ಬಿಬಿಎಂಪಿಯಲ್ಲಿ ನೈಸರ್ಗಿಕ ಮೂಲಗಳಿಂದ ವಿದ್ಯುತ್ ಉತ್ಪಾದನೆ: ದೇಶದಲ್ಲೇ ಪ್ರಥಮ

Update: 2018-11-19 15:46 GMT

ಬೆಂಗಳೂರು, ನ. 19: ಯಡಿಯೂರು ವಾರ್ಡ್ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಹಸಿ ತ್ಯಾಜ್ಯವನ್ನು ಬಳಸಿ ಯಡಿಯೂರು ಜೈವಿಕ ಅನಿಲ ಘಟಕದಲ್ಲಿ ಪ್ರತಿನಿತ್ಯ 50 ಕೆ.ಡಬ್ಲೂ ವಿದ್ಯುಚ್ಛಕ್ತಿ ಉತ್ಪಾದಿಸಲಾಗುತ್ತಿದೆ. ಇದರ ಮೂಲಕ ನೈಸರ್ಗಿಕ ಮೂಲಗಳಿಂದ ವಿದ್ಯುತ್ ಉತ್ಪಾದಿಸುವ ದೇಶದ ಪ್ರಥಮ ವಾರ್ಡ್ ಎಂಬ ಖ್ಯಾತಿ ಗಳಿಸಿದೆ.

ಇದರಿಂದ, ಯಡಿಯೂರು ವಾರ್ಡ್ ವ್ಯಾಪ್ತಿಯಲ್ಲಿರುವ 7 ಉದ್ಯಾನವನಗಳು ಮತ್ತು 3 ಕಿಲೋಮೀಟರ್ ಉದ್ದದ ಮಾದರಿ ಪಾದಚಾರಿ ಮಾರ್ಗಗಳಲ್ಲಿ ಇರುವ ವಿದ್ಯುತ್ ದೀಪಗಳನ್ನು ಮತ್ತು ಆಲಂಕಾರಿಕ ದೀಪಗಳನ್ನು ಬೆಳಗಿಸಲಾಗುತ್ತಿದ್ದು, ಪ್ರತಿ ತಿಂಗಳು ಬೆಸ್ಕಾಂ ಸಂಸ್ಥೆಗೆ ಪಾಲಿಕೆಯು ಪಾವತಿಸುತ್ತಿದ್ದ 1.75 ಲಕ್ಷದಷ್ಟು ವಿದ್ಯುತ್ ಶುಲ್ಕವನ್ನು ಉಳಿತಾಯ ಮಾಡಲಾಗುತ್ತಿದೆ.

ನವಂಬರ್ ತಿಂಗಳ ಅಂತ್ಯದೊಳಗೆ ಯಡಿಯೂರು ಜೈವಿಕ ಅನಿಲ ಘಟಕದಲ್ಲಿ ಪ್ರತಿ ನಿತ್ಯ 250 ಕೆ.ಡಬ್ಲೂ ವಿದ್ಯುಚ್ಛಕ್ತಿಯನ್ನು ಉತ್ಪಾದಿಸಲಾಗುತ್ತದೆ. 250 ಕೆ.ಡಬ್ಲೂ ವಿದ್ಯುಚ್ಛಕ್ತಿಯಿಂದ ಯಡಿಯೂರು ವಾರ್ಡ್ ವ್ಯಾಪ್ತಿಯಲ್ಲಿರುವ 17 ಪಾಲಿಕೆಯ ಕಟ್ಟಡಗಳು, 13 ಉದ್ಯಾನವನಗಳು ಮತ್ತು 3 ಕಿಲೋಮೀಟರ್ ಉದ್ದದ ಮಾದರಿ ಪಾದಚಾರಿ ಮಾರ್ಗಗಳಲ್ಲಿ ಇರುವ ವಿದ್ಯುತ್ ದೀಪಗಳು ಮತ್ತು ಆಲಂಕಾರಿಕ ದೀಪಗಳನ್ನು ಬೆಳಗಿಸುವುದರೊಂದಿಗೆ ಬೆಸ್ಕಾಂ ವಿದ್ಯುತ್ ಮುಕ್ತ ವಾರ್ಡ್ ಎಂಬ ಹಿರಿಮೆಗೆ ಪಾತ್ರವಾಗುವುದಲ್ಲದೇ, ಸ್ವಾವಲಂಬಿ-ನೈಸರ್ಗಿಕ ಮೂಲಗಳಿಂದ ವಿದ್ಯುತ್ ಉತ್ಪಾದಿಸುವ ಭಾರತದ ಪ್ರಥಮ ವಾರ್ಡ್ ಎಂಬ ಖ್ಯಾತಿಗೆ ಯಡಿಯೂರು ವಾರ್ಡ್ ಭಾಜನವಾಗಲಿದೆ.

ಈ ಯೋಜನೆಯು ಅನುಷ್ಠಾನಗೊಂಡ ನಂತರ ಬೆಸ್ಕಾಂ ಸಂಸ್ಥೆಗೆ ಪಾಲಿಕೆಯು ಪ್ರತಿ ತಿಂಗಳು ಪಾವತಿಸುತ್ತಿರುವ 3.1 ಲಕ್ಷದಷ್ಟು ವಿದ್ಯುತ್ ಶುಲ್ಕವು ಸಂಪೂರ್ಣವಾಗಿ ಉಳಿತಾಯವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News