ಭಾವನಾತ್ಮಕ ವಿಚಾರಗಳೇ ಬಿಜೆಪಿಗೆ ಬಂಡವಾಳ: ಸಿದ್ದರಾಮಯ್ಯ

Update: 2018-11-19 15:20 GMT

ಬೆಂಗಳೂರು, ನ.19: ಮಂದಿರ, ಧರ್ಮ ಇನ್ನಿತರೆ ಭಾವನಾತ್ಮಕ ವಿಚಾರಗಳನ್ನೇ ಬಿಜೆಪಿ ಪಕ್ಷವು ಬಂಡವಾಳ ಮಾಡಿಕೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಹೇಳಿದರು.

ಸೋಮವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷರ ಅಧಿಕಾರ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿಯವರು ಬರೀ ಭಾವನಾತ್ಮಕ ವಿಷಯಗಳ ಬಗ್ಗೆ ಚರ್ಚೆ ಮಾಡೋದೆ ಕಾಯಕ ಮಾಡಿಕೊಂಡಿದ್ದಾರೆ. ಜನರ ಸಮಸ್ಯೆ ಬಗ್ಗೆ ಇದುವರೆಗೂ ಧ್ವನಿಗೂಡಿಸಿಲ್ಲ ಎಂದು ತಿಳಿಸಿದರು.

ಕೇರಳದ ಶಬರಿಮಲೆ ವಿವಾದದಲ್ಲೂ, ಮಹಿಳೆಯರಿಗೆ ಅವಕಾಶ ಬೇಡ ಎನ್ನುವ ಕಾರಣಕ್ಕೆ ಮಹಿಳೆಯರನ್ನು ಮುಂದೆ ಬಿಟ್ಟು ಬಿಜೆಪಿಯವರೇ ಹೋರಾಟ ಆರಂಭಿಸಿದ್ದಾರೆ. ತ್ರಿವಳಿ ತಲಾಖ್ ಸಂಬಂಧ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದರೂ, ಅದನ್ನು ಬಿಜೆಪಿ ರಾಜಕೀಯ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಪುಣ್ಯಾತ್ಮ ಮೋದಿ: ಪ್ರಧಾನಿ ನರೇಂದ್ರ ಮೋದಿ ಅವರು ನಾಲ್ಕು ವರ್ಷದ ಆಡಳಿತಾವಧಿಯಲ್ಲಿ ದೇಶದ ಜನತೆಗಾಗಿ ಏನನ್ನೂ ಮಾಡಿಲ್ಲ. ಮನ್ ಕೀ ಬಾತ್ ಎಂದು ಹೇಳುತ್ತಾರೆ. ಆದರೆ, ದೆಹಲಿಯ ಅಧಿವೇಶನದಲ್ಲಿ ಮಾತನಾಡಲ್ಲ. ಬ್ಯಾಂಕ್‌ಗಳಿಂದ ಸಾವಿರಾರು ಕೋಟಿ ರೂಪಾಯಿ ಕದ್ದು ಹೋದರೂ, ಪುಣ್ಯಾತ್ಮ ಮೋದಿ ಮಾತನಾಡಲಿಲ್ಲ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಕಾಂಗ್ರೆಸ್ ಎಂದರೆ ಸಾಮಾಜಿಕ ನ್ಯಾಯದ ಪಾಲಕರು. ಆದರೆ, ಬಿಜೆಪಿಯಲ್ಲಿ ಸಮನ್ವಯತೆ, ಸಹಬಾಳ್ವೆ ಇಲ್ಲ ಎಂದ ಅವರು, ಕಾಂಗ್ರೆಸ್ ಮಹಿಳೆಯರಿಗೆ ಸಮಾನ ಅವಕಾಶ ಕೊಟ್ಟಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಜಾರಿಗೆ ತಂದ ಸಂವಿಧಾನದ 73, 74 ನೇ ತಿದ್ದುಪಡಿಯಿಂದಲೇ ಮಹಿಳೆಯರಿಗೆ ಮೀಸಲಾತಿ ದೊರೆತಿದೆ ಎಂದರು.

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸಲಿದ್ದು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಆಗಲಿದ್ದಾರೆ ಎಂದು ಪುನರುಚ್ಚರಿಸಿದ ಅವರು, ಕಾಂಗ್ರೆಸ್ ಪಕ್ಷ ಈ ದೇಶಕ್ಕಾಗಿ ಹಲವು ಕೊಡುಗೆ ನೀಡಿದೆ. ಈ ಬಗ್ಗೆ ಜನರಿಗೆ ಅರಿವು, ಮಾಹಿತಿ ನೀಡುವ ಕೆಲಸವನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡಬೇಕು ಎಂದು ಸೂಚಿಸಿದರು.

ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಮಾತನಾಡಿ, ಮಹಿಳೆಯರಿಗೆ ಹೆಚ್ಚು ಪ್ರೋತ್ಸಾಹ ನೀಡಿದರೆ ಪಕ್ಷ ಸಂಘಟನೆಯಾಗುವುದರ ಜೊತೆಗೆ ದೇಶ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ನಿರ್ಗಮಿತ ಕಾಂಗ್ರೆಸ್ ಮಹಿಳಾ ಅಧ್ಯಕ್ಷ ಲಕ್ಷ್ಮೀ ಹೆಬ್ಬಾಳ್ಕರ್, ನೂತನ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಮಾಜಿ ಸಚಿವರಾದ ಆಂಜನೇಯ, ರಾಣಿ ಸತೀಶ್, ಎಚ್.ಎಂ. ರೇವಣ್ಣ, ಸತೀಶ್ ಜಾರಕಿಹೊಳಿ, ರಾಜಶೇಖರನ್, ಸಂಸದ ಧ್ರುವ ನಾರಾಯಣ್, ಶಾಸಕಿ ಸೌಮ್ಯರೆಡ್ಡಿ, ಮೇಯರ್ ಗಂಗಾಂಬಿಕೆ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಎಲ್ಲರಿಗೂ ಒಬ್ಬನೇ ದೇವರು

ದೇವರನ್ನು ನೋಡೋದಕ್ಕೆ ಲಿಂಗ ಭೇದ ಇರಬಾರದು. ಪುರಷರಿಗೆ ಒಬ್ಬ ದೇವರು, ಮಹಿಳೆಯರಿಗೆ ಒಬ್ಬ ದೇವರು ಎಲ್ಲಿದ್ದಾನೆ. ಇಡೀ ಜಗತ್ತಿಗೆ ಒಬ್ಬನೇ ದೇವರು.

-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

ಅಧಿಕಾರ ನಿಂತ ನೀರಲ್ಲ

ಅಧಿಕಾರ ಸದಾ ಒಬ್ಬರ ಹತ್ತಿರ ಇರಬಾರದು. ಅದು ನಿಂತ ನೀರಲ್ಲ. ಹೀಗಾಗಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಂದ ಪುಷ್ಪಾ ಅಮರನಾಥ್ ಅವರಿಗೆ ರಾಜ್ಯ ಮಹಿಳಾ ಅಧ್ಯಕ್ಷೀಯ ಸ್ಥಾನವನ್ನು ನೀಡಲಾಗಿದೆ. ಅಲ್ಲದೆ, ಮಹಿಳಾ ಕಾಂಗ್ರೆಸ್ಸಿನಲ್ಲಿ ಒಗ್ಗಟ್ಟಿಲ್ಲ. ಒಬ್ಬರಿಗೊಬ್ಬರು ಆರೋಪ ಮಾಡಿಕೊಳ್ಳುತ್ತಾರೆ ಎನ್ನುವ ಮಾತುಗಳು ಸುಳ್ಳು.

-ದಿನೇಶ್ ಗುಂಡೂರಾವ್, ಅಧ್ಯಕ್ಷ, ಕೆಪಿಸಿಸಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News