ಕಾಲುಬಾಯಿ ರೋಗದ ಲಸಿಕೆ ಉತ್ಕೃಷ್ಟವಾಗಿದೆ: ರೈತ ಸಂಘ

Update: 2018-11-19 15:48 GMT

ಬೆಂಗಳೂರು, ನ.19: ಜಾನುವಾರುಗಳ ಕಾಲು-ಬಾಯಿ ಜ್ವರಕ್ಕೆ ನೀಡಲಾಗುತ್ತಿರುವ ಬಯೋವೆಟ್ ಕಂಪೆನಿಯ ಲಸಿಕೆ ಉತ್ಕೃಷ್ಟವಾಗಿದ್ದು, ಇದರಿಂದ ರೋಗ ವಾಸಿಯಾಗುತ್ತಿದೆ ಎಂದು ಬಯಲುಸೀಮೆ ರೈತ ಸಂಘ ಹಾಗೂ ಹಸಿರು ಸಮುದಾಯ ತಿಳಿಸಿದೆ.

ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಎ.ಅಶ್ವಥರೆಡ್ಡಿ, ಬಯೋವೆಟ್ ಸಂಸ್ಥೆ ನೀಡುತ್ತಿರುವ ಲಸಿಕೆ ಕಳಪೆ ಗುಣಮಟ್ಟದ್ದಾಗಿದೆ ಎಂಬ ಕೋಚಿಮುಲ್ ನಿರ್ದೇಶಕ ಕೆ.ವಿ.ನಾಗರಾಜ್ ಆರೋಪದಲ್ಲಿ ಯಾವುದೇ ಹುರುಳಿಲ್ಲ. ದುರುದ್ದೇಶಪೂರ್ವಕವಾಗಿ ಕಂಪನಿ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ನಾಲ್ಕು ವರ್ಷಗಳಿಂದ ಬಯೋವೆಟ್ ಸಂಸ್ಥೆ ಕೋಲಾರ-ಚಿಕ್ಕಬಳ್ಳಾಪುರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜಾನುವಾರಗಳಿಗೆ ಕಾಲುಬಾಯಿ ರೋಗದ ನಿಯಂತ್ರಕ ಲಸಿಕೆಯನ್ನು ಪೂರೈಕೆ ಮಾಡುತ್ತಾ ಬಂದಿದೆ. ಆದರೆ, ಲಸಿಕೆ ವಿರುದ್ಧ ವಿನಾಕಾರಣ ಅಪಪ್ರಚಾರ ಮಾಡಲಾಗುತ್ತಿದೆ. ಇದರ ಹಿಂದೆ ಲಸಿಕೆ ತಯಾರಿಸುವ ಇತರೆ ಕಂಪನಿಗಳ ಕೈವಾಡವಿದೆ ಎಂದು ಆರೋಪಿಸಿದರು.

ನಾಗರಾಜ್ ಹೈದರಾಬಾದ್ ಮೂಲದ ಇಂಡಿಯನ್ ಇಮ್ಯುನಲಾಜಿಕಲ್ಸ್ ಸಂಸ್ಥೆಯ ಪರವಾಗಿ ದನಿ ಎತ್ತುತ್ತಿದ್ದಾರೆ. ಆದರೆ, ಈ ಸಂಸ್ಥೆ 2013-2014ರಲ್ಲಿ ನೀಡಿದ ಲಸಿಕೆ ಪರಿಣಾಮಕಾರಿಯಾಗದೇ ರಾಜ್ಯದಲ್ಲಿ 14,400 ಜಾನುವಾರುಗಳು ಸಾವನ್ನಪ್ಪಿದ್ದವು. ಇದರಿಂದ ಸರಕಾರ ಹಾಗೂ ರೈತರಿಗೆ ನಷ್ಟವಾಯಿತೇ ಹೊರತು ಇಂಡಿಯನ್ ಇಮ್ಯುನಲಾಜಿಕಲ್ ಸಂಸ್ಥೆಗೆ ನಷ್ಟವಾಗಿಲ. ಅಲ್ಲದೆ, ಜಾನುವಾರು ಅಸು ನೀಗಿದ್ದಕ್ಕಾಗಿ ರಾಜ್ಯ ಸರಕಾರ ರೈತರಿಗೆ 2373.90 ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡಿತ್ತು ಎಂದರು.

ಪಶ್ಚಿಮಬಂಗಾಳ, ಮಹಾರಾಷ್ಟ್ರ, ಉತ್ತರಾಖಂಡ, ಹರಿಯಾಣ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಜಾನುವಾರುಗಳಿಗೆ ಬಯೋವೆಟ್ ಸಂಸ್ಥೆಯು ಲಸಿಕೆಯನ್ನು ಪೂರೈಕೆ ಮಾಡುತ್ತಿದೆ. ದೇಶಾದ್ಯಂತ ಕಂಪೆನಿಯು ಆರು ಕೋಟಿಗೂ ಹೆಚ್ಚು ಲಸಿಕೆಯನ್ನು ಪೂರೈಕೆ ಮಾಡಿದ್ದು, ರಾಜ್ಯದಲ್ಲಿ 2.10ಕೋಟಿ ಲಸಿಕೆಗಳನ್ನು ಪೂರೈಕೆ ಮಾಡಿದೆ. ಲಸಿಕೆಯು ವಿಫಲವಾಗಿದ್ದು, ಇದರಿಂದ ಜಾನುವಾರು ಸಾವನ್ನಪ್ಪುತ್ತಿವೆ ಎಂಬುದರ ಬಗ್ಗೆ ಯಾವುದೇ ಸಾಕ್ಷಾಧಾರಗಳಿಲ್ಲ ಎಂದು ವಿವರಣೆ ನೀಡಿದರು.

ಸುಳ್ಳು ಆರೋಪಗಳನ್ನು ಮಾಡುತ್ತಿರುವ ವ್ಯಕ್ತಿಗಳ ಗುಣಮಟ್ಟದ ಆಧಾರದ ಮೇಲೇಯೇ ಬಯೋವೆಟ್ ಸಂಸ್ಥೆ ಲಸಿಕೆಯನ್ನು ಉತ್ಪಾದನೆ ಮಾಡಿ ಪೂರೈಕೆ ಮಾಡುತ್ತಿದೆ. ಲಸಿಕೆಯಲ್ಲಿ ದೋಷವಿದೆ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಇದು ಕೇವಲ ದುರುದ್ದೇಶಪೂರ್ವಕವಾದದ್ದು, ಈ ಮೂಲಕ ಕಂಪನಿಯ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಗುಣಮಟ್ಟದ ದೃಢೀಕರಣ: ಭಾರತೀಯ ಸಂಶೋಧನಾ ಕೇಂದ್ರ ದೃಢಪಡಿಸಿರುವ ಆಧಾರದ ಮೇಲೆಯೇ ಬಯೋವೆಟ್ ಸಂಸ್ಥೆ ಲಸಿಕೆಯನ್ನು ಉತ್ಪಾದನೆ ಮಾಡಿ ಪೂರೈಕೆ ಮಾಡುತ್ತಿದೆ. ಆದರೆ, ಈ ಲಸಿಕೆಯನ್ನು ದೋಷವಿದೆ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಇದು ದುರುದ್ದೇಶಪೂರ್ವಕ ಎಂದು ರೈತ ಮುಖಂಡರ ಆರೋಪವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News