ಕಬ್ಬಿನ ಬಾಕಿ ಬಿಡುಗಡೆಗೆ ಆಗ್ರಹಿಸಿ ವಿಧಾನಸೌಧಕ್ಕೆ ರೈತರ ಮುತ್ತಿಗೆ: ಬೇಡಿಕೆ ಈಡೇರಿಕೆಗೆ 15 ದಿನ ಗಡುವು

Update: 2018-11-19 14:18 GMT

ಬೆಂಗಳೂರು, ನ.19: ಕಬ್ಬಿನ ಬಾಕಿ ಬಿಡುಗಡೆ ಹಾಗೂ ಬೆಂಬಲ ಬೆಲೆ ನಿಗದಿ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಕಬ್ಬು ಬೆಳೆಗಾರರು ಸೋಮವಾರ ವಿಧಾನಸೌಧ ಮುತ್ತಿಗೆ ಹಾಕುವ ಮೂಲಕ ಸರಕಾರಕ್ಕೆ ಬಿಸಿ ಮುಟ್ಟಿಸಿದರು.

ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಬಿಜಾಪುರ, ಬಾಗಲಕೋಟೆ, ಹಾಸನ, ಮಂಡ್ಯ, ಮೈಸೂರು, ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿ, ನಗರದ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಬೃಹತ್ ಮೆರವಣಿಗೆ ನಡೆಸಿದ ನೂರಾರು ರೈತರು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಗರದ ಸ್ವಾತಂತ್ರ ಉದ್ಯಾನವದವರೆಗೂ ಮೆರವಣಿಗೆ ಸಾಗಿ ವಿಧಾನಸೌಧದತ್ತ ತೆರಳಲು ಪ್ರಯತ್ನಿಸಿದರೂ, ಪೊಲೀಸರ ಮಧ್ಯಪ್ರವೇಶದಿಂದಾಗಿ ಅಲ್ಲಿಯೇ ಧರಣಿ ನಡೆಸಿದರು.

ರೈತರು ಬೆಳೆದ ಕಬ್ಬು ಸೇರಿದಂತೆ ಎಲ್ಲ ಬೆಳೆಗಳಿಗೆ ಬೆಂಬಲ ಬೆಲೆ ನೀಡದೇ ರೈತರನ್ನು ವಂಚಿಸಲಾಗುತ್ತಿದೆ. ಈ ಮೂಲಕ ರೈತರ ಬದುಕಿನ ಜತೆ ಚೆಲ್ಲಾಟ ಆಡಲಾಗುತ್ತಿದೆ ಎಂದು ಸರಕಾರ ವಿರುದ್ಧ ಕಿಡಿಕಾರಿದರು.

ಸಿಎಂ ವಿರುದ್ಧ ಕಿಡಿ: ರವಿವಾರ ನಗರದ ಜಿಕೆವಿಕೆಯಲ್ಲಿ ನಡೆದ ಕೃಷಿಮೇಳದ ಸಮಾರೋಪದ ಭಾಷಣದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ರೈತ ಮಹಿಳೆಯ ಬಗ್ಗೆ ಅವಹೇಳನಕಾರಿ ಮಾತನಾಡಿದ್ದಾರೆ. ಮಣ್ಣಿನ ಮಗ ಎನ್ನುವ ಕುಮಾರಸ್ವಾಮಿ ಈ ರೀತಿಯಾಗಿ ಮಾತನಾಡಿರುವುದು ಎಷ್ಟು ಸರಿ. ರೈತರನ್ನು ಪಕ್ಷಾತೀತವಾಗಿ ಕಾಣಬೇಕಿದೆ. ಆದರೆ, ಜೆಡಿಎಸ್‌ಗೆ ಮತ ಹಾಕಿಲ್ಲ ಎಂಬ ಕಾರಣಕ್ಕೆ ಮುಖ್ಯಮಂತ್ರಿ ಹೀಗೆ ಮಾತನಾಡಿರುವುದು ಸರಿಯೇ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ.

ಕ್ಷಮೆ ಯಾಚಿಸಬೇಕು: ಮುಖ್ಯಮಂತ್ರಿ ಕುಮಾರಸ್ವಾಮಿ ಮಹಿಳೆಯ ಬಗ್ಗೆ ಅವಮಾನಕರವಾಗಿ ಮಾತನಾಡಿರುವುದಕ್ಕೆ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ನಾವು ಯಾರು ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ ನಾನು ಯಾರಿಗೂ ಅಗೌರವ ತೋರುವ ರೀತಿಯಲ್ಲಿ ಮಾತನಾಡುವುದಿಲ್ಲ, ಎಚ್ಚರಿಕೆಯಿಂದ ಮಾತನಾಡುತ್ತೇನೆ. ನನ್ನ ಹೇಳಿಕೆಯಲ್ಲಿ ಯಾವುದೇ ಅವಮಾನಕರವಾದ ಪದ ಬಳಕೆ ಮಾಡಿಲ್ಲ. ‘ತಾಯಿ’ ಎಂಬ ಪದ ಬಳಕೆ ಮಾಡಿದ್ದೇನೆ. ಗ್ರಾಮೀಣ ಭಾಷೆಯಲ್ಲಿ ನಾನು ಮಾತನಾಡಿದ್ದೇನೆ ಎಂದು ಹೇಳಿದ್ದಾರೆ.

ರೈತ ಮುಖಂಡ ಕೆ.ಪಿ.ಗಂಗಾದರ್ ಮಾತನಾಡಿ, ಪ್ರತಿಭಟನೆ ನಡೆಸುವವರು ಗೂಂಡಾಗಳು ಎನ್ನುವ ಸಿಎಂ ಹೇಳಿಕೆ ಅನ್ನದಾತರಿಗೆ ಮಾಡಿದ ಅವಮಾನವಾಗಿದೆ. ರೈತರ ವಿಚಾರದಲ್ಲಿ ರಾಜಕೀಯ ನಡೆಸಿರುವುದು ಸರಿಯಲ್ಲ. ಅದರಲ್ಲಿಯೂ ಪ್ರತಿಭಟನೆ ನಡೆಸುತ್ತಿದ್ದ ರೈತ ಮಹಿಳೆ ಕುರಿತು ಹಗುರವಾಗಿ ಮಾತನಾಡಿರುವುದು ಘೋರ ಅಪರಾಧ ಎಂದರು.

ರೈತರು ಮುಂದಿಟ್ಟಿರುವ ಬೇಡಿಕೆಗಳನ್ನು ಈಡೇರಿಸಲು ಅಸಾಧ್ಯವೇನಿಲ್ಲ. ಮುಖ್ಯಮಂತ್ರಿಗೆ ಇಚ್ಛಾಶಕ್ತಿಯಿದ್ದರೆ ಒಂದು ದಿನದಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸಬಹುದು. ಅದರ ಬದಲಿಗೆ ಪ್ರತಿಭಟನೆ ಮಾಡುವವರನ್ನು ಯಾವ ಪಕ್ಷದವರು ಎಂದು ಹೇಳಿಕೆ ನೀಡುವುದು ಸರಿಯಲ್ಲ ಎಂದು ಅವರು ಕಿಡಿಕಾರಿದರು.

ಸಂಚಾರ ಅಸ್ತವ್ಯಸ್ಥ: ಸಿಟಿ ರೈಲು ನಿಲ್ದಾಣದಿಂದ ರೈತರು ಬೃಹತ್ ಮೆರವಣಿಗೆ ನಡೆಸಿ ಸ್ವಾತಂತ್ರ ಉದ್ಯಾನವನದ ರಸ್ತೆಯಲ್ಲಿಯೇ ಧರಣಿ ನಡೆಸಿದ್ದರಿಂದ ವಿವಿಧ ಭಾಗಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿ, ಸಾರ್ವಜನಿಕರು ಪ್ರಯಾಣಿಸಲು ಪರದಾಡುವಂತಾಯಿತು.

ಮೈಸೂರು ಬ್ಯಾಂಕ್ ವೃತ್ತದಿಂದ ಮೆಜೆಸ್ಟಿಕ್, ಮೆಜೆಸ್ಟಿಕ್‌ನಿಂದ ಯಲಹಂಕ, ಕೋರಮಂಗಲ, ರಾಜಾಜಿನಗರ, ಮಲ್ಲೇಶ್ವರಂ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಸಂಚಾರ ದಟ್ಟಣೆಯಿಂದ ಕೂಡಿತ್ತು. ದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ಮಾರ್ಗಗಳನ್ನು ಬದಲಾವಣೆ ಮಾಡಿದ್ದರಿಂದ ಪ್ರಯಾಣಿಕರಿಗೆ ತೀವ್ರ ತೊಂದರೆಯುಂಟಾಗಿತ್ತು. ರಸ್ತೆಯಲ್ಲಿಯೇ ಧರಣಿ ನಡೆಸಿದ್ದರಿಂದ ನಗರದಿಂದ ಹೊರಗೆ ಹೋಗುವ ಬಿಎಂಟಿಸಿ, ಕೆಎಸ್ಸಾರ್ಟಿಸಿ ಬಸ್‌ಗಳು, ಖಾಸಗಿ ವಾಹನಗಳು, ಆಟೋಗಳು, ಸರಕು ಸಾಗಾಣಿಕೆ ವಾಹನಗಳು ಗಂಟೆಗಟ್ಟಲೇ ಸಾಲುಗಳಲ್ಲಿ ನಿಲ್ಲುವಂತಾಗಿತ್ತು.

15 ದಿನಗಳ ಗಡುವು

ಕಬ್ಬಿನ ಬಾಕಿ ಬಿಡುಗಡೆ, ಎಲ್ಲ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ, ಶೀಘ್ರ ಸಾಲ ಮನ್ನಾ ಸೇರಿದಂತೆ ಮತ್ತಿತರೆ ಬೇಡಿಕೆಗಳನ್ನು ಮುಂದಿನ 15 ದಿನಗಳೊಳಗೆ ಈಡೇರಿಸಬೇಕು. ಇಲ್ಲದಿದ್ದರೆ, ವಿಧಾನಸೌಧದ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಸರಕಾರಕ್ಕೆ ಎಚ್ಚರಿಕೆ ನೀಡಿ ಪ್ರತಿಭಟನಾ ಧರಣಿಯನ್ನು ವಾಪಸ್ ಪಡೆದರು. 

ಬಿಗಿ ಭದ್ರತೆ

ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ವಿವಿಧ ಕಡೆಗಳಿಂದ ನೂರಾರು ಸಂಖ್ಯೆಯಲ್ಲಿ ರೈತರು ಬೆಂಗಳೂರಿಗೆ ಆಗಮಿಸಿದ್ದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಭದ್ರತೆಯನ್ನು ಕಲ್ಪಿಸಲಾಗಿತ್ತು. ಡಿಸಿಪಿಗಳಾದ ಅನುಚೇತ್ ಹಾಗೂ ಚೇತನ್ ಸಿಂಗ್ ರಾಥೋಡ್ ನೇತೃತ್ವದಲ್ಲಿ ಸ್ವಾತಂತ್ರ ಉದ್ಯಾನವನ, ಮೆಜೆಸ್ಟಿಕ್, ಕೆ.ಆರ್.ವೃತ್ತ, ವಿಧಾನಸೌಧ, ರಾಜಭವನ ಸುತ್ತಮುತ್ತಲೂ ಭಾರಿ ಭದ್ರತೆ ಏರ್ಪಡಿಸಿದ್ದರು. ಸ್ವಾತಂತ್ರ ಉದ್ಯಾನವನದಲ್ಲಿ ಒಂದು ಸಾವಿರ ಪೊಲೀಸ್ ಸಿಬ್ಬಂದಿ, ಕೆಎಸ್‌ಆರ್‌ಪಿ ಕ್ಷಿಪ್ರ ಕಾರ್ಯಾಚರಣೆ ಪಡೆ, ಎರಡು ವಾಟರ್ ಜೆಟ್, ಅಶ್ರುವಾಯು ವಾಹನ, ಅಗ್ನಿಶಾಮಕ ಪಡೆ ಸೇರಿದಂತೆ ವಿವಿಧ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News