ಉ.ಕ ದ ಜ್ವಲಂತ ಸಮಸ್ಯೆಗಳ ಚರ್ಚೆಗೆ ಒಂದು ದಿನ ನಿಗದಿಪಡಿಸಲು ಆದ್ಯತೆ: ಸ್ಪೀಕರ್ ರಮೇಶ್‌ ಕುಮಾರ್

Update: 2018-11-19 14:32 GMT

ಬೆಳಗಾವಿ, ನ. 19: ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 10ರಿಂದ 20ರ ವರೆಗೆ 9 ದಿನಗಳ ಕಾಲ ನಡೆಯಲಿರುವ ಚಳಿಗಾಲದ ಅಧಿವೇಶನ ಸಿದ್ದತೆ ಸಂಬಂಧ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್, ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಸೋಮವಾರ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್, ವಿಧಾನ ಮಂಡಲ ಉಭಯ ಸದನಗಳ ಕಲಾಪ ಗೌರವಯುತವಾಗಿ ನಡೆಸಬೇಕು. ಗುಣಮಟ್ಟದ ಚರ್ಚೆ ನಡೆಸಬೇಕೆಂಬ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು.

ಸದಸ್ಯರ ಹಾಜರಾತಿ, ಚರ್ಚೆ, ಸದನದಲ್ಲಿ ಸದಸ್ಯರ ನಡವಳಿಕೆ ಸೇರಿದಂತೆ ಪ್ರತಿಯೊಂದರಲ್ಲೂ ಗುಣಾತ್ಮಕ ಬದಲಾವಣೆಗೆ ಪ್ರಯತ್ನಿಸಲಾಗುವುದು ಎಂದ ಅವರು, ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಚರ್ಚೆಗೆ ಒಂದು ದಿನ ನಿಗದಿಪಡಿಸಲು ಆದ್ಯತೆ ನೀಡಲಾಗುವುದು ಎಂದರು.

ಅಧಿವೇಶನದ ಸಂದರ್ಭದಲ್ಲಿ ಊಟ-ವಸತಿ, ಶಿಷ್ಟಾಚಾರ ಪಾಲನೆ, ಭದ್ರತೆ ಸೇರಿದಂತೆ ಯಾವುದೇ ರೀತಿಯ ಅನಾನುಕೂಲ ಉಂಟಾಗದಂತೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ರಮೇಶ್ ಕುಮಾರ್ ಇದೇ ವೇಳೆ ತಿಳಿಸಿದರು.

ರಾಜ್ಯದ ವಿವಿಧ ಭಾಗದ ಶಾಸಕರು, ಅಧಿಕಾರಿಗಳು ಮತ್ತು ಸಚಿವಾಲಯ ಸಿಬ್ಬಂದಿ ವಿಧಾನ ಮಂಡಲ ಅಧಿವೇಶನಕ್ಕೆ ಆಗಮಿಸುವುದರಿಂದ ವಿಭಿನ್ನ ಶೈಲಿಯ ಊಟದ ವ್ಯವಸ್ಥೆ ಮಾಡಲಾಗುವುದು ಎಂದ ಅವರು, ಊಟ, ವಸತಿ ವ್ಯವಸ್ಥೆ ಬಗ್ಗೆ ಚರ್ಚಿಸಲಾಗಿದೆ ಎಂದರು.

ಸಭೆಯಲ್ಲಿ ಸಭಾಪತಿ ಬಸವರಾಜ ಹೊರಟ್ಟಿ, ಜಿಲ್ಲಾಧಿಕಾರಿಗಳಾದ ಬೊಮ್ಮನಹಳ್ಳಿ, ದೀಪಾ ಚೋಳನ್, ಪೊಲೀಸ್ ಆಯುಕ್ತ ಡಿ.ಸಿ.ರಾಜಪ್ಪ, ಜಿ.ಪಂ.ಸಿಇಓ ರಾಮಚಂದ್ರನ್, ಎಸ್ಪಿ ಸುಧೀರಕುಮಾರ್ ರೆಡ್ಡಿ, ಡಿಸಿಪಿ ಸೀಮಾ ಲಾಟ್ಕರ್, ಅಪರ ಜಿಲ್ಲಾಧಿಕಾರಿ ಡಾ.ಬೂದೆಪ್ಪ ಹಾಗೂ ಉಭಯ ಸದನಗಳ ಕಾರ್ಯದರ್ಶಿಗಳು ಹಾಜರಿದ್ದರು.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 10ರಿಂದ 20ರ ವರೆಗೆ ಅಧಿವೇಶನ ನಡೆಯಲಿದೆ. ಅಧಿವೇಶನ ಕಲಾಪ ಒಂದು ದಿನ ವಿಸ್ತರಣೆಗೆ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು, ಒಪ್ಪಿಗೆ ನೀಡಿದರೆ ಡಿಸೆಂಬರ್ 21ರ ವರೆಗೆ ಕಲಾಪ ನಡೆಸಲಾಗುವುದು’

-ಬಸವರಾಜ ಹೊರಟ್ಟಿ, ಸಭಾಪತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News