ನೀರು-ಮೇವಿನ ಕೊರತೆ ಉಂಟಾದರೆ ಅಧಿಕಾರಿಗಳೆ ಹೊಣೆ: ಸಚಿವ ದೇಶಪಾಂಡೆ ಎಚ್ಚರಿಕೆ

Update: 2018-11-19 15:40 GMT

ಬೆಂಗಳೂರು, ನ.19: ರಾಜ್ಯದ ಬರಪೀಡಿತ ಜಿಲ್ಲೆಗಳಲ್ಲಿ ಮೂರು ದಿನಗಳ ಕಾಲ ಅಧ್ಯಯನ ಪ್ರವಾಸ ಕೈಗೊಂಡಿದ್ದ ಕೇಂದ್ರ ಸರಕಾರದ ಉನ್ನತ ಅಧಿಕಾರಿ ಅಮಿತಾಭ್ ಗೌತಮ್ ನೇತೃತ್ವದ ತಂಡವು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರೊಂದಿಗೆ ಸಮಾಲೋಚನೆ ನಡೆಸಿತು.

ಸೋಮವಾರ ಇಲ್ಲಿನ ವಿಧಾನಸೌಧದಲ್ಲಿನ ಸಮಿತಿ ಕೊಠಡಿಯಲ್ಲಿ ಚರ್ಚಿಸಿದ ಕೇಂದ್ರ ತಂಡದ ಅಮಿತಾಭ್ ಗೌತಮ್, ತಮ್ಮ ಅಧ್ಯಯನ ಪ್ರವಾಸದಲ್ಲಿ ಬರಪೀಡಿತ ಜಿಲ್ಲೆಗಳಲ್ಲಿ ಕಂಡ ಚಿತ್ರಣ ಮತ್ತು ಪಡೆದುಕೊಂಡಿರುವ ಮಾಹಿತಿ, ಬರದ ತೀವ್ರತೆ, ಆಗಿರುವ ಬೆಳೆ ನಷ್ಟ, ಕುಡಿಯುವ ನೀರು, ಜಾನುವಾರುಗಳಿಗೆ ಮೇವು-ನೀರಿನ ಕೊರತೆ ಸಂಬಂಧಿಸಿದ ಮಾಹಿತಿ/ವಿವರ/ಅಂಕಿ-ಅಂಶಗಳನ್ನು ಹಂಚಿಕೊಂಡರು.

ಈ ಮಾತನಾಡಿದ ಕಂದಾಯ ಸಚಿವ ದೇಶಪಾಂಡೆ, ಬರ ಪರಿಸ್ಥಿತಿ ನಿಭಾಯಿಸಲು ರಾಜ್ಯ ಸರಕಾರವು ಕೈಗೊಂಡಿರುವ ಹಲವು ಉಪಕ್ರಮಗಳನ್ನು ವಿವರವಾಗಿ ತಿಳಿಸಿದರು. ಅಲ್ಲದೆ, ಎಸ್‌ಡಿಆರ್‌ಎಫ್/ಎನ್‌ಡಿಆರ್‌ಎಫ್ ಮಾನದಂಡಗಳ ಹಾಗೂ ಬರ ಕೈಪಿಡಿಯಲ್ಲಿ ಇರುವ ಕೆಲವು ವ್ಯತ್ಯಾಸಗಳನ್ನು ಸರಿಪಡಿಸಬೇಕಾದ ಅಗತ್ಯವನ್ನು ಗಮನಕ್ಕೆ ತಂದರು.

ಅಧಿಕಾರಿಗಳೇ ಹೊಣೆ: ಕೇಂದ್ರ ಬರ ಅಧ್ಯಯನ ತಂಡದೊಂದಿಗಿನ ಸಭೆಯ ನಂತರ ತಮ್ಮ ಅಧ್ಯಕ್ಷತೆಯ ಸಂಪುಟ ಉಪಸಮಿತಿ ಸಭೆ ನಡೆಸಿದ ದೇಶಪಾಂಡೆ, ‘ಬರಪೀಡಿತ ಜಿಲ್ಲೆಗಳಲ್ಲಿ ಕುಡಿಯುವ ನೀರು ಮತ್ತು ಮೇವಿನ ಕೊರತೆಯಾಗದಂತೆ ನೋಡಿಕೊಳ್ಳುವುದು ಜಿಲ್ಲಾಧಿಕಾರಿಗಳ ಮತ್ತು ಸಿಇಓಗಳ ಹೊಣೆಯಾಗಿದೆ. ಇದರ ಜತೆಗೆ ಜನರು ಗುಳೆ ಹೋಗದಂತೆ ಉದ್ಯೋಗವನ್ನು ಸೃಷ್ಟಿಸಬೇಕು. ಇಲ್ಲದಿದ್ದರೆ ಡಿಸಿ ಮತ್ತು ಸಿಇಓಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.

ಅಲ್ಲದೆ, ಬರ ಪರಿಸ್ಥಿತಿ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ನಿಯಮಿತವಾಗಿ ವಿಡಿಯೋ ಸಂವಾದ ನಡೆಸಲಾಗುವುದು. ಇನ್ನೊಂದೆಡೆ, ಅಭಿವೃದ್ಧಿ ಆಯುಕ್ತರು ಬರ ಪರಿಹಾರ ಕಾಮಗಾರಿಗಳ ಬಗ್ಗೆ ಪಶು ಸಂಗೋಪನಾ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಲಾಖೆ ಮುಂತಾದವುಗಳೊಂದಿಗೆ ಸಮಾಲೋಚನೆ/ಸಭೆ ನಡೆಸಬೇಕು ಎಂದು ಅವರು ತಾಕೀತು ಮಾಡಿದರು.      

ಬರಪೀಡಿತ ತಾಲೂಕುಗಳಲ್ಲಿ ಕುಡಿಯುವ ನೀರಿನ ಕೊರತೆಯಾಗದಂತೆ ತಲಾ 50 ಲಕ್ಷ ರೂ.ಬಿಡುಗಡೆ ಮಾಡಲಾಗಿದೆ. ಇನ್ನೂ ಹಣದ ಅಗತ್ಯವಿದ್ದರೆ ಕೂಡಲೇ ಸರಕಾರದ ಗಮನಕ್ಕೆ ತರಬೇಕು ಎಂದು ಸಚಿವ ದೇಶಪಾಂಡೆ ಇದೇ ಸಂದರ್ಭದಲ್ಲಿ ಹೇಳಿದರು.

ಪ್ರವಾಹ: ರಾಜ್ಯಕ್ಕೆ 546 ಕೋಟಿ ರೂ.ಬಿಡುಗಡೆ

‘ರಾಜ್ಯದ ಕೊಡಗು ಸೇರಿದಂತೆ ಕರಾವಳಿ ಭಾಗದ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಕ್ರಮಗಳನ್ನು ಒದಗಿಸಲು ಕೇಂದ್ರ ಸರಕಾರವು 546ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು, ರಾಜ್ಯದ 45 ತಾಲೂಕುಗಳಲ್ಲಿ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ನೆರವು ನೀಡಲು ಕೇಂದ್ರಕ್ಕೆ ಮನವಿ ಮಾಡಲಾಗಿತ್ತು. ನಮ್ಮ ಮನವಿಗೆ ಕೇಂದ್ರ ಸ್ಪಂದಿಸಿದೆ’

-ಆರ್.ವಿ.ದೇಶಪಾಂಡೆ ಕಂದಾಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News