ಕಬ್ಬಿನ ಬಾಕಿ-ಭತ್ತೆ ಹಣವನ್ನು ಶೀಘ್ರದಲ್ಲಿಯೇ ಕೊಡಿಸುತ್ತೇನೆ: ಎಚ್.ಡಿ.ಕುಮಾರಸ್ವಾಮಿ

Update: 2018-11-19 14:41 GMT

ಬೆಂಗಳೂರು, ನ.19: ರಾಜ್ಯದ ಕೆಲವು ಭಾಗಗಳಲ್ಲಿ ಕಬ್ಬು ಬೆಳೆಗಾರರ ಹೆಸರಲ್ಲಿ ಸಣ್ಣಪುಟ್ಟ ಗುಂಪು ಪ್ರತಿಭಟನೆಗಳು ನಡೆಯುತ್ತಿದ್ದು, ಸರಕಾರ ಯಾವ ರೀತಿಯಿಂದಲೂ ರೈತರನ್ನು ನಿರ್ಲಕ್ಷಿಸಿಲ್ಲ. ಆದರೆ, ಆಯಾ ಜಿಲ್ಲಾಧಿಕಾರಿಗಳು ಆಹ್ವಾನ ಕೊಟ್ಟು ರೈತರ ಜೊತೆಗೆ ಚರ್ಚೆ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಕೇಂದ್ರ ಸರಕಾರದ ಬರ ಪರಿಶೀಲನಾ ತಂಡದ ಜೊತೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಬ್ಬು ಬೆಳೆಗಾರರ ಹೆಸರಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ಸರಕಾರ ಮುಕ್ತ ಅವಕಾಶ ನೀಡಿದ್ದು, ಶೀಘ್ರದಲ್ಲಿಯೇ ಸಕ್ಕರೆ ಕಾರ್ಖಾನೆಯ ಮಾಲಕರು ಉಳಿಸಿಕೊಂಡಿರುವ ಭತ್ತೆ ಹಾಗೂ ಕಬ್ಬಿನ ಬಾಕಿ ಹಣವನ್ನು ರೈತರಿಗೆ ಕೊಡಿಸಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ಪ್ರತಿಯೊಂದು ವಿಷಯಗಳನ್ನೂ ಸೂಕ್ಷ್ಮವಾಗಿ ಗಮನಿಸಿ ಕೆಲಸ ಮಾಡುವವನು ನಾನು. ಆದರೂ ರೈತರು ಬೆಳಗಾವಿ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಕಬ್ಬಿನ ಭತ್ತೆ ಹಾಗೂ ಬಾಕಿ ಹಣವನ್ನು ನೀಡಿಲ್ಲ ಎಂದು ತೀವ್ರವಾಗಿ ಪ್ರತಿಭಟನೆ ನಡೆಸಿದ್ದಾರೆ. ಆದರೆ, ರಾಜ್ಯದ ಯಾವುದೇ ರೈತರು ಸಕ್ಕರೆ ಕಾರ್ಖಾನೆಯ ಮಾಲಕರು ಇನ್ನೂ ಬಾಕಿ ಹಣ ಹಾಗೂ ಭತ್ತೆ ನೀಡಿಲ್ಲ ಎಂದು ತಮ್ಮ ಬಳಿ ಬಂದರೆ ಯಾವುದೇ ಸಚಿವ, ಶಾಸಕರೆನ್ನದೇ ಮುಲಾಜಿಲ್ಲದೇ ಬಾಕಿ ಹಣವನ್ನು ಕೊಡಿಸುತ್ತೇನೆ. ಅಲ್ಲದೆ, ರೈತರಿಗೆ ಬರೀ 36 ಕೋಟಿ ರೂ.ಮಾತ್ರ ಭತ್ತೆ ಹಣವನ್ನು ನೀಡಬೇಕಾಗಿದೆ ಎಂದು ಹೇಳಿದರು.

ರಾಜ್ಯ ಸರಕಾರ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಿಲ್ಲ ಎಂದು ಪ್ರತಿಭಟಿಸುತ್ತಿದ್ದಾರೆ. ಇದೇ ರೈತರು ವಿಧಾನಸೌಧಕ್ಕೆ ಬಂದು ನನ್ನ ಜೊತೆಗೆ ಮುಕ್ತವಾಗಿ ಚರ್ಚಿಸಿ ಪರಿಹಾರವನ್ನು ಕಂಡುಕೊಳ್ಳಲಿ. ಇವರಿಗೆ ಆಗಿರುವ ಅನ್ಯಾಯವನ್ನು ನಾನು ಸರಿಪಡಿಸುತ್ತೇನೆ. ಅಲ್ಲದೆ, ಬೆಳಗಾವಿ ಸುವರ್ಣಸೌಧಕ್ಕೆ ಬೀಗ ಒಡೆದು ಪ್ರತಿಭಟಿಸುತ್ತಿರುವವರನ್ನು ಯಾಕೆ ಬಂಧಿಸಬಾರದು ಎಂದು ಪ್ರಶ್ನೆ ಹಾಕಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರೈತರ ಬಗ್ಗೆ ಹಗುರವಾಗಿ ಮಾತನಾಡಿರುವ ಕುಮಾರಸ್ವಾಮಿ ದುರಹಂಕಾರಿ ಎಂದು ಜರಿದಿದ್ದಾರೆ. ಆದರೆ, ನಾನು ಯಾವುತ್ತೂ ದುರಹಂಕಾರಿಯಾಗಿ ಮಾತನಾಡಿಲ್ಲ. ಅದೇ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ರೈತರು ಹಾವೇರಿಯಲ್ಲಿ ಗೊಬ್ಬರವನ್ನು ಕೇಳಿದ್ದಕ್ಕೆ ಅವರ ಮೇಲೆಯೇ ಗುಂಡು ಹಾರಿಸಿದರು. ದಾವಣಗೆರೆ, ಕೊಪ್ಪಳ ಸೇರಿ ವಿವಿಧ ಜಿಲ್ಲೆಗಳಲ್ಲಿ ರೈತರು ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿದಾಗ ಅವರನ್ನು ಬಂಧಿಸಲು ಯಡಿಯೂರಪ್ಪನವರೇ ಆದೇಶಿಸಿದ್ದರು ಎಂದು ಕಿಡಿಕಾರಿದರು.

ರವಿವಾರ ನಡೆದ ಕೃಷಿ ಮೇಳದಲ್ಲಿ ಯಾವುದೇ ರೈತ ಮಹಿಳೆಗೆ ನಾನು ಅವಮಾನಕರವಾಗಿ ನಿಂದಿಸಿಲ್ಲ. ನನ್ನ ಗ್ರಾಮೀಣ ಭಾಷೆಯಲ್ಲಿಯೇ ತಾಯಿ ಇಲ್ಲಿಯವರೆಗೆ ರೈತರ ಪರವಾಗಿ ಯಾಕೆ ಪ್ರತಿಭಟನೆ ನಡೆಸಲಿಲ್ಲ. ನಾಲ್ಕು ವರ್ಷ ಎಲ್ಲಿ ಮಲಗಿದ್ದೆ ಎಂದು ಪ್ರಶ್ನೆ ಮಾಡಿದ್ದೇನೆ. ಇದರಲ್ಲೇನು ತಪ್ಪು ಇದೆ ಎಂದು ಪ್ರಶ್ನಿಸಿದ ಅವರು, ಬೇಕಾದರೆ ಅವರಲ್ಲಿ ಕ್ಷಮೆ ಕೇಳುವ ಪ್ರಸಂಗ ಏನಾದರೂ ನಡೆದಿದ್ದರೆ ನನ್ನ ಹೇಳಿಕೆಯನ್ನು ವಾಪಸ್ ಪಡೆಯುತ್ತೇನೆ. ಅಲ್ಲದೆ, ಹೆಣ್ಣು ಮಕ್ಕಳಿಗೆ ಅಪಮಾನವಾಗಿದ್ದರೆ ಈ ಕೂಡಲೇ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಸಮ್ಮಿಶ್ರ ಸರಕಾರವು ರೈತರ ಸಾಲವನ್ನು ಮನ್ನಾ ಮಾಡುತ್ತೇವೆ ಎಂದು ಬರೀ ಸುಳ್ಳು ಭರವಸೆಯನ್ನು ನೀಡುತ್ತಲೇ ರೈತರಿಗೆ ನೋಟಿಸ್ ಕೊಟ್ಟು ಬಂಧಿಸಲು ಪೊಲೀಸರಿಗೆ ಸೂಚನೆ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ. ಆದರೆ, ರಾಜ್ಯ ಸರಕಾರ ರೈತರ ಸಾಲವನ್ನು ಮನ್ನಾ ಮಾಡಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಆದರೆ, ಕೇಂದ್ರ ಸರಕಾರದ ಹಿಡಿತದಲ್ಲಿ ಇರುವ ವಾಣಿಜ್ಯ ಬ್ಯಾಂಕ್‌ಗಳು ಪೊಲೀಸರಿಗೆ ಹೇಳಿ ರೈತರನ್ನು ಬಂಧಿಸಲು ಸೂಚನೆ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News