿ ಸನ್ಮಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಸನ್ಮಾನಿತರನ್ನು ಉದ್ದೇಶಿಸಿ ಮಾತನಾಡಿದ ಪ್ರೊ.ಎನ್.ವಿ. ನರಸಿಂಹಯ್ಯ, ಟಿಪ್ಪು ಸುಲ್ತಾನ್ ಮುಸ್ಲಿಮರ ರಾಜನಾಗಿರದೆ, ಮೈಸೂರು ಸಂಸ್ಥಾನದ ರಾಜನಾಗಿ ಕೆಲಸ ಮಾಡಿದ್ದಾರೆ. ರಾಜಧರ್ಮವನ್ನು ಪಾಲಿಸುವ ಮೂಲಕ ಅತ್ಯುತ್ತಮ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಪರದೇಶಿಗರ ವಿರುದ್ಧ ಟಿಪ್ಪು ಹಾಗೂ ಅವರ ತಂದೆ ತಮ್ಮ ಜೀವನವನ್ನು ಪಣಕ್ಕಿಟ್ಟು ಹೋರಾಡಿದ್ದಾರೆ. ಆದರೆ, ನಮ್ಮೊಳಗೆ ಇದ್ದು, ಬ್ರಿಟಿಷರಿಗೆ ಬೆಂಬಲವಾಗಿ ನಿಂತಿದ್ದವರು ಇಂದು ಟಿಪ್ಪುವನ್ನು ವಿರೋಧಿಸುತ್ತಿದ್ದಾರೆ. ನಾವು ಇಂದು ದೇಶಕ್ಕಾಗಿ ಹೋರಾಡಿದ ಟಿಪ್ಪುವನ್ನು ದೇಶಪ್ರೇಮಿ ಎನ್ನಬೇಕಾ ಅಥವಾ ಬ್ರಿಟಿಷರೊಂದಿಗೆ ಕೈ ಜೋಡಿಸಿದವರನ್ನು ದೇಶಪ್ರೇಮಿ ಎನ್ನಬೇಕಾ ಎಂದರು.

ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಲು ಮುಂದಾಗಿರುವ ಬಿಜೆಪಿಯು ಉತ್ತರದಲ್ಲಿ ರಾಮಮಂದಿರ, ದಕ್ಷಿಣದಲ್ಲಿ ಅಯ್ಯಪ್ಪ ದರ್ಶನವನ್ನು ರಾಜಕೀಯ ದಾಳವನ್ನಾಗಿ ಮಾಡಿಕೊಂಡಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಗೆಲ್ಲಲು ಹಲವು ತಂತ್ರಗಳನ್ನು ರೂಪಿಸುತ್ತಿದೆ. ಅದಕ್ಕೆ ತಕ್ಕ ಉತ್ತರ ಎಲ್ಲರೂ ನೀಡಬೇಕಿದೆ ಎಂದು ತಿಳಿಸಿದರು.

ನಿರ್ದೇಶಕಿ ಕವಿತಾ ಲಂಕೇಶ್ ಮಾತನಾಡಿ, ಎಲ್ಲ ಧರ್ಮದ ಜನರನ್ನೂ ಸಮಾನವಾಗಿ ಕಾಣುತ್ತಿದ್ದ ವ್ಯಕ್ತಿ ಟಿಪ್ಪು. ಅಲ್ಲದೆ, ಮಹಿಳೆಯರಿಗೆ ಗೌರವ ನೀಡುತ್ತಿದ್ದ ಅವರು, ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ಸಹಿಸುತ್ತಿರಲಿಲ್ಲ. ಕನ್ನಡ ಭಾಷಿಕ ಪ್ರದೇಶಗಳನ್ನು ಒಂದುಮಾಡುವ ಪ್ರಯತ್ನ ಟಿಪ್ಪು ಮಾಡಿದ್ದರು. ಆದರೆ, ಅನಗತ್ಯವಾಗಿ ಟಿಪ್ಪುವಿನ ವಿರುದ್ಧ ಅಪಪ್ರಚಾರ ಮಾಡಿ, ದಿಕ್ಕು ತಪ್ಪಿಸಲಾಗುತ್ತಿದೆ ಎಂದು ಹೇಳಿದರು.

ಮೈಸೂರು ಪ್ರಾಂತ್ಯದಲ್ಲಿ ಆಡಳಿತ ನಡೆಸಿದ್ದ ಟಿಪ್ಪು ಸುಲ್ತಾನ್ ಅಂದಿನ ಅವರ ಅಧೀನಕ್ಕೆ ಒಳಪಡುವ ಎಲ್ಲ ಪ್ರಾಂತ್ಯಗಳನ್ನು ಸಂರಕ್ಷಿಸಲು ಸಾಕಷ್ಟು ಶ್ರಮಿಸಿದ್ದಾರೆ. ತಮ್ಮ 38 ವರ್ಷಗಳ ಆಡಳಿತದಲ್ಲಿ ಸಂಪೂರ್ಣ ಯುದ್ಧಗಳಿಂದಲೇ ತಮ್ಮ ಪ್ರಾಂತ್ಯವನ್ನು ರಕ್ಷಿಸುವ ಕೆಲಸ ಮಾಡಿದ್ದಾರೆ. ಅವರು ಮುಸ್ಲಿಮ್ ಸಮುದಾಯಕ್ಕೆ ಅಷ್ಟೇ ಅಲ್ಲದೆ, ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮಾತನಾಡಿದರು. ಟಿಪ್ಪು ಸುಲ್ತಾನ್ ಸಂಯುಕ್ತ ರಂಗದ ಸರ್ದಾರ್ ಅಹಮದ್ ಖುರೇಷಿ, ಸೂಫಿ-ಸಂತರ ಒಕ್ಕೂಟದ ಸೂಫಿ ವಲೀಬಾ, ರೈತ ಸಂಘದ ಮುಖಂಡ ವೀರಸಂಗಯ್ಯ, ಸಿ.ಕೆ.ರವಿಚಂದ್ರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News