ಬೆಂಗಳೂರು ಹೊರವರ್ತುಲ ರಸ್ತೆ: ಭೂಸ್ವಾಧೀನಕ್ಕೆ 4500 ಕೋಟಿ ರೂ. ಮಂಜೂರು; ಸಚಿವ ಕೃಷ್ಣಭೈರೇಗೌಡ

Update: 2018-11-19 13:44 GMT

ಬೆಂಗಳೂರು, ನ.19: ಸಂಚಾರ ದಟ್ಟಣೆ ಕಡಿಮೆ ಮಾಡಲು ಹೊರವರ್ತುಲ ರಸ್ತೆ ನಿರ್ಮಾಣಕ್ಕೆ ನಿರ್ಧರಿಸಿದ್ದು, ತುಮಕೂರು ರಸ್ತೆಯಿಂದ ಬಳ್ಳಾರಿ ರಸ್ತೆ, ಹಳೆ ಮದ್ರಾಸ್ ರಸ್ತೆ, ಹೊಸೂರು ರಸ್ತೆ ಸಂಪರ್ಕಿಸುವ 65 ಕಿ.ಮೀ ಹೊರವರ್ತುಲ ರಸ್ತೆ ಅಗತ್ಯ ಇರುವ 1810 ಎಕರೆ ಭೂಸ್ವಾಧೀನಕ್ಕೆ 4,500ಕೋಟಿ ರೂ.ಒದಗಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಸೋಮವಾರ ವಿಧಾನಸೌಧದ ಸಂಪುಟ ಸಭಾ ಮಂದಿರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಬಳಿಕ ಈ ಬಗ್ಗೆ ಮಾಹಿತಿ ನೀಡಿದ ಗ್ರಾಮೀಣಾಭಿವೃದ್ಧಿ ಮತ್ತು ಕಾನೂನು ಸಚಿವ ಕೃಷ್ಣ ಭೈರೇಗೌಡ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ 30 ಕೆರೆಗಳಿಗೆ ಕೆ.ಆರ್.ಪುರಂ ಎಸ್‌ಟಿಪಿಯಿಂದ ಸಂಸ್ಕರಿಸಿ ತ್ಯಾಜ್ಯ ನೀರನ್ನು ತುಂಬಿಸುವ ಏತ ನೀರಾವರಿ ಯೋಜನೆಗೆ 100 ಕೋಟಿ ರೂ.ಗಳನ್ನು ಒದಗಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದರು.

ಹಾಸನ ಜಿಲ್ಲೆಯ ಮೊಸಳೆಹೊಸಹಳ್ಳಿ ಗ್ರಾಮದಲ್ಲಿ ಸರಕಾರಿ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆ ಮಾಡಲು 58 ಕೋಟಿ ರೂ. ಒದಗಿಸಲು ಹಾಗೂ ಪಾಲಿಟೆಕ್ನಿಕ್ ಕಾಲೇಜು ಸ್ಥಾಪನೆಗೆ 16 ಕೋಟಿ ರೂ.ಒದಗಿಸಲು ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.

ಪಹಣಿ ಪಡೆಯಲು 10 ರೂ. ನಿಗದಿಪಡಿಸಿದ್ದು, ಇದನ್ನು 15ರೂ.ಗೆ ಹೆಚ್ಚಿಸಲು ಹಾಗೂ ಇತರೆ ಸೇವೆಗಳಿಗೆ ನಿಗದಿಪಡಿಸಲಾಗಿದ್ದ 15ರೂ.ಗಳ ಸೇವೆಯನ್ನು 25 ರೂ.ಗಳಿಗೆ ಹೆಚ್ಚಿಸಲು ಇಂದಿನ ಸಚಿವ ಸಂಪುಟ ಸಭೆ ನಿರ್ಧರಿಸಿದೆ ಎಂದು ಅವರು ತಿಳಿಸಿದರು.

ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಹೆಚ್ಚುವರಿಯಾಗಿ 1150 ಹಾಸಿಗೆಗಳ ಸೌಲಭ್ಯ ಕಲ್ಪಿಸಲು ಉದ್ದೇಶಿಸಲಾಗಿದ್ದು, ಇದಕ್ಕೆ 45 ಕೋಟಿ ರೂ.ವೆಚ್ಚವಾಗುತ್ತದೆ. ಇದರಲ್ಲಿ 22.50 ಕೋಟಿ ರೂ.ಯನ್ನು ರಾಜ್ಯ ಸರಕಾರದಿಂದ ಒದಗಿಸಲು ಹಾಗೂ 22.50 ಕೋಟಿ ರೂ.ಗಳನ್ನು ಜಯದೇವ ಆಸ್ಪತ್ರೆ ಭರಿಸಲು ಉದ್ದೇಶಿಸಿದ್ದು, ಈ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಪಿಪಿಪಿ ಮಾದರಿಯಲ್ಲಿ ರಾಜ್ಯದ 114 ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಸೌಲಭ್ಯ ಕಲ್ಪಿಸಲಾಗಿದೆ. ಅಲ್ಲದೆ ಇನ್ನೂ 57 ಕಡೆ ಡಯಾಲಿಸಿಸ್ ಕೇಂದ್ರ ಸ್ಥಾಪಿಸಲು ಹಾಗೂ ಅವುಗಳ ಖರ್ಚು ಭರಿಸಲು 54.50 ಕೋಟಿ ರೂ.ಒದಗಿಸಲು ಸಂಪುಟ ಒಪ್ಪಿಗೆ ನೀಡಿದೆ.

ಅಂಗಾಂಗ ಕಸಿ ಶಸ್ತ್ರಚಿಕಿತ್ಸೆ ಮತ್ತು ನಂತರದ ವೈದ್ಯೋಪಚಾರ ಬಹಳ ದುಬಾರಿ ಆಗಿರುವುದರಿಂದ ಬಡವರಿಗೆ ತೊಂದರೆ ಆಗುತ್ತಿತ್ತು. ಆದುದರಿಂದ ಜೀವ ಸಾರ್ಥಕತೆಯಲ್ಲಿ ನೊಂದಾಯಿಸಿಕೊಂಡ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು 30 ಕೋಟಿ ರೂ.ಗಳನ್ನು ಬಳಕೆ ಮಾಡಲು ಅನುಮೋದನೆ ನೀಡಿದೆ.

ಮುಖ್ಯಮಂತ್ರಿಗಳ 1ಲಕ್ಷ ಬಹುಮಹಡಿ ವಸತಿ ಯೋಜನೆಯನ್ನು ಮಾರ್ಪಡಿಸಿ, ಹೊಸ ಯೋಜನೆಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಯಲ್ಲಿ ಈವರೆಗೆ ನೆಲಮಹಡಿ ಜೊತೆಗೆ 3 ಮೇಲ್ಮಹಡಿಗಳಿಗೆ ಅನುಮೋದನೆ ನೀಡಲಾಗಿತ್ತು. ಇದನ್ನು ಪರಿಷ್ಕರಿಸಿ ನೆಲಮಹಡಿ ಜೊತೆಗೆ 14 ಮೇಲ್ಮಹಡಿಗಳಿಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಯಡಿ ವಸತಿ ಹಂಚಿಕೆಯಾಗುವ ಫಲಾನುಭವಿಗಳಿಗೆ ಭಾರತ ಸರಕಾರ 1.5 ಲಕ್ಷ ರೂ.ಆರ್ಥಿಕ ನೆರವನ್ನು ಒದಗಿಸಿದರೆ ರಾಜ್ಯ ಸರಕಾರ ಸಾಮಾನ್ಯ ವರ್ಗದವರಿಗೆ 1.2ಲಕ್ಷ ರೂ.ಹಾಗೂ ಪರಿಶಿಷ್ಟ ಜಾತಿ, ವರ್ಗಗಳಿಗೆ 2ಲಕ್ಷ ರೂ.ನೆರವನ್ನು ಒದಗಿಸುತ್ತದೆ.

ರಾಮನಗರ ಜಿಲ್ಲೆ ಬೈರಮಂಗಲ ಜಲಾಶಯಕ್ಕೆ ವೃಷಭಾವತಿಯಿಂದ ನೀರು ಹರಿಸಲು ಕಾಲುವೆ ನಿರ್ಮಾಣಕ್ಕೆ 110ಕೋಟಿ ರೂ.ಯೋಜನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಕಲುಷಿತ ನೀರು ಸೇರದಂತೆ ತಡೆಯಲು ಒಳಹರಿವು ನೀರು ಶುದ್ಧೀಕರಣ ಘಟಕ ಸ್ಥಾಪನೆಗೆ 285 ಕೋಟಿ ರೂ.ಒದಗಿಸಲು ಸಂಪುಟ ಒಪ್ಪಿಗೆ ನೀಡಿದೆ.

ಪುತ್ತೂರಿನಲ್ಲಿ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ 25 ಲಕ್ಷ ರೂ.ಗಳ ಕಾಮಗಾರಿಗೆ ಒಪ್ಪಿಗೆ ನೀಡಿದೆ. ರಾಮನಗರ, ಚನ್ನಪಟ್ಟಣ, ಮಾಗಡಿ ಮತ್ತು ಕನಕಪುರ ವ್ಯಾಪ್ತಿಗೆ ಬರುವ ಹಳ್ಳಿಗೆ ಕಾವೇರಿ ನದಿಯಿಂದ ನೀರು ಸರಬರಾಜು ಮಾಡಲು ಸತ್ಯಗಾಲದಿಂದ ಇಗ್ಗಲೂರು ಬಳಿ ಇರುವ ದೇವೇಗೌಡ ಬ್ಯಾರೇಜ್‌ಗೆ ನೀರು ಹರಿಸುವ ಯೋಜನೆಯ ಕಾಮಗಾರಿಗೆ 540 ಕೋಟಿ ರೂ.ಒಪ್ಪಿಗೆ ನೀಡಿದೆ.

ಸ್ಮಾರ್ಟ್ ಪೊಲೀಸಿಂಗ್ ಯೋಜನೆಯಡಿ ಸೈಬರ್ ಫೋರೆನಿಕ್ಸ್ ಘಟಕಗಳಿಗೆ ಹಾಗೂ ಟ್ರಾಫಿಕ್ ಪೊಲೀಸರು ಬಳಸುವ ಆಧುನಿಕ ಉಪಕರಣಗಳನ್ನು ಕೊಳ್ಳಲು 32.82 ಕೋಟಿ ರೂ.ಗಳನ್ನು ಒದಗಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಕೃಷ್ಣಭೈರೇಗೌಡ ತಿಳಿಸಿದರು.

2019ರಲ್ಲಿ ಸರಕಾರಿ ರಜಾ ದಿನಗಳ ಪಟ್ಟಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಲೋಕಾಯುಕ್ತರ ಮೇಲೆ ಸ್ವತಃ ತನಿಖೆ ನಡೆಸುವ ಸಂದರ್ಭ ಒದಗಿ ಬಂದರೆ ಅದರ ಜವಬ್ದಾರಿಯನ್ನು ಉಪಲೋಕಾಯುಕ್ತರಿಗೆ ವಹಿಸಲು ಅಗತ್ಯ ಕಾನೂನು ತಿದ್ದುಪಡಿ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದರು.

ಕೆಪಿಎಸ್ಸಿ ನೇಮಕಾತಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಇದುವರೆಗೂ ಅನುಸರಿಸುತ್ತಿದ್ದ ನೇಮಕಾತಿ ನಿಯಮಗಳನ್ನೇ ಮುಂದುವರೆಸಲು ಅಗತ್ಯ ಕಾನೂನು ರೂಪಿಸಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ’

-ಕೃಷ್ಣಭೈರೇಗೌಡ, ಕಾನೂನು ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News